ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಒತ್ತಾಯ
ಬಳ್ಳಾರಿ: ತಾಲೂಕಿನ ವಿವಿಧ ಮೆದು ಕಬ್ಬಿಣ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಯುಟಿಯುಸಿ ಜಿಲ್ಲಾ ಸಮಿತಿ ಕಾರ್ಯಕರ್ತರು ಕಾರ್ಮಿಕ ಸಚಿವ ಪರಮೇಶ್ವ ನಾಯ್ಕಗೆ ಮನವಿ ಸಲ್ಲಿಸಿದರು. ತಾಲೂಕಿನ ಜಾನೆಕುಂಟೆ, ಜಾನೆಕುಂಟೆ ತಾಂಡಾ, ಹರಗಿನಡೋಣಿ, ಹರಗಿನಡೋಣಿ ತಾಂಡಾ, ವೇಣಿವೀರಾಪುರ, ಕುಡತಿನಿ ಮತ್ತು ಸಿಡಿಗಿನಮೊಳ ಗ್ರಾಮ ಸೇರಿದಂತೆ ಸುಮಾರು 25 ಮೆದು ಕಬ್ಬಿಣ ಕಾರ್ಖಾನೆಗಳು ತಲೆಯೆತ್ತಿದ್ದು, ಲಕ್ಷಾಂತರ ಕಾರ್ಮಿಕರು ಕನಿಷ್ಠ ವೇತನಕ್ಕೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂದಿನ ದುಬಾರಿ ಯುಗದಲ್ಲಿ ಕಾರ್ಖಾನೆಗಳು ನೀಡುವ ಅತ್ಯಲ್ಪ ಸಂಬಳದಿಂದ ಜೀವನ ನಿರ್ವಹಣೆ ಕಷ್ಟಕರ ಎಂದು ಎಐಯುಟಿಯುಸಿ ಜಿಲ್ಲಾ ಸಮಿತಿ ಸಂಚಾಲಕ ಆರ್. ಸೋಮಶೇಖರ್‌ಗೌಡ ತಿಳಿಸಿದರು. ಅಧಿಕ ಧೂಳು ಕಾಣಸಿಗುವ ಕಬ್ಬಿಣ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಸೂಕ್ತ ಭದ್ರತೆ, ಸಮವಸ್ತ್ರ, ಧೂಳಿನ ಕವಚ ಇನ್ನಿತರೆ ಸುರಕ್ಷತೆಗಳೆ ಇಲ್ಲ. ಕನಿಷ್ಠ ವೇತನ, ಸುರಕ್ಷತಾ ಕ್ರಮ ಸೇರಿದಂತೆ ಕಾರ್ಮಿಕರ ಇತರೆ ನ್ಯಾಯಬದ್ಧ ಸೌಲಭ್ಯ ದೊರೆಯುವಂತೆ ನಿಯಮಾವಳಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು. ಎ. ದೇವದಾಸ್, ಉಮಾನಾಯಕ್, ತಾಯಣ್ಣ, ಮಂಜನಾಯಕ್, ಮಂಗು ನಾಯಕ್ ಇದ್ದರು.
ಅರ್ಜಿ ಆಹ್ವಾನ
ಬಳ್ಳಾರಿ: ಬಳ್ಳಾರಿ (ನಗರ) ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ 9 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 18ರಿಂದ 44 ವರ್ಷದೊಳಗಿದ್ದು, ಕನಿಷ್ಠ 4ನೇ ತರಗತಿ ಹಾಗೂ ಗರಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರಬೇಕು. ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ಸೇರಿರಬೇಕು. ಕಾಯಂ ಬಿಪಿಎಲ್ ಕಾರ್ಡಿನ ಪ್ರತಿ ಲಗತ್ತಿಸಬೇಕು. ಬಿಪಿಎಲ್ ಅಭ್ಯರ್ಥಿಗಳಿಂದ ಅರ್ಜಿ ಬಾರದಿದ್ದಲ್ಲಿ ಎಪಿಎಲ್ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಅಂಗವಿಕಲರು ಅರ್ಜಿ ಸಲ್ಲಿಸುವಂತಿಲ್ಲ. ಬಂಡಿಮೋಟ್, ಅಂದ್ರಾಳ್ (ಮಂಡಾಳ ಬಟ್ಟಿ), ಅಂದ್ರಾಳ್ (ರಾಮನಗರ), ಅಂದ್ರಾಳ್ (ಡಿಸಿ ಕಾಲೋನಿ), ವರಬಸಪ್ಪ ಗುಡಿ, ಕವಾಡಿ ಬೀದಿ, ಬಂಡಿಹಟ್ಟಿ, ಬೆಳಗಲ್‌ಕ್ರಾಸ್, ಶ್ರೀನಿವಾಸನಗರ ಕ್ಯಾಂಪ್‌ನ ಅಂಗನವಾಡಿ ಕೇಂದ್ರಗಳಲ್ಲಿ ಹುದ್ದೆಗಳು ಖಾಲಿಯಿದ್ದು, ವರಬಸಪ್ಪಗುಡಿ ಅಂಗವಾಡಿ ಕೇಂದ್ರದ ಹುದ್ದೆ ಪ.ಜಾತಿಗೆ ಮೀಸಲು. ಉಳಿದವು ಸಾಮಾನ್ಯ ವರ್ಗಕ್ಕೆ ಮೀಸಲು. ಆಸಕ್ತರು ಅರ್ಜಿಯೊಂದಿಗೆ ಜನನ, ಜಾತಿ, ವಾಸಸ್ಥಳ ಪ್ರಮಾಣಪತ್ರ, ವಿಶೇಷ ಅರ್ಹತೆಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದ ಮೂಲ ಪ್ರಮಾಣ ಪತ್ರ, ಅಂಕಪಟ್ಟಿ, ಮತ್ತಿತರ ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ, 2014ರ ಜ. 6ರೊಳಗಾಗಿ ಬಳ್ಳಾರಿ(ನಗರ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ಹಂಪಿ ಉತ್ಸವದಲ್ಲಿ ವಿಕಲಚೇತನ ಕಲಾವಿದರಿಗೆ ಅವಕಾಶ ನೀಡಿ
ಹೊಸಪೇಟೆ: ಹಂಪಿ ಉತ್ಸವದಲ್ಲಿ ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಹಾಗೂ ಸ್ಥಳೀಯ ವಿಕಲಚೇತನ ಕಲಾವಿದರನ್ನು ಪರಿಗಣಿಸುವಂತೆ ಒತ್ತಾಯಿಸಿ ವಿಕಲಚೇತನರ ಸಂಘಟನೆ ಮುಖಂಡರು ಸೋಮವಾರ ಎಸಿ ಪಿ. ಸುನೀಲ್‌ಕುಮಾರ್‌ಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.
ಹಂಪಿ ಉತ್ಸವ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ಉತ್ಸವದಲ್ಲಿ ಅಂಗವಿಕಲರ ಕ್ರೀಡಾಕೂಟ ಹಮ್ಮಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸೂಚಿಸಿದ್ದು, ಪ್ರತಿ ಬಾರಿ ಉತ್ಸವದಲ್ಲಿ ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡದ ಕಾರಣ ವಿಕಲಚೇತನರು ಹಂಪಿ ಉತ್ಸವ ನೋಡಲು ಆಗುತ್ತಿಲ್ಲ. ಎಷ್ಟೋ ಬಾರಿ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೆ ಪ್ರಯೋಜವಾಗಿಲ್ಲ. ಇಲ್ಲಿಯೇ ಹುಟ್ಟಿದ್ದರೂ ವಿಕಲಚೇತನರು ಈ ಹಂಪಿ ಉತ್ಸವದ ವೀಕ್ಷಣೆಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಈ ಬಾರಿಯ ಹಂಪಿ ಉತ್ಸವ ವೀಕ್ಷಣೆಗೆ ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ವಿಕಲಚೇತನರು ಪ್ರತಿಭೆಯುಳ್ಳವವರಿದ್ದಾರೆ. ಇವರಿಗೆ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಪ್ರತಿ ಬಾರಿಯಂತೆ ಈ ಬಾರಿಯೂ ಸ್ಥಳೀಯ ಕಲಾವಿದರನ್ನು ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಜಿ. ಮುಕ್ಕಣ್ಣ, ಕೆ.ಜಿ. ವೆಂಕಟೇಶ್, ಎನ್. ವೆಂಕಟೇಶ್, ಜಿ. ಅಂಜಿನಿ, ಹುಲುಗಪ್ಪ, ಪಾಂಡುನಾಯ್ಕ ಎಲ್., ಅಶೋಕ್‌ಕುಮಾರ್, ಅರುಣ್‌ಕುಮಾರ್, ಚಾಂದ್‌ಬಿ, ವೆಂಕಮ್ಮ, ಖಾಜಾಬಾನಿ, ಉದೇದಪ್ಪ, ರಾಜಾಸಾಬ್, ಜಿ. ರಾಜಶೇಖರ್, ರಘು, ನಾಗಮ್ಮ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

