ಆಳುವವರಿಗೆ ಅಸಮಾನತೆ ವಿಷಯ ಅರ್ಥವಾಗದು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 4
ಆಳ್ವಿಕೆ ಮಾಡುವವರಿಗೆ ಕುರ್ಚಿ ಮತ್ತು ಅಧಿಕಾರ ನಡೆಸುವುದು ಬಿಟ್ಟರೆ, ಅಸಮಾನತೆ ವಿಷಯಗಳು ಅರ್ಥವಾಗುವುದಿಲ್ಲ ಎಂದು ಐಎಂಎ ರಾಜ್ಯಾಧ್ಯಕ್ಷ ಡಾ. ಯೋಗಾನಂದ ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಎಐಎಂಎಸ್‌ಎಸ್, ಎಐಡಿಎಸ್‌ಒ, ಎಐಡಿವೈಒ ಜಂಟಿಯಾಗಿ ನಗರದ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಆಗ್ರಹಿಸಿ ವಿದ್ಯಾರ್ಥಿ ಯುವಜನ ಮಹಿಳೆಯರ ಸಮಾವೇಶದಲ್ಲಿ ಮಾತನಾಡಿ, ಸಮಾಜ, ಸಮಾನತೆ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಆಳ್ವಿಕೆ ಮಾಡುವವರೆ ಅಧಿಕಾರಕ್ಕಾಗಿ ರಾಜಕೀಯದಲ್ಲಿ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಸಮಾಜವನ್ನು ಸುಸ್ಥಿತಿಯಲ್ಲಿಡಲು ವಿದ್ಯಾರ್ಥಿ, ಯುವಜನರ ಪಾಲುದಾರಿಕೆ ಅತ್ಯಗತ್ಯ ಎಂದರು.
ಪ್ರತಿರೋಧ ಒಡ್ಡಬೇಕು: ಜನಸಾಮಾನ್ಯರ ಸಮಸ್ಯೆ ಕೂಗು ಎಲ್ಲರಿಗೂ ಮುಟ್ಟಲು ಇಂತಹ ಸಮಾವೇಶಗಳು, ಹೋರಾಟಗಳು ಅವಶ್ಯಕ. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ. ಇದರ ಬಗ್ಗೆ ಮೌನವಹಿಸುವುದು ಕೆಟ್ಟದ್ದು. ಇಂತಹ ಘಟನೆಗಳು ನಡೆದಾಗ ಸಂಘಟನೆಗಳು ಪ್ರತಿರೋಧ ಒಡ್ಡುವ ಮೂಲಕ ಸಮಾಜದಲ್ಲಿ ಇಂತಹ ಘಟನೆಗಳಿಗೆ ತೀವ್ರ ವಿರೋಧ ಒಡ್ಡಬೇಕು. ಅಪರಾಧಗಳನ್ನು ವಿರೋಧಿಸುವ ಧ್ವನಿ ಪ್ರಬಲವಾಗಬೇಕು ಎಂದು ತಿಳಿಸಿದರು.
ಮನಃಸಾಕ್ಷಿ ಕಲಕಿದೆ: ಡಾ. ಎಚ್.ಜಿ. ಜಯಲಕ್ಷ್ಮಿ ಮಾತನಾಡಿ, ನಿರ್ಭಯಾ ಪ್ರಕರಣದಂತಹ ಘಟನೆಗಳು ಪ್ರಜ್ಞಾವಂತರ ಮನಃಸಾಕ್ಷಿ ಕಲಕಿದೆ. ತೀವ್ರ ಸಂಕಟದ ಮಧ್ಯೆಯೂ ನಾನು ಬದುಕಬೇಕು, ಬದುಕಿ ಅಪರಾಧಿಗಳಿಗೆ ಶಿಕ್ಷೆಯಾಗುವುದನ್ನು ನೋಡಬೇಕು ಎನ್ನುವ ಹೋರಾಟದ ಮನೋಭಾವನೆಯೇ ಅವಳಿಗೆ ನಿರ್ಭಯಾ ಎನ್ನುವ ಹೆಸರನ್ನು ತಂದುಕೊಟ್ಟಿತು ಎಂದರು.
ನ್ಯಾಷನಲ್ ಕ್ರೈಮ್ಸ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ಸಂಗ್ರಹಿಸಿದ ಮಾಹಿತಿಯಂತೆ ಪ್ರತಿವರ್ಷ 2.5 ಲಕ್ಷ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಈಡಾಗುತ್ತಿದ್ದರೆ, ಇದರಲ್ಲಿ ಮನೆಯೊಳಗೆ ನಡೆಯುವ ಅಪರಾಧಗಳು 1 ಲಕ್ಷಕ್ಕೂ ಅಧಿಕ ಎಂದು ಅಂಕಿ ಅಂಶಗಳನ್ನು ಡಾ. ಜಯಲಕ್ಷ್ಮೀ ವಿವರಿಸಿದರು.
ಹೆಣ್ಣುಮಕ್ಕಳನ್ನು ಭೋಗದ ವಸ್ತುವನ್ನಾಗಿ ಕಾಣುವ ವಿಕೃತಿ ಒಂದೆಡೆಯಾದರೆ, ನಮ್ಮದು ಭವ್ಯವಾದ ಸಂಸ್ಕೃತಿಯೆನ್ನುತ್ತಲೆ ಅವರನ್ನು ಗುಲಾಮರನ್ನಾಗಿಸುವ ಪ್ರಯತ್ನಗಳು ಸಮಾಜದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಎಐಡಿಎಸ್‌ಒ ರಾಜ್ಯಾಧ್ಯಕ್ಷ ವಿ.ಎನ್. ರಾಜಶೇಖರ್, ಸ್ತ್ರೀ ಸುರಕ್ಷಾ ಸಮಿತಿ ಸಂಘಟಕರಾದ ಡಾ. ಅರುಣಾರಾವ್, ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷ ಎಂ.ಎನ್. ಮಂಜುಳಾ ಮಾತನಾಡಿದರು. ಎಐಡಿವೈಒ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಪ್ರಾಸ್ತಾವಿಕ ಮಾತನಾಡಿದರು.
ಇತ್ತೀಚಿಗೆ ನಿಧನರಾದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯಾಧ್ಯಕ್ಷರಾಗಿದ್ದ ಪ್ರತಿಭಾಕುಮಾರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಡಾ. ಪ್ರಮೋದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

