ಜೆಡಿಎಸ್ಗೆ ಜಿಲ್ಲಾ ಮುಂದಾಳು ಯಾರು?
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಸೂರ್ಯ ನಾರಾಯಣರೆಡ್ಡಿ ಅವರು ರಾಜಿನಾಮೆ ನೀಡಿರುವುದರಿಂದ ಜಿಲ್ಲೆಯ ಅಧ್ಯಕ್ಷದ ಸ್ಥಾನ ಚುಕ್ಕಾಣಿ ಹಿಡಿಯುವವರ್ಯಾರು ಎಂಬ ಕುತೂಹಲ ಜಿಲ್ಲೆಯ ರಾಜಕೀಯ ವಲಯದಲ್ಲಿದೆ.
ಬಳ್ಳಾರಿ ಜಿಲ್ಲೆಯ ಜೆಡಿಎಸ್ನಲ್ಲಿ ಮುಖಂಡರ ಕೊರತೆ ಎದ್ದು ಕಾಣುತ್ತಿದೆ. ಇತ್ತೀಚೆಗೆ ಕಾಂಗ್ರೆಸ್ನಿಂದ ಜೆಡಿಎಸ್ಗೆ ಹೋಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಭೀಮಾ ನಾಯ್ಕ್ ಶಾಸಕನಾಗಿ ಆಯ್ಕೆಯಾಗಿದ್ದರು. ಅವರನ್ನು ಬಿಟ್ಟರೆ, ಜೆಡಿಎಸ್ನಲ್ಲಿ ಮುಖಂಡರೂ ಇದ್ದರೂ, ಇಡೀ ಜಿಲ್ಲೆಯ ಜೆಡಿಎಸ್ನ್ನು ಮುನ್ನಡೆಸುವಂತಹ ಮುಖಂಡರ ಕೊರತೆ ಎದ್ದು ಕಾಣುತ್ತಿದೆ.
ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಪ್ರಸ್ತುತ ಜೆಡಿಎಸ್ ಪಕ್ಷದ ಪರಿಸ್ಥಿತಿ ಹೇಳಿಕೊಳ್ಳುವಂತದ್ದಿಲ್ಲ. ಜಿಲ್ಲೆಯ 9 ಕ್ಷೇತ್ರಗಳಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಶಾಸಕರಾಗಿ ಭೀಮಾ ನಾಯ್ಕ್ ಆಯ್ಕೆಯಾಗಿದ್ದು ಬಿಟ್ಟರೆ, ಹೇಳಿಕೊಳ್ಳುವಂಥ ಬಲಿಷ್ಟವೇನಿಲ್ಲ. ಇದೀಗ ಜಿಲ್ಲಾಧ್ಯಕ್ಷರಾಗಿದ್ದ ಎನ್. ಸೂರ್ಯನಾರಾಯಣ ರೆಡ್ಡಿ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದು, ಪಕ್ಷ ಮುನ್ನಡೆಸುವವರು ಯಾರು ಎಂಬ ಕೊರಗು ಜೆಡಿಎಸ್ನಲ್ಲಿ ಕಾಡುತ್ತಿದೆ. ಪಕ್ಷ ಮುನ್ನಡೆಸಲು ಜೆಡಿಎಸ್ನ ವರಿಷ್ಠರಾದ ಕುಮಾರಸ್ವಾಮಿ ಹಾಗೂ ಕೃಷ್ಣಪ್ಪ ಅವರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬ ಕುತೂಹಲವಿದೆ. ಜಿಲ್ಲಾಧ್ಯಕ್ಷ ಎನ್ನುವ ವ್ಯಕ್ತಿಯು ಎಲ್ಲ ದೃಷ್ಟಿಯಿಂದ ಬಲಿಷ್ಠವಾಗಿರಬೇಕು, ಇಂತಹ ನಾಯಕರ ಕೊರತೆಯನ್ನು ಜೆಡಿಎಸ್ ಎದುರಿಸುತ್ತಿದೆ.
ಏಕಾಏಕಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದೇಕೆ?: ಕಳೆದ ಹಲವು ವರ್ಷಗಳಿಂದ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಸೂರ್ಯನಾರಾಯಣ ರೆಡ್ಡಿ ಅವರು ರಾಜಿನಾಮೆ ಕೊಟ್ಟಿದ್ದೇಕೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಬಳ್ಳಾರಿ ಗ್ರಾಮೀಣ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಶ್ರೀರಾಮುಲುಗೆ ಬೆಂಬಲ ನೀಡಿದ್ದು ಕಾರಣವಾಯ್ತೇ! ಇತ್ತೀಚೆಗೆ ಪಕ್ಷದಲ್ಲಿನ ರಾಜ್ಯ ಮುಖಂಡರು ಕೆಲವೊಂದು ನಿಲುವುಗಳು ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡಲು ಕಾರಣವಾಯ್ತೇ ಎನ್ನುವುದು ಸೇರಿದಂತೆ ಇತರ ವಿಷಯಗಳು ಇದೀಗ ಚರ್ಚೆಗೆ ಕಾರಣವಾಗಿವೆ. ಕುರುಗೋಡು ಕ್ಷೇತ್ರದಿಂದ ಸೂರ್ಯನಾರಾಯಣ ರೆಡ್ಡಿ ಅವರು ಗೆದಿದ್ದು ಬಿಟ್ಟರೆ, ನಂತರದ ದಿನಗಳಲ್ಲಿ ಪಕ್ಷ ಇವರಿಗೆ ವಿಧಾನ ಪರಿಷತ್ ಸ್ಥಾನ ನೀಡುತ್ತದೆ ಎಂಬ ಸುದ್ದಿ ಇತ್ತು. ಎರಡು ಬಾರಿಯು ಅವರಿಗೆ ಸೂಕ್ತ ಸ್ಥಾನ ನೀಡದಿರುವುದು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಯ್ತೇ! ಹೀಗೆ ವಿವಿಧ ವಿಚಾರಗಳು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಬಳ್ಳಾರಿಯಲ್ಲಿ ಕಳೆಗುಂದಿದ ಜೆಡಿಎಸ್: ಬಳ್ಳಾರಿ ಮಟ್ಟಿಗೆ ಜೆಡಿಎಸ್ ಪಕ್ಷವನ್ನು ಸೂರ್ಯನಾರಾಯಣ ರೆಡ್ಡಿ ಅವರೆ ಮುನ್ನಡೆಸಿಕೊಂಡು ಹೋಗುತ್ತಿದ್ದರೂ, ಇದೀಗ ಅವರೇ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರುವುದು ಬಳ್ಳಾರಿ ಮಟ್ಟಿಗೆ ಜೆಡಿಎಸ್ನ ಚುಕ್ಕಾಣಿ ಹಿಡಿಯುವವರ್ಯಾರೆಂಬುದು ಕುತೂಹಲವಾಗಿದೆ. ಸೂರ್ಯನಾರಾಯಣ ರೆಡ್ಡಿ ರಾಜಿನಾಮೆ ನೀಡಿರುವುದರಿಂದ ಅವರ ಹಿಂಬಾಲಕರು, ಮುಖಂಡರು ರೆಡ್ಡಿಯವರ ರಾಜಕೀಯ ನಡೆಯನ್ನೇ ಅನುಸರಿಸುವುದು ಸಹಜ. ಅಂತಹ ಸಂದರ್ಭದಲ್ಲಿ ಅವರು ಬೇರೊಂದು ಪಕ್ಷಕ್ಕೆ ಹೋದರೆ, ಅವರ ಹಿಂಬಾಲಕ ಮುಖಂಡರು ರೆಡ್ಡಿಯ ದಾರಿಯನ್ನೇ ಅನುಸರಿಸುತ್ತಾರೆ. ಆಗ ಜಿಲ್ಲೆಯಲ್ಲಿ ಜೆಡಿಎಸ್ ಗತಿ ಏನು? ಈ ಹಿಂದೆ ಜೆಡಿಎಸ್ ತೊರೆದವರು ಮತ್ತೆ ಜೆಡಿಎಸ್ಗೆ ಬರುವರೇ ಅಥವಾ ಜೆಡಿಎಸ್ ರಾಜ್ಯ ನಾಯಕರು ಬೇರೊಂದು ಪಕ್ಷದ ಮುಖಂಡರನ್ನು ಸೆಳೆದು ಜೆಡಿಎಸ್ ಬಲಪಡಿಸುತ್ತಾರೋ ಅಥವಾ ಜೆಡಿಎಸ್ನ ಸ್ಥಿತಿ ಮತ್ತಷ್ಟು ಕಳೆಗುಂದುತ್ತದೋ ಎಂಬುದು ಜೆಡಿಎಸ್ ಪಾಲಿಗೆ ಜಿಲ್ಲೆಯಲ್ಲಿ ಆತಂಕದ ವಿಷಯ. ಈಗಾಗಲೇ ಸಿರುಗುಪ್ಪದ ಮಾಜಿ ಶಾಸಕ ಚಂದ್ರಯ್ಯಸ್ವಾಮಿ ಅವರು ಕಾಂಗ್ರೆಸ್ಗೆ ಹೋಗಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಪೆಟ್ಟಾದರೂ ಆಶ್ಚರ್ಯವಿಲ್ಲ.
ಸೂರ್ಯನಾರಾಯಣ ರೆಡ್ಡಿ ನಡೆ ನಿಗೂಢ: ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಸೂರ್ಯನಾರಾಯಣ ರೆಡ್ಡಿ ಅವರ ನಡೆ ನಿಗೂಢವಾಗಿದೆ. ಇದೀಗ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಅವರ ಮುಂದಿನ ರಾಜಕೀಯ ನಡೆ ಕುತೂಹಲದಿಂದ ಕೂಡಿದೆ. ಇನ್ನು ವಿಧಾನ ಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಭೀಮಾನಾಯ್ಕ ಅವರು ಜೆಡಿಎಸ್ಗೆ ಬಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪಕ್ಷದಿಂದ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ಸಂದರ್ಭ ಕೊಟ್ಟೂರಿನ ಹರ್ಷವರ್ಧನ್ ಅವರು ಜೆಡಿಎಸ್ಗೆ ಬಂದಿದ್ದರು. ಆದರೆ, ಜೆಡಿಎಸ್ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

