ಬಳ್ಳಾರಿ

ಹಳ್ಳಿಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 12
ಗ್ರಾಮಾಂತರ ಪ್ರದೇಶದ ಕೆಲವೊಂದು ಗೂಡಂಗಡಿ, ಚಿಕ್ಕಪುಟ್ಟ ಹೋಟೆಲ್‌ಗಳಲ್ಲಿ ಮದ್ಯ ಮಾರಾಟಕ್ಕಿದೆ!
ಇದೇನಿದು? ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆಯೇ ಎಂದು ಮದ್ಯಪಾನಿಗಳು ಸಂತೋಷ ಪಡಬೇಡಿ, ಸಾರ್ವಜನಿಕರು ಗಾಬರಿಪಡಬೇಡಿ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಇಂತಹ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ದಾಳಿ ಮಾಡಿದರೂ ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ಸ್ ರೂಲ್ಸ್‌ನ ಕಲಂ 24ರ ವಿಷಯ ಇಂತಹ ದಂಧೆಗೆ ಅನುವು ಮಾಡಿಕೊಟ್ಟಂತಿದೆ ಎಂಬ ಆರೋಪವೂ ಇದೆ. ಈ ಕಲಂ ಅಡಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ 24 ಬಾಟಲ್ (180 ಎಂಎಲ್)ಗಳನ್ನು ತನ್ನ ಸ್ವಂತ ಬಳಕೆಗೆ ಖರೀದಿ ಮಾಡಿ, ಸ್ವಂತ ಬಳಕೆ ಮಾಡಲು ಅವಕಾಶವಿದೆ. ಇದೇ ಅಂಶದ ಆಧಾರದ ಮೇಲೆ ಗ್ರಾಮೀಣ ಭಾಗದ ಕೆಲವೊಂದು ಗೂಡಂಗಡಿಗಳಲ್ಲಿ ಮದ್ಯ ಸಂಗ್ರಹಿಸಿಡಲಾಗುತ್ತಿದೆ ಮತ್ತು ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ.
ಈ ಹಿಂದೆಯೂ ಊರ ಹೊರಗಡೆ ಕದ್ದುಮುಚ್ಚಿ ಮದ್ಯ ಮಾರಾಟ ಮಾಡುವ ದಂಧೆ ನಡೆಯುತ್ತಿತ್ತು. ಮದ್ಯಪಾನಿಗಳ ಸಂಖ್ಯೆ ಹೆಚ್ಚಿದಂತೆ ಮಾರಾಟಗಾರರಿಗೆ ಕೊಂಚ ಧೈರ್ಯ ಬಂದಂತಿದೆ. ಕೆಲವರು ಗೂಡಂಗಡಿಗಳಲ್ಲಿ ಬಹಿರಂಗವಾಗಿಯೇ ಮಾರಾಟ ನಡೆಸುತ್ತಿದ್ದಾರೆ. ಸಾರ್ವಜನಿಕರು ಇದರಿಂದ ಬೇಸತ್ತಿದ್ದರೂ ದೂರು ನೀಡಲು ಹೆದರುತ್ತಿದ್ದಾರೆ. ಹೀಗಾಗಿ ದಂಧೆ ನಿರಾತಂಕವಾಗಿ ನಡೆದಿದೆ.
ಮದ್ಯವ್ಯಸನಿಗಳಾಗಲು ಕಾರಣ: ಗ್ರಾಮಾಂತರ ಪ್ರದೇಶದಲ್ಲಿ ಇಂತಹ ದಂಧೆ ನಡೆಯುವುದರಿಂದ ಕೆಲವು ಯುವಕರು ಸಹವಾಸ ದೋಷದಿಂದ ಇಂತಹ ವ್ಯಸನದತ್ತ ಆಕರ್ಷಿತರಾಗುತ್ತಿದ್ದಾರೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಇಂತಹ ದಂಧೆ ನಡೆಸುವವರು ಗೂಂಡಾಗಿರಿ ನಡೆಸುವುದು ಅಥವಾ ರಾಜಕೀಯ ಪ್ರಭಾವ ಹೊಂದಿರುವುದರಿಂದ ಯಾರೊಬ್ಬರೂ ದೂರು ನೀಡುವ ಗೋಜಿಗೆ ಹೋಗುವುದಿಲ್ಲ. ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಯಾವುದೇ ದೂರು ಬಾರದ ಕಾರಣ ಸುಮ್ಮನಿರುತ್ತಾರೆ. ಅದಕ್ಕೂ ಮೀರಿ ಅನಧಿಕೃತ ಮದ್ಯ ಮಾರಾಟ ಅಡ್ಡೆ ಮೇಲೆ ದಾಳಿ ಮಾಡಿದರೂ ಹೆಚ್ಚಿನ ಪ್ರಯೋಜನ ಆಗುವುದಿಲ್ಲ, ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗುವುದಿಲ್ಲ.
ಜವಾಬ್ದಾರಿ ಯಾರದ್ದು?: ಅಕ್ರಮ, ಅನಧಿಕೃತ ಮದ್ಯ ಮಾರಾಟ ತಡೆಯುವ ಜವಾಬ್ದಾರಿ ಅಬಕಾರಿ ಇಲಾಖೆಯದ್ದು. ಪೊಲೀಸ್ ಇಲಾಖೆ, ಲಾಟರಿ ನಿಷೇಧ ದಳದ ಮೂಲಕ ನಿಯಂತ್ರಣ ಮಾಡಲಾಗುತ್ತದೆ. ಪೊಲೀಸ್ ಇಲಾಖೆಯವರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸುತ್ತಾರೆ. ಆದರೆ ಈ ದಂಧೆಯನ್ನು ಪರಿಣಾಮಕಾರಿಯಾಗಿ ತಡೆಯಲು ಅಬಕಾರಿ ಇಲಾಖೆ-ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗಿದೆ.
2010-11ರಲ್ಲಿ ಅಬಕಾರಿ ಇಲಾಖೆಯವರು ಅನಧಿಕೃತವಾಗಿ ಮದ್ಯ ಮಾರಾಟದ 150 ಪ್ರಕರಣಗಳನ್ನು ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ಸ್ ರೂಲ್ಸ್‌ನ ಕಲಂ 15(ಎ) ಅಡಿಯಲ್ಲಿ ದಾಖಲಿಸಿಕೊಂಡಿದ್ದಾರೆ. 228.033 ಲೀಟರ್ ಮದ್ಯವನ್ನು ವಶಪಡಿಸಿಕೊಂಡು, 150 ಜನರನ್ನು ಬಂಧಿಸಿದ್ದಾರೆ. 2011-12ರಲ್ಲಿ 163 ಕಡೆಗಳಲ್ಲಿ ದಾಳಿ ಮಾಡಿ, 261.970 ಲೀಟರ್ ವಶಪಡಿಸಿಕೊಂಡು 163 ಆರೋಪಿಗಳನ್ನು ಬಂಧಿಸಿದ್ದಾರೆ. 2012-13ರಲ್ಲಿ 243 ಮೊಕದ್ದಮೆಗಳನ್ನು ದಾಖಲಿಸಿಕೊಂಡು, 1068.966 ಲೀಟರ್ ವಶಪಡಿಸಿಕೊಂಡು, 242 ಆರೋಪಿಗಳನ್ನು ಬಂಧಿಸಿದ್ದಾರೆ. 2013-14ರಲ್ಲಿ ಅಕ್ಟೋಬರ್ ಒಳಗೆ 65 ಪ್ರಕರಣ ದಾಖಲಿಸಿಕೊಂಡು 66.540 ಲೀಟರ್ ವಶಪಡಿಸಿಕೊಂಡು, 68 ಆರೋಪಿಗಳನ್ನು ಬಂಧಿಸಿದ್ದಾರೆ.

ಬೀಳಲಿ ಕಡಿವಾಣ
ಒಬ್ಬ ವ್ಯಕ್ತಿ 24 ಮದ್ಯದ ಬಾಟಲಿಗಳನ್ನು ಸ್ವಂತ ಬಳಕೆಗೆ ಖರೀದಿಸಬಹುದಾದ ಸೌಲಭ್ಯ ಕಾನೂನಿನಲ್ಲಿದೆ. ಈ ಅವಕಾಶ ದುರುಪಯೋಗಪಡಿಸಿಕೊಂಡು ಗ್ರಾಮೀಣ ಪ್ರದೇಶದ ಕೆಲವು ಗೂಡಂಗಡಿಗಳಲ್ಲಿ ಮದ್ಯ ಸಂಗ್ರಹಿಸಿ, ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಮದ್ಯ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಸಾರ್ವಜನಿಕರು ಇಂತಹ ದಂಧೆಯಿಂದ ಬೇಸತ್ತಿದ್ದರೂ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಅಬಕಾರಿ-ಪೊಲೀಸ್ ಇಲಾಖೆ ಪರಿಣಾಮಕಾರಿ ಕಾರ್ಯಾಚರಣೆ ನಡೆಸಿ, ಇಂತಹ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ.
- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.