ಬಳ್ಳಾರಿ

ಖಾತ್ರಿ ರು. 41 ಲಕ್ಷ ಲೂಟಿ: ತನಿಖೆಗೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಡಿ. 2
ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾದ ರು. 41,75,600 ಅನುದಾನವನ್ನು ಮಾಕನಡುಕು ಗ್ರಾಮ ಪಂಚಾಯಿತಿ ದುರುಪಯೋಗಪಡಿಸಿಕೊಂಡಿದೆ. ಈ ಕುರಿತಂತೆ ಕೂಡಲೇ ತನಿಖೆ ಮಾಡಬೇಕು ಎಂದು ಕೊಟ್ಟೂರಿನ ಮಾಜಿ ಶಾಸಕ ಕೆ.ವಿ. ರವೀಂದ್ರನಾಥಬಾಬು ಒತ್ತಾಯಿಸಿದ್ದಾರೆ.
ಈ ಸಂಬಂಧ  ಸೋಮವಾರ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚಿಕ್ಕಜೋಗಿಹಳ್ಳಿಯನ್ನು ಕೇಂದ್ರವಾಗಿರಿಸಿಕೊಂಡು ಅಲ್ಲಿನ ಜವಾಹರ್ ನವೋದಯ ಶಾಲೆಯ ಆವರಣದೊಳಗೆ ಸಸಿಗಳನ್ನು ನೆಟ್ಟಿರುವ ಬಗ್ಗೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಇದಕ್ಕೆಂದು ಮೀಸಲಾದ ರು. 1,49,440 ಬಿಡುಗಡೆ ಮಾಡಲಾಗಿದೆ. ಆದರೆ, ಜವಾಹರ್ ನವೋದಯ ಶಾಲೆ ಪ್ರಾಚಾರ್ಯರು ಶಾಲಾ ಆವರಣದೊಳಗೆ ಯಾವುದೇ ಸಸಿ  ನೆಟ್ಟಿಲ್ಲ ಎಂದು ಸ್ಪಷ್ಟಪಡಿಸಿ ಸಂಬಂಧಪಟ್ಟವರಿಗೆ ಪತ್ರ ರವಾನಿಸಿದ್ದಾರೆ. ಉದ್ಯೋಗ ಖಾತ್ರಿಯಡಿ ಸಸಿ ನೆಡುವ ಕಾರ್ಯಕ್ರಮವನ್ನು ನಮೂದಿಸಿ ಗ್ರಾಪಂ ಪಿಡಿಒ ಮತ್ತು ಕೆಲ ಪುಡಾರಿಗಳು ಈ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ. ಇದರಂತೆ ಅನೇಕ ಕಡೆ ಕಾಮಗಾರಿ ಮಾಡಿರುವುದಾಗಿ ನಕಲಿ ದಾಖಲಿ ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಚಿಕ್ಕಜೋಗಿಹಳ್ಳಿ ಸಮುದಾಯ ಆರೋಗ್ಯಕೇಂದ್ರದ ಒಳಾವರಣದಲ್ಲಿ ಇದೇ ಸಸಿ ನೆಡುವ ಕಾರ್ಯಕ್ರಮಕ್ಕೆಂದು ಹಣವನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ 200 ಸಸಿಗಳನ್ನು  ನೆಡಲಾಗಿದೆ ಎಂದು ನಮೂದಿಸಿ ಒಂದು ಸಸಿಗೆ ರು. 140 ಗಳಂತೆ ಹಣವನ್ನು ವ್ಯಯಿಸಿರುವುದು ಗ್ರಾಪಂ ದಾಖಲಾತಿಗಳಲ್ಲಿ ವಿವರಿಸಲಾಗಿದೆ. ಇಲ್ಲಿಯೂ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಿಗಾಗಲೀ ಅಥವಾ ಸಿಬ್ಬಂದಿಯವರಿಗಾಗಲಿ ಸಸಿಗಳನ್ನು ನೆಟ್ಟಿರುವ ಮಾಹಿತಿಯೆ ಇಲ್ಲವಾಗಿದೆ ಎಂದು ದೂರಿದರು. ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ಗೋಕಟ್ಟೆಗಳನ್ನು ನಿರ್ಮಿಸಲಾಗಿದೆ ಎಂದು ಭಾರಿ ಮೊತ್ತದ ಹಣವನ್ನು ಗ್ರಾಮ ಪಂಚಾಯಿತಿ ವ್ಯಯಿಸಿದೆ. ಯಾವುದೇ ಸ್ಥಳದಲ್ಲಿ ಗೋಕಟ್ಟೆ ನಿರ್ಮಾಣ ಮಾಡಿದ ಮಾಹಿತಿ ಯಾರಿಗೂ ಇಲ್ಲವಾಗಿದೆ. ಈ ಕಾಮಗಾರಿಯಲ್ಲಿಯೂ ಭಾರಿ ಮೊತ್ತದ ಅನುದಾನ ದುರುಪಯೋಗವಾಗಿದೆ ಎಂದು ಅವರು ಆರೋಪಿಸಿದರು.
ದೂರು ದಾಖಲು:  ಮಾಕನಡುಕು ಗ್ರಾಮಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಮಾಹಿತಿ ಕೇಳಲು ಚಿಕ್ಕಜೋಗಿಹಳ್ಳಿಯ ಗ್ರಾಮಹಿತರಕ್ಷಾ ಸಮಿತಿ ಹೇಮೇಶ್ ತೆರಳಿದಾಗ ಗ್ರಾಪಂ ಬಿಲ್ ಕಲೆಕ್ಟರ್ ಪ್ರಕಾಶ್ ಮತ್ತು ಜಲಂದರ್ ಎನ್ನುವವರು ಕೊಲೆಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಅವರು, ಸಂಬಂಧ ಹೇಮೇಶ್ ಹೊಸಹಳ್ಳಿ ಪೊಲೀಸ್ ಠಾಣೆಗೆ ಕಳೆದ 16ರಂದು ದೂರು ಸಲ್ಲಿಸಿದ್ದಾರೆ.
ಕುಮಾರಸ್ವಾಮಿಗೆ ದೂರು: ಮಾಕನಡಕು ಗ್ರಾಮಪಂಚಾಯಿತಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ತನಿಖೆಯಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ವಿರೋಧ ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿಯವರ ಗಮನ ಸೆಳೆದಿದ್ದೇನೆ. ತನಿಖೆಯಲ್ಲಿ ಸತ್ಯಾಸತ್ಯಗಳು ಹೊರ ಬೀಳುವುದು ನಿಶ್ಚಿತ ಎಂದು ಮಾಜಿ ಶಾಸಕ ಕೆ.ವಿ. ರವೀಂದ್ರನಾಥ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.