ದಾರಿ ತೋರಿದ ಗೆಳೆಯನಿಗೆ ವಿಷವಿಟ್ಟ
ಬಳ್ಳಾರಿ: ಫ್ರೆಂಡ್ ಈಜ್ ಸೆಕೆಂಡ್ ವೈಫ್ ಎಂಬ ಮಾತು ಸರ್ವ ಕಾಲಕ್ಕೂ ಸತ್ಯ. ಆದರೆ ಇದೀಗ ಇಂತಹ ಮಾತನ್ನು ಗೆಳೆಯನೋರ್ವ ಸುಳ್ಳು ಮಾಡಲು ಹೊರಟಿದ್ದು ಮಾತ್ರ ದುರಂತ. ಆತ್ಮೀಯ ಗೆಳೆಯನನ್ನೇ ಐಸ್ಕ್ರೀಂನಲ್ಲಿ ವಿಷ ಬೆರೆಸಿ ಕೊಲೆ ಮಾಡಿದವನಿಗೆ (ನಾಗರಾಜ್) ಕೋರ್ಟ್ ಜೀವಾವಧಿ ಶಿಕ್ಷೆ ನೀಡಿ, ಫ್ರೆಂಡ್ ಈಜ್ ಸೆಕೆಂಡ್ ವೈಫ್ ಈಸ್ ಟ್ರು ಎಂದು ಸಾಬೀತುಪಡಿಸುವುದರೊಂದಿಗೆ, ಗೆಳೆತನಕ್ಕೆ ದ್ರೋಹ ಬಗೆದವರಿಗೆ ಇದೇ ಗತಿ ಎಂಬ ಸಂದೇಶ ಸಾರುವ ಮಹತ್ವದ ತೀರ್ಪನ್ನು ಬಳ್ಳಾರಿಯ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ನೀಡಿದೆ.
ಜೀವನಕ್ಕೆ ದಾರಿ ತೋರಿಸಿದ ಗೆಳೆಯನಿಗೆ 2011ರ ಆಗಸ್ಟ್ ತಿಂಗಳಲ್ಲಿ ಐಸ್ಕ್ರೀಂನಲ್ಲಿ ವಿಷ ಹಾಕಿ ಕೊಲೆ ಮಾಡಿದ್ದ ಪ್ರಕರಣದ ಕುರಿತು ಬಳ್ಳಾರಿ ನ್ಯಾಯಾಲಯ ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ರು. 50 ಸಾವಿರ ದಂಡ ವಿಧಿಸುವ ಮೂಲಕ ಸ್ನೇಹ ಎಂಬ ಬಂಧಕ್ಕೆ ಕುತ್ತು ತಂದರೆ ಏನು ಗತಿ ಎಂಬುದನ್ನು, ಗೆಳೆಯರಿಗೆ ಹೀಗೆ ಮಾಡದಂತೆ ಎಚ್ಚರದಿಂದ ಇರುವಂತೆ ಹೇಳುವ ಶಿಕ್ಷೆ ನೀಡಿರುವುದು ಸಂತಸದ ಸಂಗತಿ.
ಜೀವನಕ್ಕೆ ದಾರಿ ತೋರಿಸಿದ್ದ: ಹಲವು ಸಂದರ್ಭದಲ್ಲಿ ಯಾವುದೆ ವ್ಯಕ್ತಿ, ತನ್ನ ತಂದೆ, ತಾಯಿ, ಹೆಂಡತಿ, ಬಂಧುಗಳ ಬಳಿ ಹೇಳದ ವಿಷಯಗಳನ್ನು ಗೆಳೆಯನ ಮುಂದೆ ಹೇಳಿ ಭಾರ ಕಳೆದುಕೊಂಡು, ಸಮಸ್ಯೆಗೆ ಪರಿಹಾರ ಹುಡುಕುತ್ತಾನೆ. ಬಳ್ಳಾರಿ ತಾಲೂಕಿನ ಹಿರೇಹಡ್ಲಿಗಿ ಗ್ರಾಮದ ತಿಪ್ಪೇಶ್ ಹಾಗೂ ನಾಗರಾಜ್ ಸ್ನೇಹಿತರು. ಗ್ರಾಮೀಣ ಪ್ರದೇಶದಲ್ಲಿ ಆರ್ಎಂಪಿ ವೈದ್ಯರೆಂದು ಕರೆಸಿಕೊಳ್ಳುವ ವೃತ್ತಿ ಮಾಡುತ್ತಿದ್ದರು. ತಿಪ್ಪೇಶ್ ಸಂಡೂರಿನ ಭುಜಂಗನಗರದಲ್ಲಿ ವೈದ್ಯ ವೃತ್ತಿ ನಡೆಸುತ್ತಿದ್ದು, ಮದುವೆಯಾದ ನಂತರ ಉಜ್ಜಿನಿಯಲ್ಲಿರುವ ತಾನು ಖರೀದಿಸಿದ್ದ ಭೂಮಿ ಉಳಿಮೆಗೆ ಹೋಗಿದ್ದ. ಇನ್ನು ಭುಜಂಗನಗರದಲ್ಲಿ ವೈದ್ಯನೆಂದು ಉತ್ತಮ ಹೆಸರಿತ್ತು. ಆಗ ಹಿರೇಹಡ್ಲಿಗಿ ಗ್ರಾಮದ ತನ್ನ ಗೆಳೆಯ ನಾಗರಾಜ್ ತಿಪ್ಪೇಶ್ ಹತ್ತಿರ ಹೋಗಿ, ಭುಜಂಗನಗರದ ತನ್ನ ಕ್ಲಿನಿಕ್ನಲ್ಲೇ ವೈದ್ಯ ವೃತ್ತಿ ಮುಂದುವರಿಸುವಂತೆ ಅವಕಾಶ ಮಾಡಿಕೊಡು ಎಂದ ಕೇಳಿದ್ದಾನೆ. ಗೆಳೆಯನಿಗೆ ದಾರಿ ತೋರಿಸುವ ಉದ್ದೇಶದಿಂದ ತಿಪ್ಪೇಶ್ ಒಪ್ಪಿ, ನಾಗರಾಜ್ನಿಗೆ ಜೀವನದ ದಾರಿ ತೋರಿಸಿದ್ದ.
ದಾರಿ ತೋರಿಸಿದ ಗೆಳೆಯನನ್ನೇ ಕೊಂದ: ಉಜ್ಜಿನಿಯಲ್ಲಿ ಕೃಷಿ ಮಾಡಲು ಹೋದ ತಿಪ್ಪೇಶನಿಗೆ ಕೃಷಿಯಲ್ಲಿ ನಷ್ಟವಾದ ಹಿನ್ನಲೆಯಲ್ಲಿ ಸಂಡೂರು ತಾಲೂಕಿನ ಕೃಷ್ಣನಗರಕ್ಕೆ ಬಂದು ತನ್ನ ಆರ್ಎಂಪಿ ವೈದ್ಯ ವೃತ್ತಿ ಮುಂದುವರಿಸಿದ. ಇತ್ತ ಭುಜಂಗನಗರದಲ್ಲಿ ನಾಗರಾಜ್ ವೈದ್ಯ ವೃತ್ತಿ ನಡೆಸುತ್ತಿದ್ದರೂ, ಈತನ ಚಿಕಿತ್ಸೆ ಬಗ್ಗೆ ಅಲ್ಲಿನ ಜನರ ಮನಸ್ಸಿಗೆ ಅಷ್ಟಾಗಿ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಭುಜಂಗನಗರದ ಜನರು ಕೃಷ್ಣನಗರದಲ್ಲಿದ್ದ ತಿಪ್ಪೇಶ್ನ ಹತ್ತಿರ ಬಂದು, ತಾವೇ ಭುಜಂಗನಗರಕ್ಕೆ ಬರಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ತಿಪ್ಪೇಶ್ ಎರಡು ಕಡೆ ವೃತ್ತಿ ನಿರ್ವಹಿಸುತ್ತಿದ್ದ. ಇದುವೇ ನಾಗರಾಜನಿಗೆ ಸಹಿಸದಾಯಿತು. ತಿಪ್ಪೇಶ್ ಭುಜಂಗನಗರಕ್ಕೆ ಬಂದರೆ ತನ್ನ ವೃತ್ತಿಗೆ ಕುತ್ತು ಎಂಬ ಕಾರಣಕ್ಕೆ ತಿಪ್ಪೇಶನನ್ನೇ ನಾಗರಾಜ್ ಕೊಲೆ ಮಾಡಲು ಮುಂದಾದ.
ಎರಡು ಬಾರಿ ವಿಫಲವಾಗಿದ್ದ: ತಿಪ್ಪೇಶನಿಗೆ ಭುಜಂಗನಗರಕ್ಕೆ ಬರಬೇಡ ಎಂದು ನಾಗರಾಜ್ ಹೇಳಿದ್ದ. ಅಲ್ಲದೆ, ತಿಪ್ಪೇಶನನ್ನು ಕೊಲೆ ಮಾಡಲು ಎರಡು ಪ್ರಯತ್ನ ನಡೆಸಿದ್ದ ಎಂಬುದನ್ನು ತಿಪ್ಪೇಶನ ಹೆಂಡತಿ ಗೌರಮ್ಮ ತನ್ನ ದೂರಿನಲ್ಲಿ ತಿಳಿಸಿದ್ದಳು. ಒಂದು ಸಾರಿ ಕೃಷ್ಣನಗರಕ್ಕೆ ನಾಗರಾಜ್ ಬಂದು, ಗೌರಮ್ಮ ಹೊರ ಹೋಗಿರುವುದು ನೋಡಿ, ಅಡುಗೆ ಮನೆಯಲ್ಲಿದ್ದ ಅಡುಗೆಗೆ ವಿಷ ಬೆರೆಸಲು ಮುಂದಾಗಿದ್ದನ್ನು ಗೌರಮ್ಮ ನೋಡಿದ್ದಾಳೆ. ಅದೇ ವಿಷಯವನ್ನು ತನ್ನ ಪತಿ ತಿಪ್ಪೇಶನಿಗೆ ಹೇಳಿದ್ದಾಳೆ. ಆದರೆ ಆಪ್ತ ಗೆಳೆಯ ಆ ರೀತಿ ಏಕೆ ಮಾಡುತ್ತಾನೆ ಎಂದು ಹೆಂಡತಿಯ ಮಾತನ್ನು ತಿಪ್ಪೇಶ ನಿರ್ಲಕ್ಷ್ಯ ಮಾಡಿದ್ದಾನೆ. ಇನ್ನು ಮದ್ಯದಲ್ಲಿ ವಿಷ ಬೇರಿಸಿ ಕೊಲೆ ಮಾಡಲು ಪ್ರಯತ್ನಿಸಿ ವಿಫಲವಾಗಿದ್ದ.
ಕೊನೆಗೆ ತೋರಣಗಲ್ನಲ್ಲಿ ಹೊಸದಾಗಿ ಕ್ಲಿನಿಕ್ ಆರಂಭಿಸುತ್ತೇನೆ ಎಂದು ಹೇಳಿ, ಆ. 1, 2011ರಂದು ತೋರಣಗಲ್ಗೆ ಕರೆಸಿಕೊಂಡಿದ್ದಾನೆ. ಸಾವಿನ ಕೊನೆ ಕ್ಷಣದವರೆಗೆ ಆಪ್ತ ಗೆಳೆಯ ಎಂದುಕೊಂಡು, ಐಸ್ಕ್ರೀಂನಲ್ಲಿ ವಿಷವಿರುವುದು ತಿಳಿಯದೆ, ಹೊಟ್ಟೆಗೆ ತಂಪು ಕೊಡುವ ಐಸ್ಕ್ರೀಂ ತಿನಿಸುವ ಮೂಲಕ ತನ್ನ ಸಂಸಾರದ ಹೊಟ್ಟೆ ಮೇಲೆ ಚಾಪೆ ಎಳೆಯುತ್ತಾನೆ ಎಂಬ ಸತ್ಯ ತಿಳಿಯದ ಅಮಾಯಕ ತಿಪ್ಪೇಶನಿಗೆ ವಿಷ ಉಣಿಸಿ ಕೊಲೆ ಮಾಡಿದ್ದಾನೆ ಎಂಬುದು ಸಾಬೀತಾಗಿದೆ. ವಾದ ಮತ್ತು ಪ್ರತಿವಾದ ಆಲಿಸಿದ ನ್ಯಾಯಾಧೀಶ ಬಸವರಾಜ್ ಅವರು, ಸ್ನೇಹಿತನಿಗೆ ವಿಷ ಉಣಿಸಿ ಕೊಲೆ ಮಾಡಿದ ನಾಗರಾಜ್ ಹಾಗೂ ರಾಮೇಶ್ವರನಿಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

