ಬಳ್ಳಾರಿ

ಬಾಂಗ್ಲಾ ಬಾಲಕಿಯರ ಮಾರಾಟ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 23
ಕೇವಲ ರು. 20 ರಿಂದ 30 ಸಾವಿರಕ್ಕೆ ಬಾಂಗ್ಲಾದೇಶದ ಬಾಲಕಿಯರ ಮಾರಾಟ!
ಇದು ಆಶ್ಚರ್ಯ ಎನಿಸಿದರೂ ಸತ್ಯ. ಅದು ನಡೆದದ್ದು, ಗಣಿ ನಾಡು ಬಳ್ಳಾರಿಯಲ್ಲಿ. ವೇಶ್ಯಾವಾಟಿಕೆ ದಂಧೆಯಲ್ಲಿ ಹೆಣ್ಣು ಮಕ್ಕಳ ಮಾರಾಟವು ನಡೆಯುತ್ತಿದೆ ಎಂಬ ಭಯಾನಕ ಮಾಹಿತಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಮಾರಾಟ ಜಾಲವು ಬಾಂಗ್ಲಾದೇಶದ ಢಾಕಾ, ಕೊಲ್ಕತಾದಿಂದ ಬಳ್ಳಾರಿಯವರೆಗೆ ಹಬ್ಬಿರುವ ಶಂಕೆ ವ್ಯಕ್ತವಾಗುತ್ತಿದೆ.
ಬಳ್ಳಾರಿ ಇತಿಹಾಸದಲ್ಲಿ ದೊಡ್ಡ ದಾಳಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಯುತ್ತಿತ್ತು. ಹತ್ತಾರು ಮಹಿಳೆಯರನ್ನು, ಹುಡುಗಿಯರನ್ನು ಪೊಲೀಸರು ಬಂಧಿಸುತ್ತಿದ್ದರೂ, ಅವರೆಲ್ಲರೂ ಆಂಧ್ರಪ್ರದೇಶ ಹೈದ್ರಾಬಾದ್, ಮಹಾರಾಷ್ಟ್ರದ ಮುಂಬೈ ಸೇರಿದಂತೆ ದೇಶದ ವಿವಿಧ ಕಡೆಯವರಿದ್ದರು. ಇತ್ತೀಚೆಗೆ ಬಳ್ಳಾರಿ ಇತಿಹಾಸದಲ್ಲಿ ದೊಡ್ಡದಾದ ದಾಳಿಯನ್ನು ಬಳ್ಳಾರಿಯ ರೆಡ್ ಲೈಟ್ ಏರಿಯಾ ಎಂದು ಕರೆಯಲ್ಪಡುವ ಡಿಸಿ ನಗರದ ಮೇಲೆ ದಾಳಿ ಮಾಡಿ, 78 ಜನರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರಿಗೆ ಸಾಮಾನ್ಯವಾಗಿ ಇವರೆಲ್ಲಾ ಕರ್ನಾಟಕ ಹಾಗೂ ನೆರೆಯ ರಾಜ್ಯದವರೆಂದು ತಿಳಿದಿದ್ದರೂ, ವಿಚಾರಣೆ ಸಂದರ್ಭದಲ್ಲಿ ವಶಕ್ಕೆ ತೆಗೆದುಕೊಂಡಿರುವವರ 23 ಬಾಲಕಿಯರಲ್ಲಿ ಮೂವರು ಬಾಂಗ್ಲಾದೇಶದವರು ಎಂಬ ಮಾಹಿತಿ ಸಿಕ್ಕಿತ್ತು.
ಕೇವಲ 30 ಸಾವಿರಕ್ಕೆ ಮಾರಾಟ: 78 ಜನರಲ್ಲಿ 34 ಜನರ ವಿರುದ್ಧ ಕೇಸು ದಾಖಲಿಸಿರುವ ಪೊಲೀಸರು ಅದರಲ್ಲಿ 44 ಮಹಿಳೆಯರನ್ನು ವೇಶ್ಯಾವಾಟಿಕೆಯಿಂದ ರಕ್ಷಣೆ ಮಾಡಿದ್ದರು. ಇವರಲ್ಲಿ 23 ಬಾಲಕಿಯರನ್ನು ಬೆಂಗಳೂರಿನ ಬಾಲಮಂದಿರದಲ್ಲಿ ಇನ್ನುಳಿದಂತೆ 21 ಮಹಿಳೆಯರನ್ನು ಬಳ್ಳಾರಿಯ ಸ್ತ್ರೀ ಸೇವಾನಿಕೇತನದಲ್ಲಿ ಇಟ್ಟಿದ್ದು, ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರಲ್ಲಿ 20 ಮಹಿಳೆಯರನ್ನು ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಬಾಂಗ್ಲಾದೇಶದ 14, 16, 17 ವರ್ಷದ ಮೂವರು ಬಾಲಕಿಯರನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಅವರನ್ನು ಕೇವಲ ರು. 20 ರಿಂದ 30 ಸಾವಿರಕ್ಕೆ ಮಾರಾಟ ಮಾಡಿದ್ದಾರೆ, ತಮಗೆ ತಾವು ಎಲ್ಲಿದ್ದೇವೆ ಎಂಬುದು ಗೊತ್ತಿಲ್ಲ ಎನ್ನುವ ಮಾಹಿತಿಯನ್ನು ವಿಚಾರಣೆಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಡೀ ಜೀವನವೇ ಬರಡು: ವಿದೇಶದ ಇಂಥ ಬಾಲಕಿಯರನ್ನು ಒಟ್ಟಾರೆಯಾಗಿ ಬ್ರೋಕರ್‌ಗಳು ತಂದು ಇಂತಿಷ್ಟು ಹಣಕ್ಕೆಂದು ಮಾರಾಟ ಮಾಡಿ ಹೋಗುತ್ತಾರೆ. ಇವರು ಜೀವನ ವೇಶ್ಯಾವಾಟಿಕೆಗೆ ಮೀಸಲು, ಅವರನ್ನು ಕೊಂಡಿರುವವರು ಇವರನ್ನು ಯಾವ ರೀತಿಯಾಗಿ ಬಳಸಿಕೊಳ್ಳಬಹುದು, ಇನ್ನು ಅವರಿಗೆ ಇಡೀ ಜೀವನವೇ ಬರಡಾಗುತ್ತದೆ. ಕೇವಲ ರು. 30 ಸಾವಿರಕ್ಕಾಗಿ ಇಡೀ ಹೆತ್ತವರು, ರಕ್ತ ಸಂಬಂಧವಿಲ್ಲದೆ, ಇಡೀ ಜೀವನ ಪರ್ಯಂತ ಇಂಥ ದಂಧೆಯಲ್ಲಿಯೇ ಕಳೆಯುತ್ತಾರೆ. ಅದೃಷ್ಟವಶಾತ್ ಬಳ್ಳಾರಿ ಪೊಲೀಸರು ಜಸ್ಟೀಸ್ ಅಂಡ್ ಕೇರ್ ಎನ್‌ಜಿಒ ಮಾಹಿತಿಯ ಮೇರೆಗೆ ದಾಳಿ ಮಾಡಿ, ಬಾಲಕಿಯರನ್ನು ರಕ್ಷಣೆ ಮಾಡಿದ್ದಾರೆ.
ಬೇಡಿಕೆ ಅನುಸಾರ ಮಾರಾಟ: ಬಳ್ಳಾರಿಯ ವೇಶ್ಯಾವಾಟಿಕೆ ಜಾಲವು ಕೇವಲ ಬಳ್ಳಾರಿಗೆ, ರಾಜ್ಯಕ್ಕೆ ಸೀಮಿತವಾಗಿಲ್ಲ, ಕೊಲ್ಕತ್ತಾದವರೆಗೆ ಹಬ್ಬಿದೆ. ಇಲ್ಲಿನ ಡಿಸಿ ನಗರದ ಬ್ರೋಕರ್‌ಗಳ ಬೇಡಿಕೆಗೆ ಅನುಸಾರವಾಗಿ ಕೊಲ್ಕತ್ತಾದ ಬ್ರೋಕರ್‌ಗಳು ಇವರಿಗೆ ಬಾಂಗ್ಲಾದೇಶದ ಬಾಲಕಿಯರನ್ನು ತಂದು ಮಾರಾಟ ಮಾಡಿದ್ದಾರೆ. ಈ ಬಾಲಕಿಯರಿಗೆ ಯಾವುದೇ ಪಾಸ್‌ಪೋರ್ಟ್‌ಗಳಿಲ್ಲ. ಆ ದೇಶದ ಬಡಯುವತಿಯರನ್ನು ಇಂಥ ದಂಧೆಗೆ ಬಳಸಿಕೊಂಡಿರಬಹುದು ಅಥವಾ ಅಲ್ಲಿಂದ ಬಲವಂತವಾಗಿ ಕರೆತಂದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ವೇಶ್ಯಾವಾಟಿಕೆ ಚಟುವಟಿಕೆಯಲ್ಲಿ ಮಹಿಳೆಯರು ಒಂದು ಸರಕಾಗಿ ಬಳಕೆಯಾಗುತ್ತಿದ್ದಾರೆ. ಇದೀಗ ಕೊಲ್ಕತ್ತಾ ಬ್ರೋಕರ್ ಪತ್ತೆಗಾಗಿ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.
ಸರ್ಕಾರ ನೀಡಿದ ಮನೆಯಲ್ಲಿ ದಂಧೆ: ಬಳ್ಳಾರಿಯ ಬೆಳಗಲ್ ರಸ್ತೆಯಲ್ಲಿರುವ ಡಿಸಿ ನಗರದಲ್ಲಿ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇನ್ನು ಡಿಸಿ ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದು ಸರ್ಕಾರದಿಂದ ಕಟ್ಟಿಸಿಕೊಂಡಿರುವ ಜನತಾ ಮನೆಗಳಲ್ಲಿ, ಪೊಲೀಸರು ಇಂಥ ಮನೆಗಳನ್ನು ಗುರುತಿಸಿ, ಅವುಗಳನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕೆಂದು ಎಸ್ಪಿ ಡಾ. ಚೇತನಸಿಂಗ್ ರಾಥೋರ್ ಅವರು ಜಿಲ್ಲಾಧಿಕಾರಿ ಬಿಸ್ವಾಸ್ ಅವರಿಗೆ ಪತ್ರ ಬರೆದು, ಡಿಸಿ ನಗರದಲ್ಲಿ ವೇಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ಕಡಿವಾಣ ಹಾಕಲು ಮುಂದಾಗಿದ್ದಾರೆ.
-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.