ಸಂಭ್ರಮದ ಎರ್ರಿತಾತ ಪಲ್ಲಕ್ಕಿ ರಥೋತ್ಸವ
ಬಳ್ಳಾರಿ: ತಾಲೂಕಿನ ಚೇಳ್ಳಗುರ್ಕಿ ಶ್ರೀ ಎರ್ರಿತಾತನವರ ಮುತ್ತಿನ ಪಲ್ಲಕ್ಕಿ ರಥೋತ್ಸವ ಸೋಮವಾರ ಸಂಜೆ ಅಪಾರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು. ಕಳೆದ ವರ್ಷದಂತೆ ಈ ಬಾರಿಯೂ ಬಳ್ಳಾರಿ, ಕೊಪ್ಪಳ, ರಾಯಚೂರು, ಗದಗ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ನೆರೆಯ ಆಂಧ್ರಪ್ರದೇಶದ ಅನಂತಪುರ, ಕರ್ನೂಲು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಮುತ್ತಿನ ಪಲ್ಲಕ್ಕಿ ರಥೋತ್ಸವದಲ್ಲಿ ಭಾಗವಹಿಸಿದ್ದರು. ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಅಭಿಷೇಕ, ಅರ್ಚನೆ ಮತ್ತು ಮಹಾನ್ಯಾಸಪೂರ್ವಕ ಅಷ್ಠೋತ್ತರ ಶಂಖಾಭಿಷೇಕ ಪೂಜೆ, ಮಹಾಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮುತ್ತಿನ ಪಲ್ಲಕ್ಕಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿವಿಧೆಡೆಗಳಿಂದ ಆಗಮಿಸಿದ ಎಲ್ಲ ಭಕ್ತರಿಗೆ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಚನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ 2012-13ನೇ ಸಾಲಿಗೆ ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಜಿಲ್ಲೆಯಲ್ಲಿ 5 ವರ್ಷಗಳಿಂದ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸಂಸ್ಥೆಗಳು, ಮಹಿಳಾ ಅಭಿವೃದ್ಧಿ, ಕ್ರೀಡೆ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ, ವಿಶೇಷ ಕಾರ್ಯ ಸಾಧನೆ ಮಾಡಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಡಿ. 6ರೊಳಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಸ್.ಪಿ. ಸರ್ಕಲ್, ದೇವಿನಗರ, ಬಳ್ಳಾರಿ ( ದೂ. 08392-266219) ಸಂಪರ್ಕಿಸಬೇಕೆಂದು ಉಪ ನಿರ್ದೇಶಕ ಬಿ.ಎಸ್. ಕಲಾದಗಿ ತಿಳಿಸಿದ್ದಾರೆ.
ಅಭಿವೃದ್ಧಿಗೆ ಎಲ್ಲರ ಶ್ರಮ ಅಗತ್ಯ
ಬಳ್ಳಾರಿ: ಮಾಚಿದೇವ ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುವುದು ಅಗತ್ಯ ಎಂದು ಸಂಘದ ಗೌರವಾಧ್ಯಕ್ಷ ಎ.ಆರ್. ಮಂಜುನಾಥ ಹೇಳಿದರು. ತಾಲೂಕಿನ ಮೋಕಾ ಗ್ರಾಮದಲ್ಲಿ ಏರ್ಪಡಿಸಿದ್ದ ಮಲ್ಲಿಗೆ ಮಾತಾಶ್ರೀ ಮಡಿವಾಳರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಚಿತ್ರದುರ್ಗ ಮಹಾಮಠದ ಬಸವ ಮಾಚಿದೇವ ಸ್ವಾಮೀಜಿ ಸಂಘಕ್ಕೆ ಚಾಲನೆ ನೀಡಿದರು. ಜಿಲ್ಲಾ ಮಡಿವಾಳರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎ. ಹನುಮಂತಪ್ಪ, ಎ. ರಾಮಣ್ಣ ಮಾತನಾಡಿದರು. ಎ. ಬಸವರಾಜ, ಕೆ. ನಾಗರಾಜ, ಎ. ರಾಘವೇಂದ್ರ ನಿರ್ವಹಿಸಿದರು.
ನಂದಿನಿ ಹಾಲಿನ ಜಾಗೃತಿ ಶಿಬಿರ
ಬಳ್ಳಾರಿ: ನಗರದ ಸಂತ ಜೋಸೆಫ್ರ ಬಾಲಕರ ಶಾಲೆಯಲ್ಲಿ ರಾಯಚೂರು ಬಳ್ಳಾರಿ ಮತ್ತು ಕೊಪ್ಪಳ ಹಾಲು ಒಕ್ಕೂಟದಿಂದ ನಂದಿನಿ ಹಾಲಿನ ಬಗ್ಗೆ ಜಾಗೃತಿ ಶಿಬಿರ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾ. ಸುನೀಲ್ ಮಾತನಾಡಿ, ಶುದ್ಧ ಹಾಲು ಉತ್ಪಾದನೆ, ಪೌಷ್ಟಿಕಾಂಶದ ಬಗ್ಗೆ, ಕಲಬೆರಕೆ ಹಾಲಿನ ಕುರಿತು ಮಾಹಿತಿ ನೀಡಿದರು. ಫಾದರ್ ಐವನಿ ಪಿಂಟೋ, ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಕುಮಾರ್ ಮಾತನಾಡಿದರು. ಜಯ ಮೇರಿ, ಎರಿಸ್ವಾಮಿ ರೆಡ್ಡಿ, ಮುರಳಿಧರ್, 600 ವಿದ್ಯಾರ್ಥಿಗಳು ಇದ್ದರು. ನಾಗರಾಜ್ ಶರ್ಮ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

