ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ
ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಡಿ. 23
ಸಾಲಬಾಧೆ, ಬೆಳೆ ನಷ್ಟಕ್ಕೆ ಇನ್ನೂ ಮುಂದೆ ರೈತರು ವಿಷ ಕುಡಿದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ನಿಮ್ಮ ಹೆಸರಿನಲ್ಲಿ ಓಟು ಪಡೆದು ಅಧಿಕಾರಕ್ಕೇರಿದ ಮೇಲೆ ರೈತರ ಹಿತಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಜನಪ್ರತಿನಿಧಿಗಳು, ರೈತ ವಿರೋಧಿ ಅಧಿಕಾರಿಗಳಿಗೆ ವಿಷ ಕುಡಿಸುವ ಕೆಲಸ ಮಾಡಿ ಎನ್ನುವ ಸಲಹೆಯೊಂದನ್ನು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜೆ.ಎಂ. ವೀರಸಂಗಯ್ಯ ರೈತ ಸಮುದಾಯಕ್ಕೆ ಕೊಟ್ಟಿದ್ದಾರೆ.
ತಾಲೂಕು ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಒತ್ತಾಯಿಸಿ ಮಠಾಧೀಶರ ಧರ್ಮ ಪರಿಷತ್ತಿನ ಸಹಯೋಗದಲ್ಲಿ ತಾಲೂಕು ಸಮಗ್ರ ನೀರಾವರಿ ಹೋರಾಟ ಸಮಿತಿ ಸೋಮವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದ ಶ್ರೀಹಗರಿ ಅಂಜನೇಯಸ್ವಾಮಿ ಬಯಲುರಂಗ ಮಂದಿರದಲ್ಲಿ ಆಯೋಜಿಸಿದ್ದ ಧರಣಿಯನ್ನ್ನುದ್ದೇಶಿಸಿ ಅವರು ಮಾತನಾಡಿದರು.
ವಿಷ ಕುಡಿದು ಇಲ್ಲವೆ ನೇಣು ಬಿಗಿದುಕೊಂಡು ಸತ್ತರೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗದು. 6 ವರ್ಷಗಳಲ್ಲಿ ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡರೆ ರಾಷ್ಟ್ರ ಮಟ್ಟದಲ್ಲಿ 8 ಲಕ್ಷ ಮುಟ್ಟಿದೆ ಎಂದರು.
ತಾಲೂಕಿನ ಚಿಲುವಾರು ಬಂಡಿ ಏತನೀರಾವರಿ ಯೋಜನೆಗೆ ಹಣಕಾಸಿನ ಮಂಜೂರಾತಿ ಸಿಕ್ಕಿದೆ. ಆದರೆ, ತುಂಗಭದ್ರಾ ಮಂಡಳಿಯಿಂದ ನೀರು ಬಳಸಿಕೊಳ್ಳಲು ಪರವಾನಿಗೆ ಸಿಕ್ಕಿಲ್ಲ. ಅಲ್ಲದೆ ಸಣ್ಣಪುಟ್ಟ ಆಡಳಿತಾತ್ಮಕ ಅನುಮೋದನೆ ಅಗತ್ಯವಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿದ ಮೇಲಷ್ಟೆ ಚಿಲುವಾರು ಬಂಡಿ ಯೋಜನೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಆದರೆ, ಈ ವಿಷಯಗಳನ್ನು ಮುಚ್ಚಿಟ್ಟು ಯೋಜನೆಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಭೂಮಿಪೂಜೆ ನೇರವೇರಿಸಲಾಗಿದೆ. ಇದು ರೈತರನ್ನು ಹಾದಿ ತಪ್ಪಿಸುವ ಕೆಲಸ ಎಂದರು.
ಮಾಲ್ವಿ ಡ್ಯಾಂಗೆ ಎರಡು ಟಿಎಂಸಿ ನೀರಿನ ಅಗತ್ಯವಿದ್ದು, ಸಿಂಗಟಾಲೂರು ಬ್ಯಾರೇಜ್ನಿಂದ ಈ ನೀರು ತರಲು ಕೂಡಲೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರಸ್ವಾಮಿ, ಹಳೇಹಗರಿಬೊಮ್ಮನಹಳ್ಳಿ ಹಾಲಸ್ವಾಮಿಮಠದ ಹಾಲಶಂಕರ ಶ್ರೀ, ಮರಿಯಮ್ಮನಹಳ್ಳಿ ಗುರುಪಾದಮಠದ ಮಲ್ಲಿಕಾರ್ಜುನಸ್ವಾಮಿ, ಕೊಟ್ಟೂರು ಚಾನುಕೋಟಿಮಠದ ಸಿದ್ದಲಿಂಗ ಶ್ರೀ, ಹನಸಿಶಂಕರಲಿಂಗಸ್ವಾಮಿ, ಬಳ್ಳಾರಿ ಕಲ್ಯಾಣಸ್ವಾಮಿ, ಮಾನಿಹಳ್ಳಿ ಸಿದ್ದೇಶ್ವರಶ್ರೀ, ಪ್ರಶಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ರೈತ ಮುಖಂಡರಾದ ಅಂಗಡಿ ಗವಿಸಿದ್ದಪ್ಪ, ಬನ್ನಿಗೋಳ ವೆಂಕಣ್ಣ, ಎ. ಅಡಿವೆಪ್ಪ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಜಿ. ಚಂದ್ರಪ್ಪ, ಕರವೇ ನಗರ ಘಟಕದ ಅಧ್ಯಕ್ಷ ಸಂದೀಪ್, ಮಂಜುನಾಥಯ್ಯ, ಮಾಲ್ವಿ ಕೊಂಬಳಿ ಹುಲುಗಪ್ಪ, ರೈತಸಂಘದ ಮಹೇಶ್ವರಸ್ವಾಮಿ, ಸಿದ್ದರೆಡ್ಡಿ, ಹೆಗ್ಡಾಳ ನಾಗರಾಜ, ಕೆ. ಗೋವಿಂದಪ್ಪ ಧರಣಿಯಲ್ಲಿ ಭಾಗವಹಿಸಿದ್ದರು. ಸಮಿತಿ ಸಂಚಾಲಕ ಎ. ಅಡಿವೆಪ್ಪ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

