ದೇಶ

'ಕಾಗ್ನಿಟಿವ್ ಡೊಮೇನ್'; ಭಾರತಕ್ಕೆ ಬಾಹ್ಯ ಶತ್ರುಗಳಿಗಿಂತ ಆಂತರಿಕ ಬೆದರಿಕೆಗಳೇ ಹೆಚ್ಚು ಅಪಾಯಕಾರಿ: RSS ಮುಖ್ಯಸ್ಥರ ಸಮ್ಮುಖದಲ್ಲೇ ಮಾಜಿ CDS ಅನಿಲ್ ಚೌಹಾಣ್

'ಕಾಗ್ನಿಟಿವ್ ಡೊಮೇನ್'; ಭಾರತಕ್ಕೆ ಬಾಹ್ಯ ಶತ್ರುಗಳಿಗಿಂತ ಆಂತರಿಕ ಬೆದರಿಕೆಗಳೇ ಹೆಚ್ಚು ಅಪಾಯಕಾರಿ: RSS ಮುಖ್ಯಸ್ಥರ ಸಮ್ಮುಖದಲ್ಲೇ ಮಾಜಿ CDS ಅನಿಲ್ ಚೌಹಾಣ್
ರಕ್ಷಣಾ ಪಡೆಗಳ ಮಾಜಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್
Published On :

ನವದೆಹಲಿ: ಭಾರತದ ಪಾಲಿಗೆ ಬಾಹ್ಯ ಶತ್ರುಗಳಿಗಿಂತ ಆಂತರಿಕ ಬೆದರಿಕೆಗಳೇ ಹೆಚ್ಚು ಅಪಾಯಕಾರಿ ಎಂದು ರಕ್ಷಣಾ ಪಡೆಗಳ ಮಾಜಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.

ಗ್ಯಾನ್‌ಗಯ್ನಾ ಫೌಂಡೇಶನ್ ಆಯೋಜಿಸಿದ್ದ ಪದ್ಮಾ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, 'ದೇಶದ ಆಲೋಚನೆ, ಚಿಂತನೆ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ 'ಕಾಗ್ನಿಟಿವ್ ಡೊಮೇನ್' (ಮಾನಸಿಕ ಮತ್ತು ಬೌದ್ಧಿಕ ವಲಯ) ಪ್ರಸ್ತುತ ಭಾರತದ ಮುಂದಿರುವ ಅತಿ ದೊಡ್ಡ ಅಪಾಯ ಎಂದು ಎಚ್ಚರಿಸಿದ್ದಾರೆ.

ಅಲ್ಲದೆ ದೇಶದ ಆಂತರಿಕ ಭದ್ರತೆಯ ಸವಾಲುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಅಂದಹಾಗೆ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ RSS ಮುಖ್ಯಸ್ಥ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೋಹನ್ ಭಾಗವತ್, ಭಾರತ ಅಭಿವೃದ್ಧಿ ಹೊಂದುವುದನ್ನು ಜಗತ್ತಿನ ಯಾವುದೇ ಪ್ರಬಲ ರಾಷ್ಟ್ರ ಬಯಸುವುದಿಲ್ಲ. ದೊಡ್ಡ ದೇಶಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಬಯಸುತ್ತವೆ. ಅವುಗಳ ದೃಷ್ಟಿಯಲ್ಲಿ 'ಬಲಿಷ್ಠರು ಮಾತ್ರ ಬದುಕುಳಿಯುತ್ತಾರೆ' ಎಂಬ ತತ್ವವೇ ಮುಖ್ಯವಾಗಿದೆ ಎಂದು ಹೇಳಿದರು.

ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಜನರಲ್ ಅನಿಲ್ ಚೌಹಾಣ್, ಭಾರತ ಯಶಸ್ವಿ, ಅಭಿವೃದ್ಧಿ ಹೊಂದಿದ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಭಾವಿ ರಾಷ್ಟ್ರವಾಗಿ ಬೆಳೆಯುವುದನ್ನು ಅಭಿವೃದ್ಧಿ ಹೊಂದಿದ ದೇಶಗಳು ಬಯಸುವುದಿಲ್ಲ. ಭಾರತದ ಪ್ರಗತಿಗೆ ಅಡ್ಡಿಪಡಿಸುವ ಪ್ರಯತ್ನಗಳೂ ನಡೆಯಬಹುದು ಎಂದರು.

ಆಂತರಿಕ ಅಪಾಯವೇ ಹೆಚ್ಚು ಅಪಾಯಕಾರಿ

"ಬಾಹ್ಯ ಶತ್ರುಗಳಿಗಿಂತ ಆಂತರಿಕ ಬೆದರಿಕೆಗಳು ಹೆಚ್ಚು ಅಪಾಯಕಾರಿ. ಬಾಹ್ಯ ಶತ್ರುಗಳನ್ನು ನಾವು ಗುರುತಿಸಬಹುದು. ಅವರ ವಿರುದ್ಧ ಹೋರಾಡುವಾಗ ಇಡೀ ದೇಶ ಒಂದಾಗುತ್ತದೆ. ಆದರೆ ಆಂತರಿಕ ಅಪಾಯಗಳಿಗೆ ಹೊರಗಿನ ಶಕ್ತಿಗಳ ಬೆಂಬಲವೂ ದೊರೆತಾಗ ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗುತ್ತದೆ" ಎಂದು ಎಚ್ಚರಿಸಿದರು.

"ಪ್ರಸ್ತುತ ಭಾರತಕ್ಕೆ ಎದುರಾಗಿರುವ ಅತಿ ದೊಡ್ಡ ಅಪಾಯ ಕಾಗ್ನಿಟಿವ್ ಡೊಮೇನ್‌ನಲ್ಲಿದೆ. ಇದು ನಮ್ಮ ಆಲೋಚನೆ, ಚಿಂತನೆ ಮತ್ತು ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂತಹ 'ಕಾಗ್ನಿಟಿವ್ ವಾರ್‌ಫೇರ್' (ಮಾನಸಿಕ ಮತ್ತು ಬೌದ್ಧಿಕ ಯುದ್ಧ) ಹೊಸದೇನಲ್ಲ" ಎಂದು ಜನರಲ್ ಅನಿಲ್ ಚೌಹಾಣ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.