ಬಳ್ಳಾರಿ

10 ವರ್ಷಗಳಲ್ಲಿ 62 ರೈತರ ಆತ್ಮಹತ್ಯೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 4
ರೈತ ದೇಶದ ಬೆನ್ನೆಲುಬು, ಅನ್ನದಾತ ಎಂತೆಲ್ಲ ಕರೆಯಿಸಿಕೊಳ್ಳುತ್ತಾನೆ. ಆದರೆ ದೇಶಕ್ಕೆ ಅನ್ನ ಅಳೆಯುವ ಇದೇ ಅನ್ನದಾತನಿಗೆ ಸುರಕ್ಷತೆ ಇಲ್ಲದಾಗಿದೆ. ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ, ರಸಗೊಬ್ಬರ, ಮಳೆ ಇಲ್ಲದೆ ನಷ್ಟ, ಸಾಲಬಾಧೆ ಹೀಗೆ ಸಾಲು ಸಾಲು ಸಮಸ್ಯೆಗಳಿಂದ ನಲುಗಿರುವ ಕೃಷಿಕನ ಆತ್ಮಹತ್ಯೆ ಮಾತ್ರ ನಿರಂತರ ನಡೆಯುತ್ತಿದೆ.
ಮಳೆ, ಬಿಸಿಲು, ಚಳಿ ಎನ್ನದೆ ಕೆಲಸ ಮಾಡಿದ ರೈತನಿಗೆ ಮಾತ್ರ ಕಷ್ಟ ಬಂದಾಗ ಆಸರೆ, ಅನುಕಂಪ ಇಲ್ಲದೆ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗುತ್ತಿರುವುದು ದುರುಂತವೇ ಸರಿ. ರೈತರ ಆತ್ಮಹತ್ಯೆಗಳು ದೇಶಾದ್ಯಂತ ಸಾವಿರಾರು ನಡೆಯುತ್ತವೆ. ಅಂತೆಯೇ ಬಳ್ಳಾರಿ ಜಿಲ್ಲೆಯೊಂದರಲ್ಲೇ 10 ವರ್ಷಗಳ ಅವಧಿಯಲ್ಲಿ 62 ರೈತರು ಹಲವಾರು ಸಂಕಷ್ಟಗಳನ್ನು ಎದುರಿಸಲಾಗದೆ ಸಾವಿಗೆ ಕೊರಳೊಡ್ಡಿದ್ದಾರೆ. ಉತ್ತಮ ಬೆಳೆ ನಿರೀಕ್ಷೆಯಲ್ಲಿ ಒಂದಲ್ಲ ಒಂದು ದಿನ ಸುದಿನ ಬರಲಿದೆ ಎಂಬ ಆಶಾಭಾವದೊಂದಿಗೆ  ಹಲವು ರೈತರು ಯತ್ನ ಮುಂದುವರಿಸಿದ್ದಾರೆ. ಆದರೆ ಅನೇಕರು ಸಮಸ್ಯೆ ಎದುರಿಸಲಾಗದೇ ಆತ್ಮಹತ್ಯೆಗೆ ಶರಣೆಂದಿದ್ದಾರೆ.
ಸರ್ಕಾರ ಕಣ್ಣೀರೊರೆಸಲಿ: ರೈತನಿಗೆ ಧೈರ್ಯ ತುಂಬುವ ಕೆಲಸ ಸರ್ಕಾರದಿಂದ ಆಗುತ್ತಿಲ್ಲ. ರೈತನಿಗೆ ಆತ್ಮಹತ್ಯೆ ಮಾಡಿಕೊಂಡಾಗ ಮಾತ್ರ ಪರಿಹಾರ ಘೋಷಣೆ ಮಾಡಿ, ಒಂದೆರಡು ಹನಿ ಕಣ್ಣೀರು ಹಾಕುವುದನ್ನು ಬಿಟ್ಟರೆ ರೈತರ ಕಣ್ಣೀರು ಒರೆಸುವುದಕ್ಕೆ ಸರ್ಕಾರ ಮುಂದಾಗುತ್ತಿಲ್ಲ.
ಪ್ರತಿ ವರ್ಷದ ಆರಂಭದಲ್ಲೇ ಉತ್ತಮ ಮಳೆ, ಬೆಳೆ ನಿರೀಕ್ಷೆಯನ್ನಿಟ್ಟುಕೊಂಡು ಬಿತ್ತನೆ ಮಾಡಿ ಬೆಳೆಯ ನಿರ್ವಹಣೆ ಮಾಡುತ್ತಾನೆ. ಸಾಲ ಸೂಲ ಮಾಡಿ ತಾಳ್ಮೆಯಿಂದಲೇ ಒಕ್ಕಲುತನ ಮಾಡುವ ರೈತನಿಗೆ ನಿರೀಕ್ಷಿತ ಬೆಳೆ ಬಾರದಿರುವುದು ಅವರನ್ನು ಧೃತಿಗೆಡುವಂತೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ರೈತ ಆತ್ಮಹತ್ಯೆಗೆ ಶರಣಾಗುತ್ತಾನೆ. ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂಬುದನ್ನು ರೈತರು ಅರಿಯಬೇಕಾಗಿದೆ.
62 ರೈತರು ಆತ್ಮಹತ್ಯೆಗೆ ಶರಣು: 2002ರಿಂದ 2013ರ ಜೂನ್‌ವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಸಾಲ ಸೂಲ ಮಾಡಿ ಸಾಲ ತೀರಿಸಲಾರದೆ ಸಾವಿಗೆ ಕೊರಳೊಡ್ಡಿದ ರೈತರ ಸಂಖ್ಯೆ ಬರೋಬ್ಬರಿ 62. ಇದರಲ್ಲಿ ನಾಲ್ಕು ರೈತ ಮಹಿಳೆಯರಿದ್ದಾರೆ. ಈ 10 ವರ್ಷದ ಅವಧಿಯಲ್ಲಿ 2009ರಲ್ಲಿ 12 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2004ರಲ್ಲಿ ಆತ್ಮಹತ್ಯೆ ವರದಿಯಾಗಿಲ್ಲ. 2002ರಲ್ಲಿ 5 ರೈತರು, 2003ರಲ್ಲಿ 8 ರೈತರು, 2005ರಲ್ಲಿ 4, 2006 5 ರೈತರು, 2007ರಲ್ಲಿ 5 ರೈತರು, 2008ರಲ್ಲಿ 5, 2009ರಲ್ಲಿ 12 (ಓರ್ವ ರೈತ ಮಹಿಳೆ), 2010ರಲ್ಲಿ 5 (ಇಬ್ಬರು ರೈತ ಮಹಿಳೆಯರು), 2011ರಲ್ಲಿ 5 (ಓರ್ವ ರೈತ ಮಹಿಳೆ), 2012ರಲ್ಲಿ 5 ರೈತರು, 2013ರ ಜೂನ್‌ವರೆಗೆ ಇಬ್ಬರು ರೈತರು ನಷ್ಟಹೊಂದಿ, ಸಾಲ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬರ ಘೋಷಣೆ ರೈತನಿಗೆ ಕಣ್ಣೀರು ಒರೆಸುವುದೇ?: ರೈತರ ಹೆಸರು ಹೇಳಿ ಅಧಿಕಾರ ಚುಕ್ಕಾಣಿ ಹಿಡಿಯುವ ಎಲ್ಲ ಸರ್ಕಾರಗಳು ಬರಗಾಲ ಎದುರಾದ ತಕ್ಷಣ, ಬರಪೀಡಿತ ತಾಲೂಕು ಎಂದು ಘೋಷಣೆ ಮಾಡುತ್ತವೆ. ಅದನ್ನು ದೊಡ್ಡ ಸಾಧನೆಯೆಂದು ಹೇಳುತ್ತ ಹೋಗುತ್ತವೆ. ಬರದ ಹಿನ್ನೆಲೆಯಲ್ಲಿ ಮೇವು, ಕುಡಿಯುವ ನೀರು, ಕೈಗಳಿಗೆ ಕೆಲಸ ಎನ್ನುವ ಮೂರು ಅಂಶಗಳನ್ನಿಟ್ಟುಕೊಂಡ ಸರ್ಕಾರ, ರೈತರ ಆತ್ಮಹತ್ಯೆ ತಡೆಯುವ ಪ್ರಾಮಾಣಿಕ ಪ್ರಯತ್ನವನ್ನಂತೂ ಮಾಡುತ್ತಿಲ್ಲ. ಇನ್ನು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮಳೆ ಕೊರತೆಯಿಂದ ರೈತರಿಗೆ ಆದ ನಷ್ಟದ ಬಗ್ಗೆ ಪರಿಹಾರ ಕೇಳಿದರೆ ಹಳೆ ನಿಯಮಗಳಿಗೆ ಜೋತುಬಿದ್ದು, ನಿಯಮಗಳಲ್ಲಿ ತೇವಾಂಶದ ಕೊರತೆಯಿಂದ ಬೆಳೆಹಾನಿಯಾಗಿದೆ, ಅದಕ್ಕೆ ಪರಿಹಾರವಿಲ್ಲ. ಪ್ರವಾಹ ಹೆಚ್ಚಾಗಿ ಹಾನಿಯಾದರೆ ಮಾತ್ರ ಬೆಳೆಗೆ ಪರಿಹಾರ ಎಂದು ಕೈತೊಳೆದುಕೊಳ್ಳುತ್ತಾರೆ. ಇದರಿಂದಾಗಿ ಮಳೆಯ ನಿರೀಕ್ಷೆಯಿಂದ ಲಕ್ಷಾಂತರ ರುಪಾಯಿ ಸಾಲ ತಂದು ಬಿತ್ತನೆ ಮಾಡಿದ ರೈತನ ಪಾಡು ಹೇಳತೀರದು. ಇದಕ್ಕೆ ನಿಯಮಗಳಲ್ಲಿ ಉತ್ತರವಿಲ್ಲ. ಇಂತಹ ನೂರಾರು ಅವಘಡಗಳೆ ರೈತನ ಆತ್ಮಹತ್ಯೆ ದಾರಿ ಹಿಡಿಯುವುದಕ್ಕೆ ಕಾರಣವಾಗುತ್ತದೆ. ಸಾಯುವ ಜೀವಕ್ಕೆ ಗುಟುರು ನೀರು ಆಸರೆಯಾದರೆ, ಇನ್ನು ಸಾಲದಲ್ಲಿ ಮುಳುಗಿ ಹೋಗುವ ರೈತನಿಗೆ ಸರ್ಕಾರ ನೀಡುವ ಅಲ್ಪಸ್ವಲ್ಪ ಪರಿಹಾರ ಘೋಷಣೆ ರೈತನ ಬದುಕಿಗೆ ಬೆಳಕಾಗುತ್ತದೆ ಎಂಬುದರ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಆಲೋಚಿಸಬೇಕಿದೆ.
ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ: ಜೀವನದಲ್ಲಿ ಬರುವ ನೂರಾರು ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವೆ ಎಂಬ ಪ್ರಶ್ನೆ, ಅನುಮಾನ ಹಲವರಲ್ಲಿ ಕಾಡುತ್ತಿದೆ. ಆದರೆ ಆತ್ಮಹತ್ಯೆ ಸಮಸ್ಯೆಗೆ ಪರಿಹಾರದ ಮಾರ್ಗವಲ್ಲ. ಆತ್ಮಹತ್ಯೆಯಿಂದ ರೈತರ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ತಲುಪುತ್ತವೆಯೇ ವಿನಃ, ಅದರಿಂದ ಯಾವುದೇ ಸಮಸ್ಯೆ ಪರಿಹಾರ ಕಾಣಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಬ್ಬ ರೈತರು ಆಲೋಚಿಸಬೇಕಿದೆ. ರೈತ ಆತ್ಮಹತ್ಯೆ ಮಾಡಿಕೊಂಡರೆ ಆತನ ಕುಟುಂಬ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ ಹೊರತು ಆರ್ಥಿಕ ಸಮಸ್ಯೆ ಸುಧಾರಿಸದು. ಇನ್ನು ಕೆಲ ರೈತರು ತಾವು ಸತ್ತರೆ ಕುಟುಂಬಕ್ಕೆ ಪರಿಹಾರ ಸಿಗುತ್ತದೆ ಎಂಬ ಕೆಟ್ಟ ಯೋಚನೆಗೂ ಮುಂದಾಗುತ್ತಾರೆ. ಮನುಷ್ಯ ಇದ್ದರೆ ಸರ್ಕಾರ ನೀಡುವ ಪರಿಹಾರದ ಹತ್ತುಪಟ್ಟು ಗಳಿಸಬಹುದು. ಆದರೆ ಹೋದ ಜೀವ ಮರಳಿ ಪಡೆಯಲು ಸಾಧ್ಯವೇ ಎಂಬುದನ್ನು ಆತ್ಮಹತ್ಯೆಗೆ ಶರಣಾಗುವ ಮನೋಭಾವದ ರೈತರು ಯೋಚಿಸಬೇಕು. ಇನ್ನು ಸರ್ಕಾರಗಳು, ಜಿಲ್ಲಾಡಳಿತ ರೈತರಿಗೆ ಬೆಳೆಹಾನಿ ಕುರಿತಾಗಿ ಪ್ರಮಾಣಿಕವಾಗಿ ಪರಿಶೀಲಿಸಿ, ಪರಿಹಾರ ನೀಡುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಧೈರ್ಯ ಕಳೆದುಕೊಳ್ಳಬೇಡಿ
ರೈತರು ಯಾವತ್ತಿಗೂ ತಮ್ಮ ಮನೋಧೈರ್ಯ ಕಳೆದುಕೊಳ್ಳಬಾರದು. ಆತ್ಮಸ್ಥೈರ್ಯದಿಂದ ಇದ್ದು, ಮನಸ್ಸಿಟ್ಟು ದುಡಿದರೆ ಉತ್ತಮ ಫಸಲು ಬಂದೇ ಬರುತ್ತದೆ. ಅಲ್ಲದೇ ಒಂದು ವರ್ಷ ಬರ ಬಿದ್ದರೆ ಇನ್ನೊಂದು ವರ್ಷ ಉತ್ತಮ ಮಳೆಯಾಗಿ ಬೆಳೆ ಪಡೆಯಬಹುದೆಂಬ ಆಶಾಭಾವದಲ್ಲಿರಬೇಕು. ಆಗ ಮಾತ್ರ ರೈತ ಯಶಸ್ಸಿನ ಜೀವನ ಸಾಧಿಸಲು ಸಾಧ್ಯವಾಗುತ್ತದೆ. ಧೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಆತನ ಅವಲಂಬಿತರನ್ನು ಬೀದಿಗೆ ತಳ್ಳಿದಂತಾಗುತ್ತದೆ.
- ಸುಧೀರ್, ಪ್ರಗತಿಪರ ರೈತ
ದುಡುಕು ನಿರ್ಧಾರ ಬೇಡ
ರೈತರು ಸಣ್ಣ ಸಮಸ್ಯೆಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಬಾರದು. ಒಂದು ವರ್ಷ ಬೆಳೆ ಬಂದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗುವುದಿಲ್ಲ. ಮತ್ತೊಂದು ವರ್ಷ ಉತ್ತಮ ಬೆಳೆ ಪಡೆಯಬಹುದು ಎಂಬುದನ್ನು ಆಲೋಚಿಸಬೇಕು. ಇನ್ನು ಕುಟುಂಬದ ಪರಿಸ್ಥಿತಿ ಬಗ್ಗೆ ಚಿಂತಿಸುವುದು ಅಗತ್ಯ. ದುಡುಕಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳಬಾರದು. ಆತ್ಮಹತ್ಯೆ ರೈತರ ಸಮಸ್ಯೆಗೆ ಪರಿಹಾರವಲ್ಲ.
- ಡಾ. ಚೇತನ್‌ಸಿಂಗ್ ರಾಥೋಡ್, ಎಸ್ಪಿ



-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.