ಬಳ್ಳಾರಿ

ವಿತ್ತ ಹಂಚಿಕೆ: ಇಂದ್ರನಾಗದ ನಾಗೇಂದ್ರ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 31
2008ರ ವಿಧಾನಸಭಾ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ  ಆಯ್ಕೆಯಾಗಿದ್ದ, ಈ ಬಾರಿ ಪಕ್ಷೇತರನಾಗಿ ಆಯ್ಕೆಯಾಗಿರುವ ಬಿ. ನಾಗೇಂದ್ರ ಅವರು ಕೂಡ ಶಾಸಕರ ಅನುದಾನ ಬಳಕೆಯಲ್ಲಿ ಹಿಂದೆ ಇದ್ದಾರೆ.
ಐದು ವರ್ಷಗಳ ಅವಧಿಯಲ್ಲಿ ರು. 2.49 ಕೋಟಿ ಬಳಕೆ ಮಾಡಿದ್ದು, ಇನ್ನು ರು. 2.25 ಕೋಟಿ ಬಳಕೆ ಮಾಡಬೇಕಾಗಿದೆ. ಇವರು ತಮ್ಮ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.
ಕಳೆದ ಬಾರಿ ರಾಷ್ಟ್ರೀಯ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕ ನಾಗೇಂದ್ರ, ಈ ಬಾರಿ ಕ್ಷೇತ್ರದ ಮತದಾರರು ಪಕ್ಷೇತರನನ್ನಾಗಿ ಪುನರಾಯ್ಕೆ ಮಾಡಿದ್ದಾರೆ. ಅವರು ತಮ್ಮ ಅನುದಾನದಲ್ಲಿ ರು. 247.91 ಲಕ್ಷವನ್ನು ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ ನೀಡಿದ್ದಾರೆ. 2008-09ನೇ ಸಾಲಿನಲ್ಲಿ ರು. 140 ಲಕ್ಷ, 2009-10ರಲ್ಲಿ ರು. 10 ಲಕ್ಷ, 2010-11ರಲ್ಲಿ ರು. 18.97 ಲಕ್ಷ, 2011-12ರಲ್ಲಿ ರು. 54.20 ಲಕ್ಷ, 2012-13ರಲ್ಲಿ ರು. 24.65 ಲಕ್ಷ ಮೀಸಲಿಟ್ಟಿದ್ದಾರೆ. ಇನ್ನು ಸಮುದಾಯ ಭವನಕ್ಕೆ ಐದು ವರ್ಷದಲ್ಲಿ ರು. 123.97 ಲಕ್ಷ ನೀಡಿದ್ದಾರೆ. 2008-09ರಲ್ಲಿ ರು. 5 ಲಕ್ಷ, 2009-10ರಲ್ಲಿ ರು. 39.89 ಲಕ್ಷ, 2010-10ರಲ್ಲಿ ರು. 23.05 ಲಕ್ಷ, 2011-12ರಲ್ಲಿ ರು. 28.09 ಲಕ್ಷ, 2012-13ರಲ್ಲಿ ರು. 27.94 ಲಕ್ಷ ನೀಡಿದ್ದಾರೆ.
ಹಿಂದೆ ಬಿದ್ದ ಶಾಸಕ: ಕೂಡ್ಲಿಗಿ ಶಾಸಕ ನಾಗೇಂದ್ರ ಅವರಿಗೆ ಐದು ವರ್ಷಗಳಲ್ಲಿ ರು. 475 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ರು. 249.28 ಲಕ್ಷ ಬಳಕೆ ಮಾಡಿ, ರು. 225.72 ಲಕ್ಷ ಬಳಕೆ ಮಾಡದೇ ಹಾಗೆಯೇ ಬಿಟ್ಟಿದ್ದಾರೆ. 2008-09ರಲ್ಲಿ ರು. 150 ಲಕ್ಷಗಳಲ್ಲಿ ರು. 141.53 ಲಕ್ಷ, 2009-10ರಲ್ಲಿ ರು. 50 ಲಕ್ಷ ಬಿಡುಗಡೆಯಾಗಿದ್ದು, ರು. 37.89 ಲಕ್ಷ ಬಳಸಿದ್ದಾರೆ. 2010-11ರಲ್ಲಿ ರು. 100 ಲಕ್ಷ ಮಂಜೂರು ಮಾಡಲಾಗಿದ್ದು, ಅದರಲ್ಲಿ ರು. 43.17 ಲಕ್ಷ ಮಾತ್ರ ಬಳಕೆಯಾಗಿದ್ದು, ಇನ್ನು ರು. 56.83 ಲಕ್ಷ ಬಳಕೆ ಮಾಡಬೇಕಾಗಿದೆ. 2011-12ರಲ್ಲಿ   ರು. 100 ಲಕ್ಷ ಬಿಡುಗಡೆಯಾಗಿದ್ದು, ಅದರಲ್ಲಿ ಕೇವಲ ರು. 24.11 ಲಕ್ಷ ಬಳಕೆ ಮಾಡಿದ್ದು, ರು. 75.89 ಲಕ್ಷ ಹಾಗೆಯೇ ಉಳಿದಿದೆ. 2012-13ರಲ್ಲಿ ರು. 75 ಲಕ್ಷ ಮಂಜೂರಾಗಿದ್ದು, ಅದರಲ್ಲಿ ಕೇವಲ ರು. 2.68 ಲಕ್ಷ ಬಳಕೆ ಮಾಡಿದ್ದು, ರು. 72.32 ಲಕ್ಷ ಬಳಕೆಯಾಗಿಲ್ಲ.
ಅನುದಾನ ಹಂಚಿಕೆ: ನಾಗೇಂದ್ರ ಅವರು ತಮ್ಮ ಅನುದಾನವನ್ನು ಕ್ಷೇತ್ರದಲ್ಲಿ ವಿವಿಧ 9 ಕಾಮಗಾರಿಗಳಿಗೆ ಹಂಚಿಕೆ ಮಾಡಿದ್ದಾರೆ. ರಸ್ತೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನದಲ್ಲಿ ಆದ್ಯತೆ ನೀಡಿದ್ದಾರೆ. ಬಸ್ ತಂಗುದಾಣಕ್ಕೆ ರು. 6 ಲಕ್ಷ, ಚರಂಡಿ ನಿರ್ಮಾಣಕ್ಕೆ ರು. 3.19 ಲಕ್ಷ, ಚೆಕ್ ಡ್ಯಾಂ ನಿರ್ಮಾಣಕ್ಕೆ ಲಕ್ಷ ರು., ಕುಡಿಯುವ ನೀರಿನ ಕಾಮಗಾರಿಗೆ ರು. 4 ಲಕ್ಷ, ರಂಗ ಮಂದಿರಕ್ಕೆ ರು. 4 ಲಕ್ಷ, ಶೌಚಾಲಯ ನಿರ್ಮಾಣಕ್ಕೆ ರು. 8.54 ಲಕ್ಷ, ಶಾಲಾ ಕೊಠಡಿ ನಿರ್ಮಾಣ, ಕಾಂಪೌಂಡ್ ಮತ್ತು ಮೈದಾನ ಅಭಿವೃದ್ಧಿಗೆ ರು. 1.50 ಲಕ್ಷ, ಇತರೆ ಕಾಮಗಾರಿಗಳಿಗೆ ರು. 15.10 ಲಕ್ಷ ನೀಡಿದ್ದಾರೆ.
ಕೈ ಹಿಡಿದ ಮತದಾರ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 4 ಕ್ಷೇತ್ರದಲ್ಲಿ ಗೆಲವು ಸಾಧಿಸಿದರೆ, ಬಿಜೆಪಿ 1, ಬಿಎಸ್ಸಾರ್ 2, ಜೆಡಿಎಸ್ 1 ಕ್ಷೇತ್ರದಲ್ಲಿ ಜಯ ಕಂಡಿವೆ. ಕೂಡ್ಲಿಗಿ ಕ್ಷೇತ್ರದಲ್ಲಿ ಮಾತ್ರ ಶಾಸಕ ನಾಗೇಂದ್ರ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯನ್ನು ಕ್ಷೇತ್ರದ ಜನತೆ ಕೈ ಹಿಡಿದಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಅನುದಾನವನ್ನು ವಿಶೇಷ ರೀತಿಯಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಬೇಕಿದೆ ಶಾಸಕ ನಾಗೇಂದ್ರ.
ತೃಪ್ತಿಕರವಿಲ್ಲ ಅನುದಾನ ಬಳಕೆ
10 ದಿನಗಳಿಂದ 'ಕನ್ನಡಪ್ರಭ' ಕಳೆದ ಅವಧಿಯ ಜಿಲ್ಲೆಯ 9 ಕ್ಷೇತ್ರಗಳ ಶಾಸಕರ ಹಾಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಂದ ಅನುದಾನ ಬಳಕೆ, ಹಂಚಿಕೆ ವಿವರ ಹಾಗೂ ಬಳಕೆ ಪ್ರಮಾಣವನ್ನು ಓದುಗರ ಮುಂದೆ ಇಡುವ ಪ್ರಯತ್ನ ಮಾಡಿದೆ. ದುರಂತವೆಂದರೆ ಜಿಲ್ಲೆಯ ಯಾವೊಬ್ಬ ಶಾಸಕರಾಗಲಿ ಹಾಗೂ ಸಂಸದರಾಗಲಿ ತಮ್ಮ ಅನುದಾನವನ್ನು ನಿಗದಿತ ಅವಧಿಯಲ್ಲಿ ಸಂಪೂರ್ಣವಾಗಿ ಬಳಕೆ ಮಾಡಿಲ್ಲ. ಅನುದಾನ ಬಳಕೆಗೆ ಶಾಸಕರು, ಸಂಸದರು ಕೇವಲ ಕಾಮಗಾರಿ ಪ್ರಸ್ತಾವನೆ ಸಲ್ಲಿಸಿದರೆ ಸಾಲದು, ಕಾಮಗಾರಿಯ ಪ್ರಗತಿ, ಕಾಮಗಾರಿ ಪೂರ್ಣಗೊಂಡಿರುವ ಅಂಶಗಳನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡಿದರೆ ಮಾತ್ರ ಅನುದಾನ ಬಳಕೆಯೊಂದಿಗೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಜತೆಗೆ ಜನತೆಯಲ್ಲಿ ಶಾಸಕರ, ಸಂಸದರ ಬಗ್ಗೆ ನಂಬಿಕೆ, ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ. ಸಂಸದರ 3 ವರ್ಷಗಳ ಹಾಗೂ ಶಾಸಕರ 5 ವರ್ಷದ ಅವಧಿಯಲ್ಲಿ ಜಿಲ್ಲೆಗೆ ಸುಮಾರು ರು. 50.25 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಕೇವಲ ರು. 28.26 ಕೋಟಿ ಬಳಕೆ ಮಾಡಲಾಗಿದೆ.

ಹಿಂದೆ ಬೀಳಲು ಕಾರಣ
ಹಲವು ಕಾರಣಗಳಿಂದ ಅನುದಾನ ಬಳಕೆಯಲ್ಲಿ ವಿಳಂಬವಾಗುತ್ತದೆ. ಇದಕ್ಕೆ ಶಾಸಕರು ಹಾಗೂ ಸಂಸದರೇ  ಕಾರಣ ಎಂದು ಹೇಳಲು ಬರುವುದಿಲ್ಲ. ಆದರೆ ಅನುದಾವನ್ನು ಸೂಕ್ತ ಅವಧಿಯಲ್ಲಿ ಪೂರ್ಣ ಬಳಕೆಗೆ ಶಾಸಕರು, ಸಂಸದರು ಮನಸ್ಸು ಮಾಡಿದರೆ ಸಾಧ್ಯ ಎಂಬ ಮಾತನ್ನೂ ತಳ್ಳಿ ಹಾಕುವಂತಿಲ್ಲ. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯವಹಿಸಿದರೆ, ಅವರ ಮೇಲೆ ಹಿಡಿತ ಸಾಧಿಸಿ, ಅದನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬಹುದು. ಅನುದಾನ ಬಂದ ಮೇಲೆ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲು ಜನಪ್ರತಿನಿಧಿಗಳು ತಿಂಗಳನ್ನು ತೆಗೆದುಕೊಳ್ಳುವುದು, ಕಾಮಗಾರಿಗಳು ನಿಯಮ ಬಾಹಿರವಾಗಿರುವ ಸಂದರ್ಭದಲ್ಲಿ ಅದನ್ನು ಪರಿಶೀಲನೆ ನಡೆಸಿ, ಬೇರೆ ಕಾಮಗಾರಿಗಳನ್ನು ನೀಡುವಂತೆ ಸೂಚಿಸುವುದು, ಶಾಸಕರು, ಸಂಸದರಿಂದ ಚೇಂಜ್ ಆಫ್ ವರ್ಕ್ಸ್, ಕಾಮಗಾರಿ ನಿರ್ಮಾಣದ ಜವಾಬ್ದಾರಿ ಹೊತ್ತ ಎಂಜಿನೀಯರ್ ಹಾಗೂ ಅಧಿಕಾರಿಗಳು ಎಸ್ಟಿಮೇಟ್ ನೀಡದಿರುವುದು, ಆಡಳಿತಾತ್ಮಕ ಅನುಮೋದನೆ ನೀಡಿದಾಗ ಶೇ. 75ರಷ್ಟು ಹಣ ಬಿಡುಗಡೆ ಮಾಡುತ್ತಾರೆ, ಆದರೆ ಕಾಮಗಾರಿ ಪೂರ್ಣಗೊಂಡ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡದೆ, ಇನ್ನುಳಿದ ಶೇ. 25ರಷ್ಟು ಹಣ ಅನುದಾನದಲ್ಲಿ ಬಳಕೆಯಾಗದಂತೆ ಉಳಿಯುವುದು ಸೇರಿ ಹಲವು ಕಾರಣಗಳಿಗಾಗಿ ಅನುದಾನ ಬಳಕೆ ಮಾಡಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಈ ಬಗ್ಗೆ ಸಂಸದರು, ಶಾಸಕರು ಕಾಳಜಿ ವಹಿಸಿದರೆ ಅನುದಾನವನ್ನು ನಿಗದಿತ ಅವಧಿಯಲ್ಲಿ ಬಳಕೆ ಮಾಡುವುದು ಅಷ್ಟು ಕಷ್ಟದ ಕೆಲಸವಲ್ಲ ಎಂಬುದನ್ನು ಜನಪ್ರತಿನಿಧಿಗಳು ಅರಿತಾಗ ಮಾತ್ರ ಅನುದಾನ ನಿಗದಿತ ಅವಧಿಯಲ್ಲಿ ಸಂಪೂರ್ಣ ಬಳಸಲು ಸಾಧ್ಯ.

 ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.