ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!

ದುರಂತ ಪೀಡಿತ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಧಾರಾಕಾರ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತೀವ್ರ ಚಳಿ ಮತ್ತು ಹಿಮಪಾತವು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ನಿರಾಶ್ರಿತರಾಗಿರುವ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
people set up tents for quake-affected residents at a primary school
ಭೂಕಂಪದ ನಂತರ ಶಾಲೆಯಲ್ಲಿ ಟೆಂಟ್ ಸಿದ್ಧಪಡಿಸುತ್ತಿರುವ ಜನತೆ
Updated on: 

ಬೀಜಿಂಗ್: ಟಿಬೆಟ್‌ನ ಉತ್ತರದ ಪರ್ವತ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪಕ್ಕೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 54 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿರುವ ಈ ಪ್ರಬಲ ಭೂಕಂಪದಿಂದಾಗಿ ನೂರಾರು ವಸತಿ ಗೃಹಗಳು ನೆಲಸಮಗೊಂಡಿವೆ.

ಭೂಕಂಪದಿಂದ ಕನಿಷ್ಠ 339 ಮನೆಗಳು ಹಾಗೂ ಜಾನುವಾರುಗಳಿಗಾಗಿ ನಿರ್ಮಿಸಿದ್ದ 20 ಕೊಟ್ಟಿಗೆಗಳು ಕುಸಿದಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳೀಯ ಜಿಲ್ಲೆಯಿಂದ 1,600ಕ್ಕೂ ಹೆಚ್ಚು ಮಂದಿಯನ್ನು ನಿಯೋಜಿಸಲಾಗಿದೆ. ಸಂತ್ರಸ್ತರ ನೆರವಿಗಾಗಿ 1,000 ತಾತ್ಕಾಲಿಕ ವಸತಿ ಘಟಕಗಳು, ಸುಮಾರು 3,000 ಡೇರೆಗಳು, ಮಡಚಬಹುದಾದ ಹಾಸಿಗೆಗಳು, ಕೈದೀಪಗಳು ಹಾಗೂ ಚಳಿಗಾಲಕ್ಕೆ ಅಗತ್ಯವಾದ ಉಡುಪುಗಳನ್ನು ಪ್ರದೇಶಕ್ಕೆ ರವಾನಿಸಲಾಗಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಸ್ಥಳೀಯ ಕಾಲಮಾನ ರಾತ್ರಿ 10.33ಕ್ಕೆ ಭೂಕಂಪ ಸಂಭವಿಸಿದೆ. ಟಿಬೆಟ್‌ನ ಉತ್ತರ ಭಾಗದಲ್ಲಿರುವ ಕಡಿಮೆ ಜನಸಂಖ್ಯೆಯ, ಎತ್ತರದ ಪ್ರದೇಶದಲ್ಲಿ ನಾಗ್ಚು ನಗರದ ಪೂರ್ವ-ಈಶಾನ್ಯಕ್ಕೆ 191 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 18 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ತಿಳಿಸಿದೆ.

ಭೂಕಂಪದ ಬಳಿಕ 4.3ರಿಂದ 5.2 ತೀವ್ರತೆಯ ಕನಿಷ್ಠ ಏಳು ಭೂಕಂಪನಗಳು ಸಂಭವಿಸಿರುವುದನ್ನು ಅಮೆರಿಕದ ಸಂಸ್ಥೆ ದಾಖಲಿಸಿದೆ. ಈ ಎಲ್ಲ ಕಂಪನಗಳ ಕೇಂದ್ರಗಳು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿದ್ದವು ಎಂದು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

people set up tents for quake-affected residents at a primary school
ನೇಪಾಳದ ಭೀಕರ ಪ್ರವಾಹ ಮಾಸುವ ಮುನ್ನವೇ ಟಿಬೆಟ್​ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ: 2 ಬಾರಿ ಕಂಪಿಸಿದ ಭೂಮಿ!

ಚೀನಾದ ಅಧಿಕೃತ ಸುದ್ದಿಸಂಸ್ಥೆ ಕ್ಸಿನ್‌ಹುವಾ ಪ್ರಕಾರ, ಪ್ರದೇಶದ ಕೆಲವು ಭಾಗಗಳಲ್ಲಿ ದೂರಸಂಪರ್ಕ ವ್ಯವಸ್ಥೆ ಸ್ಥಗಿತಗೊಂಡಿದೆ. ಭೂಕಂಪ ಪೀಡಿತ ಪ್ರದೇಶದ ಮೂಲಕ ಹಾದುಹೋಗುವ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸ್ಥಳೀಯ ರೈಲ್ವೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ.

ಭೂಕಂಪದಿಂದ ಬಂಡೆಗಳು ಉರುಳಿಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 317ರ ಒಂದು ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ತುರ್ತು ಸೇವೆ, ರಕ್ಷಣಾ ಕಾರ್ಯಾಚರಣೆ ಮತ್ತು ಅಧಿಕೃತ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ವರದಿ ಮಾಡಿದೆ.

ಮುಂದಿನ ಮೂರು ದಿನಗಳಲ್ಲಿ ಭೂಕಂಪ ಪೀಡಿತ ಪ್ರದೇಶದಲ್ಲಿ ಆಗಾಗ ಹಿಮಪಾತವಾಗುವ ನಿರೀಕ್ಷೆಯಿದೆ ಎಂದೂ ಸುದ್ದಿಸಂಸ್ಥೆ ತಿಳಿಸಿದೆ. ಇದು ಕಳೆದ ಐದು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪವಾಗಿದೆ ಎಂದು ಚೀನಾದ ಸರ್ಕಾರಿ ಪ್ರಸಾರ ಸಂಸ್ಥೆ ಸಿಸಿಟಿವಿ ವರದಿ ಮಾಡಿದೆ.

ರಕ್ಷಣಾ ಕಾರ್ಯಾಚರಣೆ ಹಾಗೂ ವೈದ್ಯಕೀಯ ನೆರವಿಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಭೂ ಕಂಪನಗಳು 300 ಕಿಲೋಮೀಟರ್ ದೂರದಲ್ಲಿರುವ ಟಿಬೆಟ್‌ನ ರಾಜಧಾನಿ ಲಹಾಸಾದಲ್ಲೂ ವರದಿಯಾಗಿವೆ.

ಸಮರೋಪಾದಿಯಲ್ಲಿ ಮುಂದುವರೆದ ರಕ್ಷಣಾ ಕಾರ್ಯ

ಘಟನಾ ಸ್ಥಳದಲ್ಲಿ ಸದ್ಯ 1,600 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕೆಲಸ ಮುಂದುವರಿದಿದೆ. ಸಂತ್ರಸ್ತರಿಗಾಗಿ ಚಳಿಗಾಲದ ಬಟ್ಟೆಗಳು, 3,000 ಟೆಂಟ್‌ಗಳು ಮತ್ತು 1,000 ತಾತ್ಕಾಲಿಕ ವಸತಿ ಸಾಮಗ್ರಿಗಳನ್ನು ತುರ್ತಾಗಿ ರವಾನಿಸಲಾಗುತ್ತಿದೆ.

ಹಿಮಪಾತದ ಮುನ್ಸೂಚನೆ: ಹೆಚ್ಚಿದ ಆತಂಕ

ಈ ನಡುವೆ ದುರಂತ ಪೀಡಿತ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಧಾರಾಕಾರ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತೀವ್ರ ಚಳಿ ಮತ್ತು ಹಿಮಪಾತವು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ನಿರಾಶ್ರಿತರಾಗಿರುವ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com