ಕೃಷಿ ಸಚಿವರಿಂದ ಅಧಿಕಾರಿಗಳ ತರಾಟೆ
ಕೂಡ್ಲಿಗಿ: ತಾಲೂಕಿನ ಖಾನಾಹೊಸಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ಸಚಿವ ಕೃಷ್ಣಬೈರೇಗೌಡ ಶನಿವಾರ ಭೇಟಿ ನೀಡಿ ಕೇಂದ್ರದಲ್ಲಿನ ಬೀಜ, ಗೊಬ್ಬರ ದಾಸ್ತಾನು ಪರಿಶೀಲನೆ ನಡೆಸಿದರು.
ಈ ಸಂದರ್ಭ ಅಧಿಕಾರಿಗಳಿಂದ ರೈತರಿಗೆ ಮುಂಗಾರು ಮತ್ತು ಹಿಂಗಾರಿನಲ್ಲಿ ವಿತರಿಸಲಾದ ಬೀಜ ಮತ್ತು ಕೃಷಿ ಪರಿಕರಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಸೂಕ್ತ ಉತ್ತರ ನೀಡುವಲ್ಲಿ ಅಧಿಕಾರಿಗಳು ತಡಬಡಾಯಿಸಿದರು.
ಅನಂತರ ರೈತರೊಂದಿಗೆ ಮಾತನಾಡಿ, ಮೂರು ವರ್ಷಗಳಿಂದ ಜಾರಿಯಲ್ಲಿರುವ ಭೂ-ಚೇತನ ಯೋಜನೆಯಲ್ಲಿ ಕೈಗೊಳ್ಳಲಾದ ಕೃಷಿ ಚಟುವಟಿಕೆ ರೈತರಿಗೆ ಲಾಭ ಸಿಕ್ಕಿದೆಯೇ, ರೈತರು ಜಿಂಕ್, ಜಿಪ್ಸಂ, ಬೋರೆಕ್ಸ್, ಫೈರಾಸಲ್ಫೇಟ್ ಹಾಕುವ ಮೂಲಕ ಬೆಳೆ ಬೆಳೆಯುವ ವಿಧಾನ ತಿಳಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಕೆಲವರು ಯೋಜನೆ ಸೂಕ್ತವಾಗಿದೆ. ಇದರಿಂದ ಈ ಬಾರಿ ಹೆಚ್ಚಿನ ಇಳುವರಿ ನೋಡಿದ್ದೇವೆ. ಆದರೆ, ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದರು. ಖಾನಾಹೊಸಹಳ್ಳಿ ರೈತ ರುದ್ರಪ್ಪ ಭೂಚೇತನ ಅಂದ್ರೆ ಬೀಜನಾ ಅಥವಾ ಗೊಬ್ಬರನಾ ಎಂದು ಸಚಿವರನ್ನೇ ಕೇಳಿದಾಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೃಷಿ ಇಲಾಖೆ ಯೋಜನೆಗಳು ರೈತರಿಗೆ ತಲುಪಿಸಲು ಈ ಕೇಂದ್ರ ವ್ಯಾಪ್ತಿಯಲ್ಲಿ 45 ಜನ ಅನುವುಗಾರರನ್ನು ನೇಮಿಸಲಾಗಿದೆ. ಆದರೆ, ಭೂಚೇತನ ಯೋಜನೆ ಬಗ್ಗೆ ರೈತರಿಗೆ ಇದೂವರೆಗೂ ಗೊತ್ತೆ ಇಲ್ಲ ಅಂದ್ರೆ ಹೆಂಗ್ರಿ ಎಂದು ಅಧಿಕಾರಿಗಳನ್ನು ಕೇಳಿದರು. ಕೆಲವು ರೈತರು ಕೃಷಿ ಉಪಕರಣಗಳನ್ನು ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅರ್ಜಿ ಸಲ್ಲಿಸಿ ಆರು ತಿಂಗಳು ಕಳೆದರೂ ಕೃಷಿ ಸಲಕರಣೆ ನೀಡಿಲ್ಲ ಎಂದು ಟಿ. ಕಲ್ಲಹಳ್ಳಿ ರಾಜು ಎನ್ನುವವರು ಸಚಿವರಿಗೆ ಮನವರಿಕೆ ಮಾಡಿದರು. ಇದಕ್ಕೆ ಸಚಿವ ಬೈರೆಗೌಡ ಪ್ರತಿಕ್ರಿಯಿಸಿ, ರೈತರನ್ನು ಪದೇ ಪದೇ ಅಲೆದಾಡಿಸುವುದು ಅಧಿಕಾರಿಗಳ ಬೇಜವಾಬ್ದಾರಿ ತಿಳಿಯುತ್ತದೆ. ಸೂಕ್ತ ಸಲಕರಣೆಗಳನ್ನು ರೈತರಿಗೆ ವಿತರಿಸುವಂತೆ ಸೂಚಿಸಿದರು.
ಈ ಸಂದರ್ಭ ಕಮಿಷನರ್ ಸುಬೋಧ್ ಯಾದವ್, ಜಂಟಿ ಕೃಷಿ ನಿರ್ದೇಶಕ ಕೆ. ರಾಮಪ್ಪ, ಜಲಾನಯನ ನಿರ್ದೇಶಕ ರಾಜು ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

