ಬಳ್ಳಾರಿ

ಬುಡಕಟ್ಟು ಸಮುದಾಯ ಒಕ್ಕಲೆಬ್ಬಿಸದಿರಿ: ಕೃಷ್ಣಯ್ಯ

Published On :

ಕಂಪ್ಲಿ: ಪುನರ್ವಸತಿ ಹೆಸರಿನಲ್ಲಿ ಅರಣ್ಯ ಆಧಾರಿತ ಆದಿವಾಸಿ, ಬುಡಕಟ್ಟು ಸಮುದಾಯಗಳನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣಯ್ಯ ಎಂದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಆದಿವಾಸಿ ಬುಡಕಟ್ಟು ಸಮುದಾಯಗಳ ಸಂಘಟನಾ ಸಭೆಯಲ್ಲಿ ಮಾತನಾಡಿ, ಆದಿವಾಸಿ ಬುಡಕಟ್ಟು ಸಮುದಾಯಗಳ ರಕ್ಷಣೆಗೆ ನಿಲ್ಲಬೇಕಿದ್ದ ಜಿಲ್ಲಾ ಅನುಷ್ಠಾನ ಸಮಿತಿ ಪುನರ್ವಸತಿ ನೆಪದಲ್ಲಿ ಬಲವಂತವಾಗಿ ಒಕ್ಕಲೆಬ್ಬಿಸುತ್ತಿದ್ದು, ಅವರ ಜೀವನ ಅತಂತ್ರವಾಗಿದೆ. ಸೂಕ್ತ ರಕ್ಷಣೆಯಿಲ್ಲದೆ ಭೂ ಒಡೆತನ, ವೈಯಕ್ತಿಕ ಹಾಗೂ ಪಾರಂಪರಿಕ ಸ್ವಾಮ್ಯತೆ, ಸಮುದಾಯಿಕ ಹಕ್ಕುಗಳಿಂದ ವಂಚಿತರಾಗಿ ಅತಂತ್ರರಾಗಿ ಬದುಕುತ್ತಿದ್ದಾರೆ. ಅರಣ್ಯವಾಸಿಗಳ 2006ರ ಕೇಂದ್ರ ಸರ್ಕಾರದ ಕಾನೂನುಗಳು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ಆದಿವಾಸಿಗಳ ವೈಯಕ್ತಿಕ ಮತ್ತು ಸಮುದಾಯಿಕ ಹಕ್ಕುಗಳ ರಕ್ಷಣೆ ಮಾಡಲು ರಾಜ್ಯ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಒತ್ತಾಯಿಸಿದರು.
ಆದಿವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಸರ್ಕಾರ ಪೂರಕ ತರಬೇತಿ, ಶಿಕ್ಷಣ, ಉದ್ಯೋಗ ಸೃಷ್ಟಿಸಲು ಆದ್ಯತೆ ನೀಡುತ್ತಿಲ್ಲ. ಪರಿಶಿಷ್ಟ ಜಾತಿ ಪಟ್ಟಿಯ 38ನೇ ಕಲಂನಲ್ಲಿನ 5 ಸಮುದಾಯಗಳ ಹೆಸರಿನಲ್ಲಿ ಇತರರು ಆದಿವಾಸಿಗಳ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದು ಖಂಡನಾರ್ಹ. ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣಯ್ಯ ಒತ್ತಾಯಿಸಿದರು.
ಆದಿವಾಸಿ ಯೋಜನೆ: ಆದಿವಾಸಿ ಜಾತಿ ಪ್ರಮಾಣಪತ್ರ ನೀಡುವಾಗ ಬುಡಕಟ್ಟು ಲಕ್ಷಣ ಪರಿಗಣಿಸಿ ಆದಿವಾಸಿ ಜಾತಿ ಪ್ರಮಾಣಪತ್ರ ನೀಡಬೇಕು. ಸರ್ಕಾರ ರೂಪಿಸಿರುವ ಆದಿವಾಸಿ ಯೋಜನೆಗಳು ಅವೈಜ್ಞಾನಿಕವಾಗಿವೆ. ಆದಿವಾಸಿಗಳೊಂದಿಗೆ ಸಮಗ್ರವಾಗಿ ಚರ್ಚಿಸದೆ ಆದಿವಾಸಿ ಯೋಜನೆಗಳನ್ನು ಸರ್ಕಾರ ರೂಪಿಸಬಾರದು. ಆದಿವಾಸಿಗಳ ಬಗ್ಗೆ ಸಮಗ್ರವಾಗಿ ತಿಳಿದಿರುವವರು ಆದಿವಾಸಿಗಳ ಯೋಜನೆಗಳನ್ನು ರೂಪಿಸಬೇಕು. ಪ್ರತಿ ಜಿಲ್ಲೆಯಲ್ಲಿ ಆದಿವಾಸಿಗಳ ಸಮುದಾಯ ಭವನ, ಪ್ರತಿ ತಾಲೂಕುಗಳಲ್ಲಿ ಕೇಂದ್ರೀಯ ಮಾದರಿ ವಸತಿ ಸಹಿತ ಶಾಲೆಗಳನ್ನು ಸ್ಥಾಪಿಸಬೇಕು. ರಾಜ್ಯದಲ್ಲಿನ ಗಿರಿಜನ ಆಶ್ರಮ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಗುಣಾತ್ಮಕ ಶಿಕ್ಷಣ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆದಿವಾಸಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಹಿತಾಸಕ್ತಿ ತೋರದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ  ಎಚ್.ಪಿ. ಶಿಕಾರಿ ರಾಮು, ಜಗದೀಶ್, ರಾಜ್ಯ ಉಪಾಧ್ಯಕ್ಷ ಜಿ.ಎಸ್. ಪುಷ್ಕರ್, ಡಿಯೋಗ್ ಸಿದ್ದಿ, ರವಿ ಪ್ರಕಾಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಕಾವೇರ, ಮೈಸೂರು ಜಿಲ್ಲೆ ಅಧ್ಯಕ್ಷ ವಿಜಯಕುಮಾರ್, ಸಂಘಟನಾ ಕಾರ್ಯದರ್ಶಿ ಮಧುಕುಮಾರ್, ಕುಮಾರ, ಸಿಂಧೋಳ್ಳು ಸಮಾಜದ ರಾಜ್ಯ ಅಧ್ಯಕ್ಷ ರಾವುಲ್ ನಾಗಪ್ಪ, ಹಕ್ಕಿಪಿಕ್ಕಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ. ಶ್ರೀಕಾಂತ್, ಗುಡಾರ ಗುಡಿಸಲುವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜಿ. ಮಾಧವರಾವ್, ಮಹಾದೇವಿ, ಸಂಪತ್‌ಬಾಯಿ ಉಪಸ್ಥಿತರಿದ್ದರು. ಬುಡಕಟ್ಟು ಸಮುದಾಯಗಳ ಜನತೆ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.