ಕಬ್ಬು ನುರಿಸುವ ಕಾರ್ಯಾರಂಭಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಡಿ. 30
ಸ್ಥಳೀಯ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು ಹಾಗೂ ಹೆಚ್ಚುವರಿ ಕಬ್ಬಿನ ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಶಾಸಕ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಬಿ. ಶ್ರೀರಾಮುಲು ಸ್ಥಳೀಯ ರೈತರು ಮತ್ತು ತಮ್ಮ ಬೆಂಬಲಿಗರೊಂದಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರ ಎರಡನೇ ದಿನಕ್ಕೆ ಕಾಲಿರಿಸಿದೆ.
ದರ ಅನ್ವಯವಾಗಲಿ: ಶಾಸಕ ಬಿ. ಶ್ರೀರಾಮುಲು ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿ, ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತರಿಗೆ ಪ್ರತಿ ಟನ್ ಕಬ್ಬಿಗೆ ರು. 2,650 ನೀಡಬೇಕು ಎಂದು ಆದೇಶಿಸಿದ್ದರೂ ಸ್ಥಳೀಯ ಸಕ್ಕರೆ ಕಾರ್ಖಾನೆಯವರು ತಮಗೆ ತಿಳಿದ ದರ ನೀಡುತ್ತಿದ್ದಾರೆ. ಸರ್ಕಾರವು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಮಣಿದಿದ್ದಾರೆ. ಸರ್ಕಾರಕ್ಕೆ ರೈತರ ಕಾಳಜಿಗಿಂತ ಸಕ್ಕರೆ ಕಾರ್ಖಾನೆಗಳ ಮಾಲೀಕರ ಬಗ್ಗೆನೇ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಕಾಳಜಿ ವಹಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಿ: ಡಾ. ರಂಗರಾಜನ್ ವರದಿ ಪ್ರಕಾರ ಕಬ್ಬಿನ ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಐಎಸ್‌ಆರ್ ಸಕ್ಕರೆ ಕಾರ್ಖಾನೆ ಅವರಿಗೆ ಕಾಯ್ದಿಟ್ಟ ಪ್ರದೇಶದ ಎಲ್ಲ ಕಬ್ಬನ್ನು ನುರಿಸುವ ಸಾಮರ್ಥ್ಯ ಇಲ್ಲದಿರುವುದರಿಂದ ರೈತರು ತಮ್ಮ ಕಬ್ಬನ್ನು ಮುಕ್ತ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಅಧಿಕಾರಿಗಳು ಕಬ್ಬು ಸಾಗಾಣಿಕೆ ಮಾಡಲು ಪರ್ಮಿಟ್‌ಗಳನ್ನು ನೀಡಬೇಕು. 14-15 ತಿಂಗಳ ಕಬ್ಬು ಬೆಳೆದು ನಿಂತಿದೆ. ಕಬ್ಬು ಕಟಾವು ಮಾಡಿದ ನಾಲ್ಕು ಗಂಟೆಗಳ ಒಳಗಾಗಿ ಕಬ್ಬನ್ನು ಸಕ್ಕರೆ ಕಾರ್ಖಾನೆಯವರು ತೆಗೆದುಕೊಳ್ಳಬೇಕು. ಈಗಾಗಲೇ ರೈತರು ಕಬ್ಬು ಕಟಾವು ಮಾಡಿಕೊಂಡು ಬಂದು ಕಾರ್ಖಾನೆ ಮುಂದೆ ಹಾಕಿದ್ದರೂ ಇನ್ನೂ ರೈತರ ಕಬ್ಬನ್ನು ತೆಗೆದುಕೊಳ್ಳುತ್ತಿಲ್ಲ. ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ನ್ಯಾಯಯುತ ಬೇಡಿಕೆ ಇಡಿ: ಜಿಲ್ಲಾಧಿಕಾರಿಗಳು ಮಂಗಳವಾರ ಮಧ್ಯಾಹ್ನ ಬಳ್ಳಾರಿಯ ತಮ್ಮ ಕಚೇರಿಯಲ್ಲಿ ರೈತರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ರೈತರಿಗೆ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಬಾರದು. ಐಎಸ್‌ಆರ್ ಸಕ್ಕರೆ ಕಾರ್ಖಾನೆ ಅವರು ಪ್ರತಿವರ್ಷ ರೈತರಿಂದ ಕಬ್ಬು ತೆಗೆದುಕೊಳ್ಳುವಾಗ ರೈತರನ್ನು ಸತಾಯಿಸಿ, ರೈತರೊಂದಿಗೆ ಜಗಳ ಮಾಡಿಕೊಂಡ ನಂತರ ಕಾರ್ಖಾನೆ ಆರಂಭಿಸಲಾಗುತ್ತದೆ. ರೈತರಿಗೆ ಸರ್ಕಾರ ನಿಗದಿ ಮಾಡಿದ ದರ ನೀಡದೆ ತನಗೆ ಬೇಕಾದ ಬೆಲೆಗೆ ಕಬ್ಬನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಿದ ಅವರು, ಕಾರ್ಖಾನೆಗೆ ಕಬ್ಬು ನುರಿಸುವ ಸಾಮರ್ಥ್ಯ ಕಡಿಮೆ ಇದ್ದರೂ ಹೆಚ್ಚುವರಿ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಮುಕ್ತ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಐಎಸ್‌ಆರ್ ಸಕ್ಕರೆ ಕಾರ್ಖಾನೆಯನ್ನು ತಕ್ಷಣ ಆರಂಭಿಸಬೇಕು. ಹೆಚ್ಚುವರಿ ಕಬ್ಬನ್ನು ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವವರೆಗೂ ತಮ್ಮ ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಯಂತ್ರಗಳ ದುರಸ್ತಿಯಾಗಲಿ: ಐಎಸ್‌ಆರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ರೈತರು ಸುಮಾರು 5 ಲಕ್ಷ ಟನ್ ಕಬ್ಬು ಬೆಳೆದಿದ್ದಾರೆ. ಆದರೆ, ಸಕ್ಕರೆ ಕಾರ್ಖಾನೆಯವರು ಕೇವಲ 2 ಲಕ್ಷ ಟನ್ ಕಬ್ಬನ್ನು ಮಾತ್ರ ನುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಸಕ್ಕರೆ ಕಾರ್ಖಾನೆ ಹಳೆಯ ಕಾಲದ ಕಾರ್ಖಾನೆಯಾಗಿದ್ದು, ಯಂತ್ರಗಳೆಲ್ಲವೂ ದುರಸ್ತಿಯಲ್ಲಿವೆ. ನವೀನ ರೀತಿಯ ಯಂತ್ರಗಳನ್ನು ಅಳವಡಿಸಿಲ್ಲ. ಕಬ್ಬು ಕಟಾವು ಆದ 4 ತಾಸುಗಳಲ್ಲಿ ಕಬ್ಬನ್ನು ಕಾರ್ಖಾನೆಯವರು ತೆಗೆದುಕೊಳ್ಳಬೇಕು. ಈಗಾಗಲೇ 3.5 ಲಕ್ಷ ಟನ್ ಕಬ್ಬಿಗೆ ರೈತರಿಗೆ ಚೀಟಿಗಳನ್ನು ನೀಡಿದ್ದಾರೆ. ಚೀಟಿಗಳನ್ನು ನೀಡಿರುವುದರಿಂದ ರೈತರ ಕಬ್ಬನ್ನು ಕಟಾವು ಮಾಡಿಕೊಂಡು ಬಂದಿದ್ದಾರೆ. ಆದರೆ, ಕಾರ್ಖಾನೆ ಆರಂಭಗೊಂಡು ನಾಲ್ಕು ದಿನಗಳಲ್ಲೇ ಮತ್ತೆ ಬಂದ್ ಆಗಿದೆ. ತಕ್ಷಣ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರೈತರ ಹಿತ ಕಾಪಾಡಿ: ಸಂಸದೆ ಜೆ. ಶಾಂತಾ ಮಾತನಾಡಿ, ಕಬ್ಬು ಖರೀದಿಯಾಗದೇ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಂಕಷ್ಟಗಳನ್ನು ಪರಿಹರಿಸಲು ಸರ್ಕಾರ ಮುಂದಾಗಬೇಕು. ನಮಗೆ ರೈತರ ಹಿತ ಮುಖ್ಯ. ರೈತರ ಸಂಕಷ್ಟಗಳನ್ನು ಪರಿಹರಿಸಲು ಶಾಸಕ ಬಿ. ಶ್ರೀರಾಮುಲು ಎರಡು ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಶ್ರೀರಾಮುಲು ನಡೆಸುವ ಧರಣಿ ಬೆಂಬಲಿಸುತ್ತೇವೆ ಎಂದು ಹೇಳಿದರು.
ರೈತ ಸಂಘದ ಅಧ್ಯಕ್ಷ ತಾರಿಹಳ್ಳಿ ಹುಲುಗಜ್ಜಪ್ಪ, ಗೋಸಲಭರಮಪ್ಪ, ಮುಖಂಡರಾದ ಪ್ಯಾಟಿ ಜಂಬಣ್ಣ, ಜಂಬಾನಹಳ್ಳಿ ವೆಂಕೋಬಣ್ಣ, ಬ್ಯಾಲಾಳ್ ಪಂಪಾಪತಿ, ಅರಳಿ ಕೊಟ್ರಪ್ಪ, ಸಮೀವುಲ್ಲಾ, ದೇವರಮನಿ ಶ್ರೀನಿವಾಸ, ಜಂಬಾನಹಳ್ಳಿ ವಸಂತ, ಟಿ. ವೆಂಕಟೇಶ್, ಕೆ. ಜೈರುದ್ದೀನ್, ಕೆ. ಕಾರ್ತಿಕ್, ಪಿ.ವಿ. ವೆಂಕಟೇಶ್ ಸೇರಿದಂತೆ ನೂರಾರು ರೈತ ಮುಖಂಡರು ಹಾಗೂ ಶ್ರೀರಾಮುಲು ಬೆಂಬಲಿಗರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

