ನೀರು ಸಂಗ್ರಹಿಸಲು ಪರ್ಯಾಯ ವ್ಯವಸ್ಥೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 16
ಕೃಷ್ಣ ನ್ಯಾಯಾಧೀಕರಣದ ಪುನರ್ ಪರಿಶೀಲನಾ ಅರ್ಜಿ ಬಗ್ಗೆ ಅಂತಿಮ ತೀರ್ಪು ಬಂದ ನಂತರ ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹಿಸುವ ಕುರಿತ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಕ್ತಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ತಿಳಿ
ಸಿದ್ದಾರೆ.
ವಿಧಾನಪರಿಷತ್ ಅಧಿವೇಶನದಲ್ಲಿ ಬಳ್ಳಾರಿ ಜಿಲ್ಲೆಯ ಸಮಸ್ಯೆಗಳ ಕುರಿತು ತಾವು ಧ್ವನಿ ಎತ್ತಿರುವ ಬಗ್ಗೆ ಪ್ರಕಟಣೆ ನೀಡಿರುವ ಅವರು, ವರ್ಷದಿಂದ ವರ್ಷಕ್ಕೆ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ, ಪರ್ಯಾಯ ಯೋಜನೆ ಕುರಿತು ಪ್ರಶ್ನಿಸಿದಾಗ, ಸಚಿವ ಪಾಟೀಲ್ ಪ್ರತಿಕ್ರಿಯಿಸಿ, ಜಲಾಶಯದಿಂದ ಹರಿದು ಬರುವ ಹೆಚ್ಚುವರಿ ನೀರನ್ನು ಬಳಿಸಿಕೊಳ್ಳಲು, ಜಲಾಶಯ ಕೆಳಭಾಗದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಾಲ್ಕು ಸಮತೋಲನ ಜಲಾಶಯಗಳು ಹಾಗೂ ಪ್ರವಾಹ ಹರಿವು ಕಾಲುವೆ ನಿರ್ಮಿಸಲು ಚಿಂತಿಸಲಾಗಿದ್ದು, ಕೃಷ್ಣ ನ್ಯಾಯಾಧೀಕರಣ ಪುನರ್ ಪರಿಶೀಲನೆ ಅರ್ಜಿಯ ಬಗ್ಗೆ ಅಂತಿಮ ತೀರ್ಪು ಹೊರಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದಿದ್ದಾರೆ.
ಪರಿಹಾರ ನೀಡಲಾಗಿದೆ: ಜಿಲ್ಲೆಯಲ್ಲಿ ಕರಡಿ ದಾಳಿಗೊಳಗಾದ ವಿಷಯ ಹಾಗೂ ಪರಿಹಾರ ನೀಡಿರುವ ವಿಷಯಗಳ ಕುರಿತು ಪ್ರಶ್ನೆ ಕೇಳಲಾಗಿದ್ದು, ಜಿಲ್ಲೆಯಲ್ಲಿ 112 ಪ್ರಕರಣಗಳು ದಾಖಲಾಗಿರುವ ಬಗ್ಗೆ ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಮಾಹಿತಿ ನೀಡಿದ್ದು, ಇಬ್ಬರು ಸತ್ತಿರುವ ಬಗ್ಗೆ ತಿಳಿಸಿದರು. ಬೆಳೆ ಹಾನಿಯಾದವರಿಗೆ ರು. 2,29,829, ಪ್ರಾಣ ಹಾನಿಯಾದರಿಗೆ ರು. 10 ಲಕ್ಷ, ಗಾಯಗೊಂಡವರಿಗೆ ಒಟ್ಟಾರೆಯಾಗಿ ರು. 1,58,804 ಪರಿಹಾರ ರೂಪದಲ್ಲಿ ನೀಡಲಾಗಿದೆ. ಇನ್ನು ಕರಡಿದಾಳಿ ನಿಯಂತ್ರಣ ಕುರಿತು ಪ್ರತಿಕ್ರಿಯಿಸಿ, ಕೂಡ್ಲಿಗಿ ತಾಲೂಕಿನ ಗುಡೇಕೋಟೆಯನ್ನು ಕರಡಿ ಸಂರಕ್ಷಣಾ ಪ್ರದೇಶವೆಂದು ಘೋಷಿಸಲು ಪ್ರಸ್ತಾವನೆ ಇದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ. ಕರಡಿಗಳಿಗೆ ಎಲ್ಲ ಕಾಲಕ್ಕೂ ಆಹಾರ ಮತ್ತು ನೀರು ಸಿಗುವಂತೆ ಮಾಡಲು ಇಲಾಖೆ ವತಿಯಿಂದ ಹಣ್ಣಿನ ಗಿಡಗಳನ್ನು ನೆಡುವುದು, ನೀರು ಸಂರಕ್ಷಣಾ ಕಾಮಗಾರಿ ಕ್ರಮ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವರು ಉತ್ತರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಚತುಷ್ಪಥ ರಸ್ತೆ: ಹೊಸಪೇಟೆ- ಬಳ್ಳಾರಿ ಮಧ್ಯದ ರಾಷ್ಟ್ರೀಯ ಹೆದ್ದಾರಿ 63ರ ದುರಸ್ತಿ ಕುರಿತು ಧ್ವನಿ ಎತ್ತಿದಾಗ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯೆ ನೀಡಿ, ಹೊಸಪೇಟೆ- ಬಳ್ಳಾರಿ ರಸ್ತೆ ಹಾಳಾಗಿರುವುದು ಗಮನಕ್ಕೆ ಬಂದಿದ್ದು, ಸದರಿ ರಸ್ತೆಯನ್ನು ಚತುಷ್ಪದ ರಸ್ತೆಯನ್ನಾಗಿ ಅಭಿವಙೃದ್ಧಿಪಡಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಲಭ್ಯವಿರುವ ಅನುದಾನ ಆಧರಿಸಿ ಗುಂಡಿ ಮುಚ್ಚಿ, ರಸ್ತೆಯನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಸ್ಥಾನಗಳು ಹಾಗೂ ಅವುಗಳ ಭರ್ತಿಗೆ ಕ್ರಮ ಕೈಗೊಂಡಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಪ್ರಶ್ನಿಸಿದಾಗ, 44 ಹುದ್ದೆಗಳು ಖಾಲಿ ಇದ್ದು, ಯೋಜನಾ ನಿರ್ದೇಶಕರು (ಡಿಆರ್ಡಿಎ), ಸಹಾಯಕ ಯೋಜನಾಧಿಕಾರಿ (ಡಿಆರ್ಡಿಎ), ಲೆಕ್ಕಾಧಿಕಾರಿ - 2 ಹುದ್ದೆಗಳ ಖಾಲಿ ಇವೆ. ಈ ಹುದ್ದೆಗಳನ್ನು ಲಭ್ಯತೆಗೆ ಅನುಗುಣವಾಗಿ ಭರ್ತಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಮೃತ್ಯುಂಜಯ ಜಿನಗಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

