ಬಳ್ಳಾರಿ

ಕುಡಿವ ನೀರಿನ ಸಮಸ್ಯೆ: ಸಭೆಯೊಳಗೆ ಧರಣಿ

Published On :

ಹೂವಿನಹಡಗಲಿ: ಕುಡಿಯುವ ನೀರಿನ ದೊಡ್ಡ ದೊಡ್ಡ ಯೋಜನೆ ಇದೆ ಎಂದು ಅಧಿಕಾರಿಗಳು ಕುದುರೆಗೆ ನೀರು ತೋರಿಸಿದಂತೆ ಸದಸ್ಯರಿಗೆ ನೀರು ತೋರುತ್ತಾ ಇದ್ದಾರೆ. 15 ದಿನಕ್ಕೂಮ್ಮೆ ನೀರು ಕಾಣುವ ಪರಿಸ್ಥಿತಿ ಇದೆ, ನಿಮಗೆ ಸರ್ಕಾರ ಸಂಬಳ ಕೊಡುತ್ತೆ ಬಿಸ್ಲೆರಿ ನೀರು ಕುಡಿಯುತ್ತೀರಿ. ಜನ ಏನು ಕುಡಿಯಬೇಕು ಎಂದು ತಾಪಂ ಸಭೆಯೊಳಗೆ ಸದಸ್ಯೆ ಧರಣಿ ಕುಳಿತ ಪ್ರಸಂಗ ನಡೆಯಿತು.
ಮಲ್ಲಿಗೆ ಸಭಾಂಗಣದಲ್ಲಿ ಶನಿವಾರ ತಾಪಂ ಸಾಮಾನ್ಯ ಸಭೆ ಜರುಗಿತು. ತಾಲೂಕಿನ ಹೊಳಗುಂದಿ ಸೇರಿದಂತೆ 11 ಗ್ರಾಮಗಳ ಸಂಯುಕ್ತ ಕುಡಿಯುವ ನೀರಿನ ಯೋಜನೆಯಿಂದ ಉತ್ತಂಗಿಗೆ 15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ, ಪ್ರತಿ ಸಭೆಯಲ್ಲೂ ನಿಮಗೆ ಹೇಳಿ ಹೇಳಿ ಸುಸ್ತಾಗಿದ್ದೇವೆ. ಉತ್ತಂಗಿಗೆ ನೀರು ಬರುವವರೆಗೂ ಪಟ್ಟು ಸಡಿಲಿಸುವುದಿಲ್ಲ ಎಂದು ಹೇಳಿ ಸಭೆಯೊಳಗೆ ಉತ್ತಂಗಿ ತಾಪಂ ಕ್ಷೇತ್ರ ಸದಸ್ಯೆ ಸಾವಿತ್ರಮ್ಮ ಧರಣಿ ಕುಳಿತರು.
ಎಇಇ ಮಹೇಶಪ್ಪ ಉತ್ತಂಗಿ ಗ್ರಾಮಕ್ಕೆ ಭೇಟಿ ನೀರಿನ ಸಮಸ್ಯೆ ಬಗೆಹರಿಸಿ ಬರುತ್ತಾರೆ. ಸಭೆಯಲ್ಲಿ ಹೀಗೆಲ್ಲ ಮಾಡುಬಾರದೆಂದು ಅಧ್ಯಕ್ಷೆ ಶಿಲ್ಪಾಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ಹರವಿ ಪ್ರಕಾಶ, ಸದಸ್ಯ ಐಗೋಳ್ ಚಿದಾನಂದ, ಜಗದೀಶ, ಮಂಗಳಾ ಸೇರಿ ಇತರರು ಸಮಾಧಾನ ಮಾಡಿದರು. ನಂತರ ಧರಣಿಯಿಂದ ಹಿಂದೆ ಸರಿದರು.
ಹಾಲಿನ ಪೌಡರ್ ಡೈರಿ ಪಾಲು: ಅಂಗನವಾಡಿ ಮಕ್ಕಳಿಗೆ ನೀಡುವ ಹಾಲಿನ ಪೌಡರ್‌ನ್ನು ಹಾಲು ಮಾಡಿ ಡೈರಿಗೆ ಹಾಕುತ್ತಿದ್ದಾರೆ. ಎಲ್ಲ ಕೇಂದ್ರಗಳಿಗೂ ಹುಳು ತುಂಬಿರುವ ಆಹಾರ ಧಾನ್ಯ ಪೂರೈಕೆಯಾಗಿದ್ದರೂ ಸಿಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸದಸ್ಯರು ದೂರಿದರು.
ಇದಕ್ಕೆ ಸ್ಪಂದಿಸಿದ ಸಿಪಿಡಿಒ ಸೋಮಣ್ಣ ಚಿನ್ನೂರು, ನಾವು ಅದು ಎಲ್ಲಿಗೆ ಹೋಗುತ್ತೆ ಎಂದು ನೋಡಿಕೊಂಡು ಕುಳಿತುಕೊಳ್ಳಲು ಆಗಲ್ಲ, ಕೊಡುವ ಜವಾಬ್ದಾರಿ ನಮ್ಮದು, ಹುಳು ತುಂಬಿರುವ ಆಹಾರ ಧಾನ್ಯ ಸ್ವಚ್ಛ ಮಾಡಿ ವಿತರಣೆಗೆ ಕ್ರಮಕೈಗೊಳ್ಳುತ್ತೇವೆಂದು ಎಂದು ಉಡಾಫೆ ಉತ್ತರ ನೀಡಿದಾಗ, ಅಧ್ಯಕ್ಷೆ ಶಿಲ್ಪಾಸಿಂಗ್, ಸದಸ್ಯರಾದ ಮಂಗಳಾ, ಸಾವಿತ್ರಮ್ಮ, ದುರುಗಮ್ಮ, ಜಗದೀಶ ನಿಮ್ಮ ಜವಾಬ್ದಾರಿ ಅಲ್ಲದಿದ್ದರೆ ನಿಮ್ಮ ಕೆಲಸವೇನು? ಪಟ್ಟಣದಲ್ಲಿ ಅಂಗಡಿಯೊಂದರಲ್ಲಿ ಆಹಾರ ಸಿಕ್ಕಿತು, ಈ ಕುರಿತು ಏನು ಮಾಡಿದ್ದೀರಿ ಎಂಬ ಪ್ರಶ್ನೆಗೆ ಅವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ತನಿಖೆ ಮಾಡುತ್ತಾರೆ ಎಂದರು.
16 ತಾಪಂ ವಾಣಿಜ್ಯ ಮಳಿಗೆ ಬಾಡಿಗೆ ಬಾಕಿ: ಶಾಸ್ತ್ರಿ ವೃತ್ತದ ತಾಪಂ ವಾಣಿಜ್ಯ ಮಳಿಗೆಗಳ ಬಾಡಿಗೆ ರು. 15,46,990 ಬಾಕಿ ಇದೆ, ಕರ ವಸೂಲಿಗೆ ಯಾಕೆ ಕ್ರಮವಿಲ್ಲ? ತಾಪಂ ಸಿಬ್ಬಂದಿ ರಾಮು ಇವರ ಸಂಬಳ ಕಟ್ ಮಾಡಿ ಉಳಿದ ಇಬ್ಬರಿಗೆ ಷೋಕಾಸ್ ನೋಟಿಸ್ ನೀಡಿಬೇಕೆಂದು ಸಭೆ ತೀರ್ಮಾನಿಸಿತು. ಬಾಡಿಗೆದಾರರು ಕೇವಲ ರು. 20 ಸಾವಿರ ಠೇವಣಿ ಇಟ್ಟಿದ್ದು, ಅವರ ಬಾಡಿಗೆ ಅದರ ನೂರು ಪಟ್ಟು ಹೆಚ್ಚಾಗಿದೆ. ಸರ್ಕಾರದ ಆಸ್ತಿ, ರಕ್ಷಣೆ ಮಾಡಿ, ನಾಳೆಯಿಂದ ಮಳಿಗೆಗಳಿಗೆ ಬೀಗ ಹಾಕಿ ಬಾಕಿ ಹಣ ವಸೂಲಿ ಮಾಡಿ ಎಂದು ಐಗೋಳ ಚಿದಾನಂದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ವಸೂಲಿಗಾಗಿ ಸಿಬ್ಬಂದಿ ನೇಮಿಸಿ, ತಿಂಗಳೊಳಗೆ ವಸೂಲಿ ಮಾಡದಿದ್ದರೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು. ಸಭೆಯಲ್ಲಿ ತಾಪಂ ಪ್ರಭಾರಿ ಇಒ ಡಾ. ರಂಗಪ್ಪ, ಅಧ್ಯಕ್ಷೆ ಶಿಲ್ಪಾಸಿಂಗ್ ರಾಠೋಡ್, ಸ್ಥಾಯಿ ಸಮಿತಿ ಅಧ್ಯಕ್ಷ ಹರವಿ ಪ್ರಕಾಶ್, ಸದಸ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.