ಬಳ್ಳಾರಿ

ಬೇಸಿಗೆ ಬೆಳೆಗೆ ಮಾ. 30ರ ವರೆಗೆ ನೀರು

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 27
ರೈತರ ಬೇಸಿಗೆ ಬೆಳೆಗೆ ಅನುಕೂಲಕರವಾಗಿ ತುಂಗಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆಗೆ ಜ. 1ರಿಂದ ಮಾರ್ಚ್ 30ರ ವರೆಗೆ 1,300 ಕ್ಯುಸೆಕ್ ನೀರು ಬಿಡಲು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರೈತ ಮುಖಂಡರ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕಾರ್ಮಿಕ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ್ ಅವರ ನೇತೃತ್ವದಲ್ಲಿ ತುಂಗಭದ್ರಾ ಜಲಾಶಯದ ಬಲದಂಡೆಯ ಕೆಳಮಟ್ಟದ ಕಾಲುವೆಗೆ ಬೇಸಿಗೆ ನೀರಿನ ಕೊರತೆ ನಿವಾರಣೆ ಸಂಬಂಧ ಅಧಿಕಾರಿಗಳು ಹಾಗೂ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ರೈತರ ಮನೋಭಿಲಾಷೆ ಮತ್ತು ಬೇಡಿಕೆಯಂತೆ ಕರ್ನಾಟಕ ಮತ್ತು ಆಂಧ್ರ ಪಾಲಿನ ಕೋಟಾದಲ್ಲಿ ನೀರನ್ನು ಎಲ್‌ಎಲ್‌ಸಿ ಕಾಲುವೆಗೆ ಜಂಟಿಯಾಗಿ ನೀರು ಹರಿಸುವುದಾಗಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
650 ಕ್ಯುಸೆಕ್ ನೀರು: ರಾಜ್ಯದ ಅಧಿಕಾರಿಗಳು ಆಂಧ್ರ ಸರ್ಕಾರದ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿ, ಅವರಿಗೂ ವಿಷಯದ ಬಗ್ಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಗೆ ಪಡೆದಿದ್ದಾರೆ. ಅದರಂತೆ ಕರ್ನಾಟಕ ಹಾಗೂ ಆಂಧ್ರದ ಪಾಲಾಗಿ ತಲಾ 650 ಕ್ಯುಸೆಕ್‌ಗಳ ನೀರು ಹರಿಯಲಿದೆ. ಮೂರು ತಿಂಗಳ ಕಾಲ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಯಲಿದ್ದು, ಇದರ ಜವಾಬ್ದಾರಿಯನ್ನು ಇಬ್ಬರು ಸಚಿವರು ವಹಿಸಿಕೊಂಡಿದ್ದಾರೆ ಎಂದರು.
ಸಭೆಯಲ್ಲಿ ಜನವರಿಯಿಂದ ಮೂರು ತಿಂಗಳು ಕಾಲ ನೀರಿಗೆ ಕೊರತೆಯಾಗದಂತೆ ನೋಡಿಕೊಳ್ಳಲು ತುಂಗಭದ್ರಾ ಜಲಾಶಯದ ಮುಖ್ಯ ಅಧಿಕಾರಿಯಾದ ಮಲ್ಲಿಕಾರ್ಜುನ ಅವರಿಗೆ ಎಂದು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟುನಿಟ್ಟಿನ ಆದೇಶ ನೀಡಿದರು. ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ್, ಕಾಂಗ್ರೆಸ್ ಮುಖಂಡರಾದ ಗೋನಾಳ್ ವಿರೂಪಾಕ್ಷಗೌಡ ಅವರು ಕೂಡ ಸಭೆಯಲ್ಲಿ ಪಾಲ್ಗೊಂಡು ರೈತರು ಬೇಸಿಗೆ ಬೆಳೆಗೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಭೆಗೆ ಮನವರಿಕೆ ಮಾಡಿಕೊಟ್ಟರು. ಜನವರಿಯಿಂದ ಕರ್ನಾಟಕ ಮತ್ತು ಆಂಧ್ರ ಕೋಟಾದ 1,300 ಕ್ಯುಸೆಕ್ ನೀರು ಬಿಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ರೈತ ಸಂಘದ ಮುಖಂಡರಾದ ಶಾನವಾಸಪುರ ರಾಜಶೇಖರಗೌಡ, ಜಾಲಿಹಾಳ್ ಶ್ರೀಧರಗೌಡ, ಗೋಟೂರು ಮಲ್ಲಿಕಾರ್ಜುನ ರೆಡ್ಡಿ, ತಿಮ್ಮನಗೌಡ, ಮೋಕಾ ಮುದ್ದನಗೌಡ, ಸುಬ್ರಹ್ಮಣ್ಯಂ, ಮಲ್ಲನಗೌಡ ಡಿ. ಕಗ್ಗಲ್ ಇತರರಿದ್ದರು.
ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕಾರ್ಮಿಕ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ್ ಅವರ ನೇತೃತ್ವದಲ್ಲಿ ತುಂಗಭದ್ರಾ ಜಲಾಶಯದ ಬಲದಂಡೆಯ ಕೆಳಮಟ್ಟದ ಕಾಲುವೆಗೆ ಬೇಸಿಗೆ ನೀರಿನ ಕೊರತೆ ನಿವಾರಣೆ ಸಂಬಂಧ ಅಧಿಕಾರಿಗಳು ಹಾಗೂ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ರೈತರ ಮನೋಭಿಲಾಷೆ ಮತ್ತು ಬೇಡಿಕೆಯಂತೆ ಕರ್ನಾಟಕ ಮತ್ತು ಆಂಧ್ರ ಪಾಲಿನ ಕೋಟಾದಲ್ಲಿ ನೀರನ್ನು ಎಲ್‌ಎಲ್‌ಸಿ ಕಾಲುವೆಗೆ ಜಂಟಿಯಾಗಿ ನೀರು ಹರಿಸುವುದಾಗಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
- ದರೂರು ಪುರುಷೋತ್ತಮಗೌಡ, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.