ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ಸಂಶೋಧನಾ ರೀತಿ ಪರಾಮರ್ಶಿಸಿ
ಕೊಟ್ಟೂರು: ಗ್ರಾಮೀಣ ಜನರಿಗಿರುವ ಅರಿವಿನ ಹಂತ ವಿಸ್ತಾರವಾದುದು. ಈ ಜನತೆ ಪ್ರತಿ ವಿಷಯವನ್ನು ತತ್ವ, ಆದರ್ಶಗಳಡಿ ತಿಳಿದು ನೆಡೆದುಕೊಳ್ಳುವತ್ತ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಸಂಶೋಧನಾ ರೀತಿಯಲ್ಲಿ ಪರಾಮರ್ಶಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ಉಪನ್ಯಾಸಕ ರಾಜಶೇಖರ ನಾಯ್ಕ ಹೇಳಿದರು. ಪಟ್ಟಣದ ಎನ್‌ಬಿ ಎಂಎಸ್‌ಡಬ್ಲ್ಯೂ ಮಹಾವಿದ್ಯಾಲಯದಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಸಹಭಾಗಿತ್ವದೊಂದಿಗೆ ಗ್ರಾಮೀಣ ನಿಷ್ಕರ್ಷೆ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಗ್ರಾಮೀಣ ಪ್ರದೇಶಗಳ ಸಮಸ್ಯೆಗಳ ತಿಳಿವಳಿಕೆ ಬಗ್ಗೆ ಸದಾ ಕುತೂಹಲಭರಿತರಾಗಿ, ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು ಎಂದ ಅವರು, ಅದರ ಮೂಲಕ ಆಳವಾದ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ ಎಂದರು. ಪ್ರಾಚಾರ್ಯ ಬಸವರಾಜ್ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಪಾಂಡುರಂಗ ಜೈರಾಜ್, ಎಚ್. ಪ್ರಕಾಶ್, ಕೆ.ಎನ್. ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಸುಮಲತಾ ಪ್ರಾರ್ಥಿಸಿದರು. ಕೊಟ್ರೇಶ್ ಕಾರ್ಯಕ್ರಮ ನಿರೂಪಿಸಿದರು.
ರೈಲು ಡಿಕ್ಕಿ: ಓರ್ವ ಸಾವು
ಬಳ್ಳಾರಿ: ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಬಳ್ಳಾರಿ ನಗರದ ಏಳು ಮಕ್ಕಳ ತಾಯಿ ದೇವಸ್ಥಾನ ಸಮೀಪದ ರೇಲ್ವೆ ಹಳಿಯ ಮೇಲೆ ಸಂಭವಿಸಿದೆ. ಮೃತನನ್ನು ಕಂಬಳಿ ಬಜಾರ್ ನಿವಾಸಿ ಸುರೇಶ್‌ಬಾಬು (31) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಘಟನೆ ಸಂಭವಿಸಿದ್ದು, ಬೆಳಗ್ಗೆ ರೇಲ್ವೆ ಪೊಲೀಸರಿಗೆ ಮಾಹಿತಿ ಗೊತ್ತಾಗಿದೆ. ಈ ಕುರಿತು ಬಳ್ಳಾರಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೋಟು ಮುದ್ರಣ: ಐವರ ಬಂಧನ
ಬಳ್ಳಾರಿ: ವಿವಿಧ ಮುಖಬೆಲೆಯ ಅಸಲಿ ನೋಟುಗಳನ್ನು ಮುದ್ರಿಸಿ ಕೊಡುತ್ತೇವೆಂದು ಹೇಳಿ ವಂಚಿಸುತ್ತಿದ್ದ 5 ಆರೋಪಿಗಳನ್ನು ಬಳ್ಳಾರಿ ಪೊಲೀಸರು ಬಂಧಿಸಿ, ಆರೋಪಿಗಳಿಂದ ರು. 12 ಸಾವಿರ ನಗದು ಹಾಗೂ ನೋಟು ಮುದ್ರಿಸುವ ಯಂತ್ರ, ವಿವಿಧ ಬಣ್ಣದ ಇಂಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆಯ ಇಸ್ಮಾಯಿಲ್ ಸೇರಿದಂತೆ ನಾಲ್ಕು ಜನ, ಗಂಗಾವತಿ ಮೂಲದ ಬಾಬು ಬಂಧಿತರಾಗಿದ್ದಾರೆ. ಐದು ಜನ ಆರೋಪಿಗಳು ನಗರದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಅಸಲಿ ನೋಟುಗಳನ್ನು ಮುದ್ರಿಸಿಕೊಡುತ್ತೇವೆಂದು ವಂಚಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬ್ರೂಸ್ಪೇಟೆ ಪೊಲೀಸರು ದಾಳಿ ಮಾಡಿ, ಐದು ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ನೋಟಿನ ಮುದ್ರಣಕ್ಕೆ ಬಳಸುವ ಇಂಕ್, ಕೆಮಿಕಲ್ಸ್, ಯಂತ್ರ, ರು. 12 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಗೀತಾ ಜಯಂತಿ
ಹೊಸಪೇಟೆ: ನಗರದ ಶ್ರೀ ರಾಮಕೃಷ್ಣ ಗೀತಾಶ್ರಮದಲ್ಲಿ ಗೀತಾ ಜಯಂತಿ ಕಾರ್ಯಕ್ರಮ ಡಿ. 11ರಿಂದ 13ರ ವರೆಗೆ ನಡೆಯಲಿದೆ. ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ವೀರೇಶಾನಂದಜಿ ಮಹಾರಾಜ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಉಪನ್ಯಾಸ ನೀಡಲಿದ್ದಾರೆ. ಆಂಧ್ರಪ್ರದೇಶದ ಗಂಡೀಪಾಳ್ಯದ ಸ್ವಾಮಿ ಪ್ರಸನ್ನಾನಂದಜಿ ಮಹಾರಾಜ್, ಗುಲ್ಬರ್ಗ ಆಶ್ರಮದ ಅಧ್ಯಕ್ಷ ಸ್ವಾಮಿ ಮಹೇಶ್ವರಾನಂದಜಿ ಮಹಾರಾಜ್, ರಾಣೀಬೆನ್ನೂರು ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್, ಬೀದರ್‌ನ ಸ್ವಾಮಿ ಜ್ಯೋತಿರ್ಮಯಾನಂದಜಿ ಮಹಾರಾಜ್, ಹೊಸಪೇಟೆಯ ಹಿರಿಯ ಗಾಂಧಿವಾದಿ ಕೆ. ನಾರಾಯಣ ಭಟ್, ಗಮಕ ಕವಿ ರಂಗೋಪಂತ್ ನಾಗರಾಜ್, ಉದ್ಯಮಿ ಕಮಲಾಕ್ಷ ಶಾನಭಾಗ, ಭೂಪಾಲ್ ರಾಘವೇಂದ್ರ ಶೆಟ್ಟಿ, ಕಟ್ಟಾ ಮೋಹನ್, ವೈ. ಶ್ರೀನಿವಾಸ್ ರಾವ್, ಬಸವರಾಜ್ ನಾಲತ್ವಾಡ್, ಕೆ. ಸದಾಶಿವರೆಡ್ಡಿ ಸೇರಿದಂತೆ ಇತರರು ಭಾಗವಹಿಸುವರು ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಸುಮೇಧಾನಂದ ತಿಳಿಸಿದ್ದಾರೆ.
ರಜೆ ಘೋಷಣೆ: ಪರೀಕ್ಷೆ ಮುಂದೂಡಿಕೆ
ಬಳ್ಳಾರಿ: ಮೈಸೂರಿನ ಶ್ರೀಕಂಠದತ್ತ ಒಡೆಯರು ನಿಧನದ ಹಿನ್ನೆಲೆಯಲ್ಲಿ ಡಿ. 11ರಂದು ಬುಧವಾರ ಸರ್ಕಾರಿ ರಜೆ ಘೋಷಣೆ ಮಾಡಿರುವುದರಿಂದ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಡಿ. 11ರಂದು ನಡೆಯುವ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದ್ದು, ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದು ವಿವಿ ಕುಲಪತಿ ಮಂಜಪ್ಪ ಡಿ. ಹೊಸಮನಿ ತಿಳಿಸಿದ್ದಾರೆ. ಡಿ. 11ರಂದು ನಡೆಯುವ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ದಿನಾಂಕವನ್ನು ನಿಗದಿಪಡಿಸಿ ತಿಳಿಸಲಾಗುತ್ತದೆ ಎಂದು ಕುಲಪತಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು
ಹಗರಿಬೊಮ್ಮನಹಳ್ಳಿ: ಮಂಗಳವಾರ ಸಂಜೆ ಹಗರಿಬೊಮ್ಮನಹಳ್ಳಿ ತಾಲೂಕಿನ ಏಣಿಗಿ ಬಸಾಪುರ ಹೊಸಕ್ಯಾಂಪ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೊನ್ನದ ಬಸಪ್ಪ (45), ಎ.ಕೆ. ಕರಿಯಪ್ಪ (38) ಮೃತಪಟ್ಟವರು. ಇಬ್ಬರೂ ಏಣಿಗಿ ಬಸಾಪುರ ಗ್ರಾಮದ ನಿವಾಸಿಗಳು. ಹಗರಿಬೊಮ್ಮನಹಳ್ಳಿ ಕಡೆಯಿಂದ ಗ್ರಾಮಕ್ಕೆ ಬೈಕ್‌ನಲ್ಲಿ ಪ್ರಯಾಣಿಸುವಾಗ ಸವಾರನ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದ ಚಿಕ್ಕ ಸೇತುವೆಗೆ ಡಿಕ್ಕಿ ಹೊಡೆದಿದೆ. ಆ ರಭಸಕ್ಕೆ ಸವಾರ ಮತ್ತು ಹಿಂಬದಿ ಸವಾರ ಇಬ್ಬರು ರಸ್ತೆಗೆ ಹಾರಿ ಬಿದ್ದಿದ್ದಾರೆ. ತೀವ್ರ ಪೆಟ್ಟು ಬಿದ್ದಿದ್ದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಂಪಾಸಾಗರ ಉಪಠಾಣ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಹಗರಿಬೊಮ್ಮನಹಳ್ಳಿ ಠಾಣೆ ಸಿಪಿಐ ಮಲ್ಲೇಶ್ ದೊಡ್ಡಮನಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.