ಬಳ್ಳಾರಿ

ಕ್ರೀಡೆಗಳಿಂದ ಆತ್ಮಶಕ್ತಿ ಜಾಗ್ರತ: ಹಿರೇಮಠಶ್ರೀ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಆ. 29
ಕ್ರೀಡೆಗಳು ಕೇವಲ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ಆತ್ಮಶಕ್ತಿಯನ್ನು ಜಾಗೃತಗೊಳಿಸಿ ಸದಾ ಉತ್ಸಾಹದಿಂದಿರಲು  ಸಹಕಾರಿ ಎಂದು ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತಸಾಗರ ಶಿವಾಚಾರ್ಯರು ಅಭಿಪ್ರಾಯಿಸಿದರು.
ಅವರು ಹಿರೇಮಠ ವಿದ್ಯಾಪೀಠದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪಿಯು ವಿದ್ಯಾರ್ಥಿಗಳ ಕ್ರೀಡಾಕೂಟದ ಕ್ರೀಡಾಜ್ಯೋತಿ ಬೆಳಗಿಸಿ ನಂತರ ಮಾತನಾಡಿದರು. ಇಂದು ಕ್ರೀಡೆಗಳು ತನ್ನ ಪರಂಪರೆಯ ವೈಭವವನ್ನು ಕಳೆದುಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಕ್ರೀಡೆಗಳತ್ತ ಆಸಕ್ತಿವಹಿಸದಿರುವುದು ವಿಪರ್ಯಾಸ. ಇಂದಿನ ಯುವಕರು ಚೈತನ್ಯಶೀಲರಾಗಲು ಕ್ರೀಡೆಗಳು ಪೂರಕವಾಗಿವೆ. ಕ್ರೀಡಾನಿಯಮಗಳನ್ನು ಅರಿತು ಕ್ರೀಡಾಪಟುಗಳು ಭಾಗವಹಿಸಬೇಕೆ ವಿನಃ ಸೋಲು, ಗೆಲವು ಮುಖ್ಯವಲ್ಲ ಎಂದರು.
ವಂಚಿತ: ಕ್ರೀಡಾ ಧ್ವಜಾರೋಹಣ ಮಾಡಿದ ಬಳ್ಳಾರಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಬ್ದುಲ್ ರಶೀದ್ ಮಾತನಾಡಿ, ಕ್ರೀಡೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಅದೆಷ್ಟೋ ಪ್ರತಿಭೆಗಳು ಅವಕಾಶವಿಲ್ಲದೆ ವಂಚಿತರಾಗಿದ್ದಾರೆ. ಅಂತಹ ಪ್ರತಿಭೆಗಳಿಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಸಿಗಬೇಕಾದರೆ ಕ್ರೀಡಾಕೂಟಗಳು ಹೆಚ್ಚು ನಡೆಯಬೇಕಿದೆ. ಆದರೆ ಇಂದು ವಿದ್ಯಾರ್ಥಿಗಳು ಕ್ರೀಡೆಗಳ ಬಗ್ಗೆ ಒಲವು ಇಲ್ಲದಿರುವುದು ದುರಂತ. ಉಪನ್ಯಾಸಕರು ಮಕ್ಕಳ ಆಸಕ್ತಿಯನ್ನು ಅವಲೋಕಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯ ಮಾಡಬೇಕಿದೆ ಎಂದು ಅಬ್ದುಲ್ ರಶೀದ್ ಉಪನ್ಯಾಸಕರಿಗೆ ಕರೆ ನೀಡಿದರು.
ತಹಸೀಲ್ದಾರ್ ಪ್ರಮೋದ್, ತಾಪಂ ಅಧ್ಯಕ್ಷೆ ಮಂಗಳಮ್ಮ ಚಿನ್ನಾಪ್ರಪ್ಪ, ಹಿರೇಮಠ ವಿದ್ಯಾಪೀಠದ ಆಡಳಿತಾಧಿಕಾರಿ ಅಂಗಡಿ ವೀರೇಶ್, ಪ್ರಾಚಾರ್ಯ ಸಿದ್ದರಾಮ ಹಿರೇಮಠ, ಟಿ. ಕೊತ್ಲಮ್ಮ, ಪಾಲ್ತೂರ್ ಜಯರಾಜ್, ಉಪನ್ಯಾಸಕರಾದ ಸುರೇಶ್ ಮುದ್ದೇಬಿಹಾಳ, ಚಿತ್ತರಂಜನ್, ದೇವಪ್ಪ ಮುಂತಾದವರು ಉಪಸ್ಥಿತರಿದ್ದರು.
ತಾಲೂಕಿನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮರಿದೇವರಮಠ, ಹಿರೇಮಠ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಹಿರೇಮಠ ಕಾಲೇಜು ಪ್ರಾಚಾರ್ಯ ಸಿದ್ದರಾಮ ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕ ಅರವಿಂದ ಕುಲಕರ್ಣಿ ನಿರೂಪಿಸಿದರು. ದೇವಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.