ಬಳ್ಳಾರಿ

ರಸ್ತೆಯಲ್ಲೇ ವ್ಯಾಪಾರ..

Published On :

ಕೊಟ್ಟೂರು ಪಟ್ಟಣ ಈ ಭಾಗದ ಪ್ರಸಿದ್ಧ ಧಾರ್ಮಿಕ ಮತ್ತು ಪ್ರಮುಖ ಮಾರುಕಟ್ಟೆ ಕೇಂದ್ರವೂ ಹೌದು. ದಿನದಿಂದ ದಿನಕ್ಕೆ ಅನೇಕ ಚಟುವಟಿಕೆಗಳು ಹೆಚ್ಚಾಗುತ್ತಾ ಸಾಗುತ್ತಿವೆ. ಪಟ್ಟಣ ಸದಾ ಜನ ಸಂಚಾರದಿಂದ ತುಂಬಿ ತುಳುಕುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲ ವ್ಯಾಪಾರಸ್ಥರು ಇಲ್ಲಿನ ಪ್ರಮುಖ ರಸ್ತೆ ಅದರಲ್ಲೂ ತೇರು ಬೀದಿಯುದ್ದಕ್ಕೂ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತ ಸುಗಮ ಸಂಚಾರಕ್ಕೆ ನಿರಂತರ ತೊಂದರೆ ಉಂಟು ಮಾಡುತ್ತಿದ್ದಾರೆ. ಈ ಕುರಿತು ಯಾರೊಬ್ಬರೂ ಗಮನಹರಿಸದೆ ನಿರ್ಲಕ್ಷಿಸಿದ್ದಾರೆ. ಪಟ್ಟಣದ ತೇರು ಬಯಲಿನ ಪ್ರಮುಖ ರಸ್ತೆಯನ್ನು 2 ವರ್ಷಗಳ ಹಿಂದೆ ಅಗಲೀಕರಿಸಿ ಅಭಿವೃದ್ಧಿಗೊಳಿಸಲಾಗಿದೆ. ಆದರೆ ಬಹುತೇಕ ರಸ್ತೆಯನ್ನು ಸಣ್ಣಪುಟ್ಟ ವ್ಯಾಪಾರಿಗಳು ಅತಿಕ್ರಮಿಸಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ರಸ್ತೆ ಮಧ್ಯದಲ್ಲಿಯೇ ವ್ಯಾಪಾರ ಮಳಿಗೆಗಳನ್ನು ಹಾಕಿಕೊಂಡು ಎಗ್ಗಿಲ್ಲದೆ ವ್ಯಾಪಾರ ನಡೆಸುತ್ತಾರೆ. ಇದರಿಂದಾಗಿ ವಾಹನಗಳ ಸುಗಮ ಸಂಚಾರವಿಲ್ಲದೇ, ಸವಾರರು ಹೆಣಗಾಡಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ರಸ್ತೆ ಇರುವುದು ವಾಹನಗಳ ಸಂಚಾರಕ್ಕೆ ಎಂಬುದನ್ನು ಮರೆತ ವ್ಯಾಪಾರಸ್ಥರು ರಸ್ತೆಯನ್ನು ಅತಿಕ್ರಮಿಸುವುದರಿಂದ ವಾಹನ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಗಮನಹರಿಸಿ ವ್ಯಾಪಾರ ಚಟುವಟಕೆಗಳಿಂದ ರಸ್ತೆಯನ್ನು ಮುಕ್ತಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವತ್ತ ಮುಂದಾಗಬೇಕಿದೆ.
- ಎಸ್.ಎಸ್. ಕೊಟ್ರೇಶ್, ಕೆ. ಅಯ್ಯನಹಳ್ಳಿ

ಒಂದೂ ಇಲ್ಲ ಮೂತ್ರಾಲಯ
ಕೊಟ್ಟೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಪಟ್ಟಣವಾಗಿದೆ. ಜನಸಂಖ್ಯೆ 35 ಸಾವಿರಕ್ಕೂ ಅಧಿಕ ಇದೆ. ಪಟ್ಟಣ ಪಂಚಾಯಿತಿ ಆಡಳಿತ ಹೊಂದಿರುವ ಪಟ್ಟಣ ಹಲವು ಬಗೆಯ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಈ ಪಟ್ಟಣ ಶೀಘ್ರದಲ್ಲೇ ತಾಲೂಕು ಕೇಂದ್ರವಾಗಿ ಹೊರಹೊಮ್ಮಲಿದೆ. ಇಂತಹ ಪ್ರಮುಖ ಧಾರ್ಮಿಕ ಮತ್ತು ವಾಣಿಜ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಮೂತ್ರಾಲಯಗಳು ಇಲ್ಲವಾಗಿವೆ. ಮೂತ್ರಾಲಯಗಳ ಅವಶ್ಯಕತೆ ಬಹಳಷ್ಟು ಇದ್ದರೂ ಪಟ್ಟಣ ಪಂಚಾಯಿತಿ ಆಡಳಿತ ಮಾತ್ರ ಇತ್ತ ಕಡೆ ಗಮನಹರಿಸದಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಸಾರ್ವಜನಿಕ ಮೂತ್ರಾಲಯಗಳು ಇಲ್ಲದ ಕಾರಣಕ್ಕಾಗಿ ಜನತೆ ಅದರಲ್ಲೂ ಪುರುಷರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತ ಪಟ್ಟಣದ ಪರಿಸರಕ್ಕೆ ನಿರಂತರ ಹಾನಿ ತರತೊಡಗಿದ್ದಾರೆ. ಪಟ್ಟಣದ ಪ್ರಮುಖ ಸ್ಥಳಗಳಾದ ಬಸ್ ನಿಲ್ದಾಣ, ಗಾಂಧಿ ವೃತ್ತ, ಉಜ್ಜಿನಿ ಸರ್ಕಲ್, ದೇವಸ್ಥಾನದ ರಸ್ತೆ, ಎಪಿಎಂಸಿ, ಸರ್ಕಾರಿ ಆಸ್ಪತ್ರೆ, ಮತ್ತಿತರ ಕಡೆಗಳಲ್ಲಿ ಮೂತ್ರಾಲಯಗಳನ್ನು ನಿರ್ಮಿಸುವ ಮೂಲಕ ಈ ಕೊರತೆ ನೀಗಿಸಬೇಕು. ಆದರೆ ಸಾರ್ವಜನಿಕ ಮೂತ್ರಾಲಯಗಳನ್ನು ಪಟ್ಟಣ ಪಂಚಾಯಿತಿ ಆಡಳಿತ ನಿರ್ಮಿಸದೇ ಇರುವುದು ಆಡಳಿತ ವೈಖರಿಗೆ ಹಿಡಿದ ಕನ್ನಡಿ. ಶೀಘ್ರದಲ್ಲೇ ಬೆಳೆಯುತ್ತಿರುವ ಪಟ್ಟಣವನ್ನು ಅನುಗುಣವಾಗಿಟ್ಟುಕೊಂಡು ಪಪಂ ಆಡಳಿತ ತುರ್ತಾಗಿ ಮೂತ್ರಾಲಯಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ನೆರವಾಗುವುದೇ ಎಂಬುದನ್ನು ನೋಡಬೇಕು.
- ಗಂಗಮ್ಮನಹಳ್ಳಿ ಕೊಟ್ರಯ್ಯ, ಕೊಟ್ಟೂರು

ತ್ಯಾಜ್ಯದ್ದೇ ಇಲ್ಲಿ ಕಾರುಬಾರು
ಹಗರಿಬೊಮ್ಮನಹಳ್ಳಿ ತಾಲೂಕು ಕೇಂದ್ರವಾಗಿದ್ದರೂ ಪಟ್ಟಣದಲ್ಲಿ ಸ್ವಚ್ಛತೆ ಮಾತ್ರ ಮರೀಚಿಕೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ, ಕಡ್ಡಿ, ಕೊಳೆತ ತರಕಾರಿ, ಹಣ್ಣು, ಪ್ಲಾಸ್ಟಿಕ್ ತ್ಯಾಜ್ಯದ್ದೇ ಕಾರುಬಾರು. ಪಟ್ಟಣದ ಪ್ರವಾಸಿ ಮಂದಿರದ ಬಳಿ, ಹಳೆ ಬಸ್ ನಿಲ್ದಾಣ, ಬಸವೇಶ್ವರ ಬಜಾರ್, ಸೋಗಿ ಅಂಗಡಿ ಮಾರ್ಗ, ತಾಲೂಕು ಕಚೇರಿ, ಸಿದ್ದಮಲ್ಲಪ್ಪ ಆಸ್ಪತ್ರೆ ದಾರಿ, ಕೆವಿಒಆರ್ ಕಾಲೋನಿ ಪಕ್ಕದ ರೇಲ್ವೆಗೇಟ್‌ನ ಎರಡೂ ಬದಿಯಲ್ಲಿ ದುರ್ನಾತದ್ದೆ ಸಾಮ್ರಾಜ್ಯ. ಇಲ್ಲೆಲ್ಲ ಮೂಗು ಮುಚ್ಚಿಕೊಂಡೆ ಸಂಚರಿಸುವುದು ಅನಿವಾರ್ಯವಾಗಿದೆ. ಇತ್ತ ಕಸ, ಕಡ್ಡಿ ಸೇರಿದಂತೆ ಇನ್ನಿತರೆ ತ್ಯಾಜ್ಯದ ಸಮರ್ಪಕ ವಿಲೇವಾರಿ ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ಕಸದ ತಿಪ್ಪೆ ಬಿದ್ದಿದೆ. ಪಟ್ಟಣದಲ್ಲಿ ನಡೆದಾಡಿದರೆ ದುರ್ನಾತ ಮೂಗಿಗೆ ರಾಚುತ್ತದೆ, ಹೀಗಾಗಿ ಹಳ್ಳಿಗಳಿಂದ ಬರುವ ಜನತೆ ಮೂಗು ಮುಚ್ಚಿಕೊಂಡೆ ಓಡಾಡಬೇಕು. ಎಲ್ಲೆಂದರಲ್ಲಿ ರಾಶಿಯಾಗಿ ಬಿದ್ದಿರುವ ಕಸ, ಕಡ್ಡಿ, ತರಕಾರಿ ತ್ಯಾಜ್ಯ ವಿಲೇವಾರಿ ಇಲ್ಲದೆ ಹಾಕಿದಲ್ಲೆ ಕೊಳೆಯುತ್ತಿದೆ. ಪಟ್ಟಣದಲ್ಲಿ ಸಾಂಕ್ರಾಮಿಕ ರೋಗಗಳು ವ್ಯಾಪಕ ಪ್ರಮಾಣದಲ್ಲಿ ಜನತೆಯ ಜೀವಹಿಂಡುತ್ತಿವೆ.
ನಿತ್ಯ ಸಂಗ್ರಹವಾಗುತ್ತಿರುವ ತ್ಯಾಜ್ಯವನ್ನು ಪಟ್ಟಣದ ಹೊರಗೆ ಸಾಗಿಸುವ ಸರಿಯಾದ ವ್ಯವಸ್ಥೆ ಇಲ್ಲಿಲ್ಲ. ಸಾಕಷ್ಟು ಬೆಳೆದಿರುವ ಪಟ್ಟಣವಾಗಿದ್ದರೂ ಇನ್ನೂ ಕೂಡ ಈ ಪಟ್ಟಣ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಹೊಂದಿದೆ. ಇದು ಕೂಡ ಪಟ್ಟಣದ ಸ್ವಚ್ಛತೆ ಮೇಲೆ ಕೆಟ್ಟ ಪರಿಣಾಮ ಬೀರಲು ಒಂದು ಕಾರಣವಾಗಿದೆ. ಇತ್ತ ಪಟ್ಟಣದಲ್ಲಿನ ಕಸ ವಿಲೇವಾರಿಯನ್ನು ತ್ವರಿತಗೊಳಿಸಿ ಪರಿಸರ ಸ್ವಚ್ಛತೆಗೆ ಇಲ್ಲಿನ ಚಿಂತ್ರಪಳ್ಳಿ ಗ್ರಾಮ ಪಂಚಾಯಿತಿ ಆಡಳಿತ ತಕ್ಷಣ ಸೂಕ್ತ ಕ್ರಮ ವಹಿಸಬೇಕು. ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಸಂಗ್ರಹವಾಗುವ ಕಸವನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ಪಟ್ಟಣದ ಜನತೆಯನ್ನು ದುರ್ನಾತದಿಂದ ಪಾರು ಮಾಡಬೇಕಿದೆ.
- ಬಾರಿಕರ ಗಂಗಾಧರ, ಹಗರಿಬೊಮ್ಮನಹಳ್ಳಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.