ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ. 18
ಸುರಕ್ಷಿತ ಮತ್ತು ಸುಗಮ ವಾಹನ ಸಂಚಾರಕ್ಕೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಬೇಕು. ಇದರಿಂದ ಎಲ್ಲರಿಗೂ ಒಳಿತು. ಕಳಪೆ ಕಾಮಗಾರಿ ಮಾಡುವುದರಿಂದ ಗುತ್ತಿಗೆದಾರ, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೂ ಚ್ಯುತಿ ಬರುವಂತಾಗುತ್ತದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಬುಧವಾರ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ರು. 38 ಕೋಟಿ ವೆಚ್ಚದಲ್ಲಿ ಕಲ್ಮಲಾ-ಶಿಗ್ಗಾಂವ ರಾಜ್ಯ ಹೆದ್ದಾರಿ 23 ಶಿರಹಟ್ಟಿ ಹದ್ದಿನಿಂದ ಬನ್ನಿಕೊಪ್ಪ, ಬೆಳ್ಳಟ್ಟಿ, ಸೂರಣಗಿ ಮಾರ್ಗವಾಗಿ ಲಕ್ಷ್ಮೇಶ್ವರ ಹದ್ದಿನ ವರೆಗೆ 229 ಕಿ.ಮೀ. ದಿಂದ 273.61 ರವರೆಗೆ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯ ಹೆದ್ದಾರಿಯ ದುಸ್ಥಿತಿ ಕಂಡು ಸರ್ಕಾರ ರಸ್ತೆ ಅಭಿವೃದ್ಧಿಪಡಿಸಲು ಕೋಟ್ಯಂತರ ಅನುದಾನ ನೀಡಿದ್ದು, ಅಪಘಾತ ತಪ್ಪಿಸಲು ಗುಣಮಟ್ಟದ ಕಾಮಗಾರಿಯ ಜತೆಗೆ ಸಮತಟ್ಟಾಗಿ ರಸ್ತೆ ಕಾಮಗಾರಿ ಮಾಡುವತ್ತ ಅಧಿಕಾರಿಗಳು ಗಮನ ಹರಿಸಬೇಕು. ರಸ್ತೆಯ ಎರಡು ಬದಿಗಳಲ್ಲಿ ಪಕ್ಕಾ ಗಟಾರ್ ನಿರ್ಮಿಸಿ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಸಂಪೂರ್ಣವಾಗಿ ಕೊಪ್ಪಳ, ಹಾವೇರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಶಿರಹಟ್ಟಿ ಮತಕ್ಷೇತ್ರದಲ್ಲಿಯೇ ಮುಖ್ಯ ಹೆದ್ದಾರಿ ರಸ್ತೆ ಇದಾಗಿದೆ ಎಂದರು.
ಲಕ್ಷ್ಮೇಶ್ವರ-ಯಲ್ಲಾಪುರ ಗ್ರಾಮಗಳಲ್ಲಿ ರು. 7 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ. ಸೂರಣಗಿ ಗ್ರಾಮದಲ್ಲಿ ರು. 9 ಲಕ್ಷ ವೆಚ್ಚದಲ್ಲಿ ಪಕ್ಕಾ ಗಟಾರ್, ಹೊಳೆಇಟಗಿ ಗ್ರಾಮದಲ್ಲಿ ರು. 7 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಹೆಬ್ಬಾಳ-ತಾರಿಕೊಪ್ಪ, ಮಾಗಡಿ, ಲಕ್ಷ್ಮೇಶ್ವರ, ದೇವಿಹಾಳ ಗ್ರಾಮದಲ್ಲಿ ರು. 60 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೂ ಚಾಲನೆ ನೀಡುವುದಾಗಿ ತಿಳಿಸಿದರು. ಬರುವ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ನಮ್ಮ ಹೊಲ ನಮ್ಮ ಯೋಜನೆ ಅಡಿಯಲ್ಲಿ ರೈತ ಸಂಪರ್ಕ ರಸ್ತೆ, ಚೆಕ್ ಡ್ಯಾಂ ನಿರ್ಮಾಣ ಕೈಗೊಳ್ಳಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ತಿಮ್ಮರಡ್ಡಿ ಮರಡ್ಡಿ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಎಸ್.ಎಸ್. ಗೋಕಾವಿ, ಜಿಲ್ಲಾ ಲೋಕೋಪಯೋಗಿ ಇಲಾಖೆ ಅಭಿಯಂತರ ಸಿ.ಆರ್. ಬಳ್ಳಾರಿ ಮಾತನಾಡಿದರು. ಜಿಪಂ ಸದಸ್ಯೆ ಕಮಲವ್ವ ಸಜ್ಜನರ, ಗ್ರಾಪಂ ಸದಸ್ಯ ಮೋಹನ್ ಗುತ್ತೆಮ್ಮನವರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆಪ್ಪ ವರ್ದಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣಗೌಡ ಪಾಟೀಲ, ಮಹೇಂದ್ರ ಮುಂಡವಾಡ, ವೆಂಕಣ್ಣ ಮರಡ್ಡಿ, ದೇವರಡ್ಡಿ ಅಳವಂಡಿ, ದೇವು ಲಮಾಣಿ, ಕೊಟ್ರೇಶ ಅಂಗಡಿ, ಮಲ್ಲೇಶಪ್ಪ ಶ್ಯಾಗೋಟಿ, ಬಿ.ಎಸ್. ಮೇಟಿ, ಬಸವರಾಜ ಮುಂಡವಾಡ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

