ಬಳ್ಳಾರಿ

ಕೋಟಿ ಅನುದಾನದಲ್ಲಿ ಲಕ್ಷ ಖರ್ಚು!

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 22
2009-10ರಿಂದ 2011-12ರ ಮೂರು ವರ್ಷಗಳ ಅವಧಿಯಲ್ಲಿ ಬಳ್ಳಾರಿ ಲೋಕಸಭಾ ಸದಸ್ಯೆಯಾದ ಜೆ. ಶಾಂತಾ ಅವರಿಗೆ ರು. 650 ಲಕ್ಷ ಅನುದಾನದಲ್ಲಿ ರು. 623.15 ಲಕ್ಷ ಮಂಜೂರು ಮಾಡಲಾಗಿದೆ. ಅದರಲ್ಲಿ ರು. 401.00 ಲಕ್ಷ ಅನುದಾನವನ್ನು ಮಾತ್ರ ಅವರು ಖರ್ಚು ಮಾಡಿದ್ದಾರೆ. ವಿಪರ್ಯಾಸವೆಂದರೆ 2010-11ರ ಅನುದಾನದಲ್ಲಿ ರು. 55 ಲಕ್ಷ ಖರ್ಚು ಮಾಡದ ಹಿನ್ನೆಲೆಯಲ್ಲಿ, 2012-13ನೇ ಅನುದಾನ ಬಿಡುಗಡೆಯಾಗಿಲ್ಲ. 2011-12ರ ಸಾಲಿನಲ್ಲಿ ರು. 250 ಲಕ್ಷ ಅನುದಾನದಲ್ಲಿ ರು. 244.50 ಲಕ್ಷ ಮಂಜೂರು ಮಾಡಲಾಗಿದೆ. ಅದರಲ್ಲಿ ಕೇವಲ ರು. 60 ಲಕ್ಷಗಳನ್ನು ಮಾತ್ರ ಖರ್ಚು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಅನುದಾನವನ್ನು ಇನ್ನು ಖರ್ಚು ಮಾಡಿಲ್ಲ.
ಸಮುದಾಯ ಭವನಕ್ಕೆ ಸಿಂಹಪಾಲು: ಮೂರು ವರ್ಷಗಳ ಅವಧಿಯಲ್ಲಿ ಸಂಸದೆ ಜೆ. ಶಾಂತಾ ಅವರು ರು. 6.50 ಕೋಟಿ ಅನುದಾನದಲ್ಲಿ ರು. 2.22 ಕೋಟಿಗಳನ್ನು ಕೇವಲ ಸಮುದಾಯ ಭವನಗಳ ನಿರ್ಮಾಣಕ್ಕೆ ಮೀಸಲಿರಿಸಿದ್ದಾರೆ. ಬಸ್ ತಂಗುದಾಣಕ್ಕೆ ರು. 1.94 ಕೋಟಿ ನೀಡಲಾಗಿದೆ. ವಿವಿಧ ರಸ್ತೆಗಳ ನಿರ್ಮಾಣಕ್ಕೆ ರು. 93.95 ಲಕ್ಷ, ರಂಗ ಮಂದಿರಕ್ಕೆ ರು. 5 ಲಕ್ಷ, ಶೌಚಾಲಯ ನಿರ್ಮಾಣಕ್ಕೆ ರು. 97.75 ಲಕ್ಷ, ವಿವಿಧ ಶಾಲೆಗಳ ಕೊಠಡಿಗಳ ನಿರ್ಮಾಣ, ಕಾಪೌಂಡ್ ಮತ್ತು ಮೈದಾನ ಅಭಿವೃದ್ಧಿಗೆ ರು. 5.25 ಲಕ್ಷ, ಇತರ ರು. 5 ಲಕ್ಷ ನೀಡಿದ್ದಾರೆ. ಬಸ್ ತಂಗುದಾಣ ಹಾಗೂ ಸಮುದಾಯ ಭವನಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಈ ಎರಡು ಕಾಮಗಾರಿಗಳಲ್ಲಿ ಯಾರ ಅನುದಾನ ಎಂಬುದು ನೇರವಾಗಿ ಸಾರ್ವಜನಿಕರಿಗೆ ಕೂಡಲೇ ತಿಳಿಯುತ್ತದೆ.
ಯಾವ ವರ್ಷ ಎಷ್ಟು ಖರ್ಚು?: 2010-11ರ ವರೆಗೆ ಲೋಕಸಭಾ ಸದಸ್ಯರಿಗೆ ಪ್ರತಿವರ್ಷ ಕೇವಲ ರು. 2 ಕೋಟಿ ಅನುದಾನ ನೀಡುತ್ತಿದ್ದರು. ಆದರೆ 2011-12ರಿಂದ ರು. 5 ಕೋಟಿ ಅನುದಾನ ನಿಗದಿಯಾಗಿದೆ. 2009-10ರಲ್ಲಿ ರು. 2 ಕೋಟಿ ಬಿಡುಗಡೆಯಾಗಿದ್ದು, ಅದನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದಾರೆ. ಆ ವರ್ಷದ ಅನುದಾನದಲ್ಲಿ ರು. 99 ಲಕ್ಷವನ್ನು ಸಮುದಾಯ ಭವನಕ್ಕೆ ವ್ಯಯಿಸಲಾಗಿದೆ. 2010-11ರಲ್ಲಿ ರು. 2 ಕೋಟಿಗಳಲ್ಲಿ ರು. 178.70 ಲಕ್ಷ ಬಿಡುಗಡೆಯಾಗಿದ್ದು, ಅದರಲ್ಲಿ ರು. 95.70 ಲಕ್ಷ ಬಸ್ ತಂಗುದಾಣಕ್ಕೆ ವ್ಯಯಿಸಿದ್ದಾರೆ. ಒಟ್ಟಾರೆ ರು. 145 ಲಕ್ಷಗಳನ್ನು ಸಂಸದರು ಖರ್ಚು ಮಾಡಿದ್ದಾರೆ. ಇನ್ನುಳಿದ ಹಣವನ್ನು ಖರ್ಚು ಮಾಡಬೇಕಾಗಿದೆ.
ಅಲ್ಲದೇ 2011-12ರಲ್ಲಿ ರು. 5 ಕೋಟಿ ಅನುದಾನವನ್ನು ಲೋಕಸಭಾ ಸದಸ್ಯರಿಗೆ ಬಿಡುಗಡೆ ಮಾಡುತ್ತಿದ್ದು, ಅದರಲ್ಲಿ ಮೊದಲ ಕಂತಾಗಿ ರು. 2.50 ಕೋಟಿ ಬಿಡುಗಡೆಯಾಗಿತ್ತು. ಆದರೆ ಅದರಲ್ಲಿ ಕೇವಲ ರು. 60 ಲಕ್ಷ ಮಾತ್ರ ವ್ಯಯಿಸಿದ್ದಾರೆ. ಇನ್ನುಳಿದ ಅನುದಾನವನ್ನು ಖರ್ಚು ಮಾಡಬೇಕಾಗಿರುವುದಲ್ಲದೇ ಬಾಕಿ ರು. 2.50 ಕೋಟಿ ಅನುದಾನ ಬಿಡುಗಡೆ ಆಗಬೇಕಾಗಿದೆ.
ಖರ್ಚು ಮಾಡಿದರೆ ಹೊಸ ಅನುದಾನ ಬಿಡುಗಡೆ: ಲೋಕಸಭಾ ಸದಸ್ಯರಿಗೆ ಬಿಡುಗಡೆಯಾದ ಅನುದಾನವನ್ನು ಸಂಸದರು ಸಮರ್ಪಕವಾಗಿ ಖರ್ಚು ಮಾಡದಿದ್ದರೆ ಹೊಸ ವರ್ಷದ ಅನುದಾನ ಬಿಡುಗಡೆಯಾಗುವುದಿಲ್ಲ. ನಿಯಮಗಳ ಪ್ರಕಾರ 2009-10ರ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಿದರೆ, 2010-11ರ ಅನುದಾನ ಇನ್ನು ಖರ್ಚು ಮಾಡದಿದ್ದರೂ 2011-12ರ ಅನುದಾನ ಬಿಡುಗಡೆ ಮಾಡುತ್ತಾರೆ. ಆದರೆ ಬಳ್ಳಾರಿ ಲೋಕಸಭಾ ಸದಸ್ಯೆ ಜೆ. ಶಾಂತಾ ಅವರು 2010-11ನೇ ಸಾಲಿನ ರು. 2 ಕೋಟಿಗಳಲ್ಲಿ ಇನ್ನು ರು. 55 ಲಕ್ಷ ಖರ್ಚು ಮಾಡಬೇಕಾಗಿರುವುದರಿಂದ 2012-13ನೇ ಸಾಲಿನ ಅನುದಾನವನ್ನು ಬಿಡುಗಡೆ ಮಾಡಿಲ್ಲ. ನಿಗದಿತ ಅನುದಾನವನ್ನು ಶೀಘ್ರಗತಿಯಲ್ಲಿ ಖರ್ಚು ಮಾಡಬೇಕಾಗಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಸದರು ಕಾರ್ಯಪ್ರವೃತ್ತರಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಬಂದ ಅನುದಾನವನ್ನು ಖರ್ಚು ಮಾಡಬೇಕಿದೆ.
ಅನುದಾನ ಬಿಡುಗಡೆ ವಿಧಾನ: ಸರ್ಕಾರದಿಂದ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಲೋಕಸಭಾ ಸದಸ್ಯರ ಅನುದಾನ ಬಿಡುಗಡೆಯಾಗುತ್ತದೆ. ಅನುದಾನ ಬಿಡುಗಡೆಯಾಗಿರುವ ಕುರಿತು ಲೋಕಸಭಾ ಸದಸ್ಯರಿಗೆ ಪತ್ರದ ಮೂಲಕ ಮಾಹಿತಿ ತಿಳಿಸುತ್ತಾರೆ. ಬಿಡುಗಡೆಯಾಗಿರುವ ಅನುದಾನಕ್ಕೆ ಸದಸ್ಯರು ಕಾಮಗಾರಿಗಳ ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ, ಕಾಮಗಾರಿಗಳನ್ನು ಏಜೆನ್ಸಿ ಅವರಿಗೆ ಕೊಡಲಾಗುತ್ತದೆ. ಕಾಮಗಾರಿಯ ಹೊಣೆ ಹೊತ್ತ ಏಜೆನ್ಸಿಯವರು ಕಾಮಗಾರಿ ವೆಚ್ಚದ ಮಾಹಿತಿ (ಎಸ್ಟಿಮೇಟ್)ನ್ನು ನೀಡಿದರೆ ಜಿಲ್ಲಾಡಳಿತ ಆಡಳಿತಾತ್ಮಕ ಅನುಮೋದನೆ ನೀಡುತ್ತದೆ. ಆರಂಭಿಕವಾಗಿ ಕಾಮಗಾರಿಯ ಒಟ್ಟು ವೆಚ್ಚದ ಶೇ. 75ರಷ್ಟು ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಕಾಮಗಾರಿ ಪೂರ್ಣಗೊಳಿಸಿದ ನಂತರ, ಹಣ ಬಳಕೆ ಪ್ರಮಾಣ ಪತ್ರ, ಕಾಮಗಾರಿಯ ಪೂರ್ಣ ಮಾಹಿತಿ ನೀಡಿದರೆ ಇನ್ನುಳಿದ ಶೇ. 25ರಷ್ಟು ಹಣವನ್ನು ಬಿಡುಗಡೆ ಮಾಡುತ್ತಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ, ವಿವಿಧ ಯೋಜನೆಗಳಡಿ ಸರ್ಕಾರಗಳು ಸಂಸದರ ನಿಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿರುವುದು ಮೇಲಿನ ಅಂಕಿ ಅಂಶಗಳಿಂದ ತಿಳಿಯುತ್ತದೆ. ಆದರೆ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರು ಬಂದ ಅನುದಾನವನ್ನು ಯಾವ ರೀತಿ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳಿಗೆ ಬಳಸಿಕೊಂಡಿದ್ದಾರೆ? ಇನ್ನು ಎಷ್ಟು ಅನುದಾನ ಬಳಕೆಯಾಗದೇ ಹಾಗೆಯೇ ಉಳಿದಿದೆ? ಆ ಮೂಲಕ ಸಂಸದರಿಗೆ ಕ್ಷೇತ್ರದ ಬಗ್ಗೆ ಎಷ್ಟೊಂದು ಕಾಳಜಿ ಇದೆ ಎಂದು ತಿಳಿಯುತ್ತದೆ.

ನಾವು ಲೋಕಸಭೆಗೆ ಹಾಗೂ ವಿಧಾನಸಭೆಗೆ ಶಾಸಕರನ್ನು, ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡುತ್ತೇವೆ. ಅವರ ಕ್ಷೇತ್ರದ ವ್ಯಾಪ್ತಿಗೆ ಆಯಾ ಸರ್ಕಾರಗಳಿಂದ ಎಷ್ಟು ಅನುದಾನ ಬಂದಿದೆ? ಅವರು ಕ್ಷೇತ್ರಕ್ಕಾಗಿ, ಜನಪರ, ಅಭಿವೃದ್ಧಿ ಕಾರ್ಯಗಳಿಗಾಗಿ ಎಷ್ಟು ಖರ್ಚು ಮಾಡಿದ್ದಾರೆ? ಎಂಬ ಮಾಹಿತಿ ಬಹುತೇಕರಿಗೆ ಗೊತ್ತಿರುವುದಿಲ್ಲ. ಆದರೆ 'ಕನ್ನಡಪ್ರಭ' ಜಿಲ್ಲೆಯ ಸಂಸದರು, ಶಾಸಕರಿಗೆ ಸರ್ಕಾರಗಳಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ? ಎಷ್ಟು ಅನುದಾನ ಖರ್ಚು ಮಾಡಿದ್ದಾರೆ, ಯಾವ ಕಾಮಗಾರಿಗಳನ್ನು ಹೆಚ್ಚಾಗಿ ಕೈಗೊಂಡಿದ್ದಾರೆ ಎಂಬುದರ ಕುರಿತು ಮಾಹಿತಿಯನ್ನು ನಿಮ್ಮ ಮುಂದೆ ಒದಗಿಸುವ ಪ್ರಯತ್ನ ಮಾಡುತ್ತಿದೆ. ಕಳೆದ ಬಾರಿಯ ಜಿಲ್ಲೆಯ ಶಾಸಕರ ಐದು ವರ್ಷಗಳ ಅನುದಾನ, ಖರ್ಚಿನ ಮಾಹಿತಿ, ಸಂಸದರ ಮೂರು ವರ್ಷಗಳ ಅನುದಾನ, ಖರ್ಚಿನ ಮಾಹಿತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತಿದೆ. ಇಂದು ಬಳ್ಳಾರಿ ಲೋಕಸಭಾ ಸದಸ್ಯೆ ಜೆ. ಶಾಂತಾ ಅವರ ಅನುದಾನ ಕುರಿತಾದ ವರದಿ ನಿಮ್ಮ ಮುಂದಿದೆ.
-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.