ಬಳ್ಳಾರಿ

ಮಿಮಿಕ್ರಿ: ಶಿವಾನಿ ರಾಜ್ಯ ಮಟ್ಟಕ್ಕೆ

Published On :

ಕೊಟ್ಟೂರು: ಪಟ್ಟಣದ ಮಹಾದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಕೆ. ಶಿವಾನಿ ಮಿಮಿಕ್ರಿಯಲ್ಲಿ ವಿಭಾಗದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 8ನೇ ತರಗತಿಯ ಎಂ.ಕೆ. ಶಿವಾನಿ ಮಿಮಿಕ್ರಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಸ್ಥಾನ ಆಯ್ಕೆಯಾಗಿದ್ದಾಳೆ. ಎಂ.ಕೆ. ಶಿವಾನಿಯವರ ಈ ಸಾಧನೆಗೆ ಮಹಾದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಡಳಿತ ಮಂಡಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ತರಬೇತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ಬಳ್ಳಾರಿಯ ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯು ನಗರ, ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಉಚಿತ ಕಂಪ್ಯೂಟರ್ ಡಿಟಿಪಿ ತರಬೇತಿಗೆ ಅರ್ಜಿ ಆಹ್ವಾನಿಸಿದೆ. 18ರಿಂದ 45 ವಯೋವುತಿಯೊಳಗಿನ ನಿರುದ್ಯೋಗಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಅವಧಿ 45 ದಿನಗಳಾಗಿದ್ದು, ಉಚಿತ ಊಟ, ವಸತಿ ನೀಡಲಾಗುತ್ತದೆ. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ ಮಾಹಿತಿಯೊಂದಿಗೆ ಬಿಳಿ ಹಾಳಿಯಲ್ಲಿ ಬರೆದ ಅರ್ಜಿಯನ್ನು ನಿರ್ದೇಶಕರು, ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಡಿಐಸಿ ಕಾಂಪೌಂಡ್, ಹೊಸಪೇಟೆ ರಸ್ತೆ, ಬಳ್ಳಾರಿ ಈ ವಿಳಾಸಕ್ಕೆ ಜ. 4ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗೆ ದೂ: 08392-244117ಗೆ ಸಂಪರ್ಕಿಸಬಹುದು.
ಕೆಓಎಸ್ ಪರೀಕ್ಷೆ: ನಿಷೇಧಾಜ್ಞೆ
ಬಳ್ಳಾರಿ: ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕೆಓಎಸ್ (ಕರ್ನಾಟಕ ಓಪನ್ ಸ್ಕೂಲ್) ಪರೀಕ್ಷೆ ನಡೆಯುತ್ತಿದ್ದು,  ಪರೀಕ್ಷೆಗಳನ್ನು ಶಾಂತಿವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಡಿಸಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. ಡಿ. 30ರಿಂದ ಪರೀಕ್ಷೆ ಪ್ರಾರಂಭವಾಗಿದ್ದು, 2014ರ ಜ. 4ರ ವರೆಗೆ ನಡೆಯಲಿದೆ. ನಿಷೇಧಿತ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಶಸ್ತ್ರ, ಬಡಿಗೆ, ಬರ್ಚಿ, ಬಂದೂಕು, ಚೂರಿ ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡುವಂಥ ವಸ್ತು, ಸ್ಫೋಟಕ ವಸ್ತು ಒಯ್ಯುವುದನ್ನು ನಿರ್ಬಂಧಿಸಲಾಗಿದೆ. ಬಹಿರಂಗವಾಗಿ ಘೋಷಣೆ, ಹಾಡು ಹಾಡುವುದು, ವಾದ್ಯ ಬಾರಿಸುವುದು, ಗುಂಪುಗಾರಿಕೆ, ಕಲ್ಲು ಎಸೆಯುವುದು ಚಟುವಟಿಕೆ ಪ್ರತಿಬಂಧಿಸಲಾಗಿದೆ. ನಗರದ ಕೌಲ್ ಬಜಾರ್ ಪ್ರದೇಶದಲ್ಲಿರುವ ಸರ್ಕಾರಿ ಕಾಲೇಜು, ಹೊಸಪೇಟೆಯ ಸರ್ದಾರ್ ವಲ್ಲಭಬಾಯಿ ಸರ್ಕಾರಿ ಪದವಿಪೂರ್ವ ಕಾಲೇಜು, ಹೂವಿನಹಡಗಲಿಯ ಸೊಪ್ಪಿನ ಕಾಳಮ್ಮ ಸರ್ಕಾರಿ ಕಾಲೇಜು, ಜೆಟಿಜಿ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ ಎಲ್ಲ ಜೆರಾಕ್ಸ್ ಅಂಗಡಿ, ಸೈಬರ್ ಕೆಫೆಗಳನ್ನು ಮುಚ್ಚಬೇಕೆಂದು ಆದೇಶದಲ್ಲಿ ಡಿಸಿ ತಿಳಿಸಿದ್ದಾರೆ.
ಕೌಶಲ್ಯ ಅಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ
ಬಳ್ಳಾರಿ: ತಾಲೂಕು ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ವರ್ಗದವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಸ್ಥಳೀಯ ಕಚ್ಚಾ ವಸ್ತು ಬಳಸಿ ಬಿದಿರು, ಬೆತ್ತ, ಬಳ್ಳಿಗಳಿಂದ ಬುಟ್ಟಿ, ಮೊರ, ತಟ್ಟೆ ಮತ್ತಿತರ ವಸ್ತು ತಯಾರಿಸಿ ಮಾರುತ್ತಿರುವವರು ಅರ್ಜಿ ಸಲ್ಲಿಸಬಹುದು. ವಸ್ತುಗಳನ್ನು ಆಧುನಿಕ, ಅಲಂಕಾರಿಕ, ಮತ್ತು ಮೌಲ್ಯವರ್ಧಿತ ತಯಾರಿಸಿ ಮಾರುವ ಬಗ್ಗೆ ತರಬೇತಿ ನೀಡಲಾಗುವುದು. ಆಸಕ್ತರು ತಮ್ಮ ಹೆಸರು, ತಂದೆ, ಗಂಡನ ಹೆಸರು, ಕುಟುಂಬದ ಸದಸ್ಯರ ಸಂಖ್ಯೆ, ಉಪ ಜಾತಿ, ವಯಸ್ಸು, ವಿವಾಹಿತೆ, ಅವಿವಾಹಿತೆ, ವಿದ್ಯಾರ್ಹತೆ, ಹಾಲಿ ಮಾಡುತ್ತಿರುವ ಕಸಬು, ವರಮಾನ, ಈಗಾಗಲೇ ಪಡೆದಿರುವ ತರಬೇತಿ, ಪಡೆಯಲಿಚ್ಛಿಸುವ ತರಬೇತಿ, ಈಗಾಗಲೇ ತೊಡಗಿರುವ ಕೌಶಲ್ಯಗಳ ವಿವರಗಳನ್ನು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ, ಡಾ. ಅಂಬೇಡ್ಕರ್ ಭವನ, ಹೊಸಪೇಟೆ ರಸ್ತೆ, ಬಳ್ಳಾರಿ ಇವರಿಗೆ ಸಲ್ಲಿಸಬೇಕೆಂದು ತಿಳಿಸಿದ್ದಾರೆ.
ಹಂಪಿ ಉತ್ಸವ ವೇದಿಕೆಗೆ ಸಿದ್ಧತೆ
ಬಳ್ಳಾರಿ: ಜಿಲ್ಲೆಯಲ್ಲಿ ಜನವರಿ 10ರಿಂದ 12ರ ವರೆಗೆ ನಡೆಯಲಿರುವ ಹಂಪಿ ಉತ್ಸವಕ್ಕೆ ಪೂರ್ವ ಸಿದ್ಧತೆ ಭರದಿಂದ ನಡೆಯುತ್ತಿದೆ. ಹಂಪಿಯ ಎಂ.ಪಿ. ಪ್ರಕಾಶ ನಗರದ ಬಳಿಯ ಶ್ರೀ ಕೃಷ್ಣದೇವರಾಯ ವೇದಿಕೆ, ಕೃಷ್ಣ ದೇವಾಸ್ಥಾನದ ಹಿಂಭಾಗದಲ್ಲಿ ಎಂ.ಪಿ. ಪ್ರಕಾಶ ವೇದಿಕೆ ಹಾಗೂ ಹಂಪಿಯ ಎದುರು ಬಸವಣ್ಣ ಬಳಿಯಲ್ಲಿ ಒಂದು ವೇದಿಕೆ ಸಿದ್ಧತೆಗೆ ಕಾಮಗಾರಿಯು ನಡೆಯುತ್ತಿದೆ. ಸ್ವಚ್ಛತೆ ಕೆಲಸವೂ ನಡೆಯುತ್ತಿದೆ. ವಸ್ತು ಪ್ರದರ್ಶನ, ವಿವಿಧ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಮೈದಾನ ನಿರ್ಮಾಣ, ಪೂರಕವಾಗಿ ಸ್ಥಳವನ್ನು ಸಿದ್ಧಪಡಿಸಲು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ನೇತೃತ್ವದ ವಿವಿಧ ಸಮಿತಿಗಳು ಕಾರ್ಯೋನ್ಮುಖವಾಗಿವೆ. ವಿದ್ಯುತ್ ದೀಪಾಲಂಕಾರಕ್ಕೂ ಸಿದ್ಧತೆ ನಡೆಯುತ್ತಿದೆ.
6ಕ್ಕೆ ಜಿಪಂ ಸಾಮಾನ್ಯ ಸಭೆ
ಬಳ್ಳಾರಿ: ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯನ್ನು ಜನವರಿ 6ರಂದು ಬೆಳಗ್ಗೆ 11 ಗಂಟೆಗೆ ನಜೀರ್ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಮಂಜುನಾಥ ನಾಯಕ್ ತಿಳಿಸಿದ್ದಾರೆ. ಜಿಪಂ ಎಲ್ಲ ಸದಸ್ಯರು ಹಾಗೂ ಸಂಬಂಧಿಸಿದ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ತಪ್ಪದೇ ಹಾಜರಾಗಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾವೇಶ ಯಶಸ್ವಿಗೊಳಿಸಿ
ಬಳ್ಳಾರಿ: ಜ. 6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪರಿಶಿಷ್ಟ ಜಾತಿ ಸಮಾವೇಶ ಯಶಸ್ವಿಗೊಳಿಸುವ ಕುರಿತು ಮಂಗಳವಾರ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ವೀಕ್ಷಕರಾದ ಎ. ಯುವರಾಜ್ ಹಾಗೂ ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕ ರಾಜ್ಯ ಸಂಚಾಲಕ ನಾಗೇಶ್ವರ ರಾವ್, ಅವರು ಸಮಾವೇಶ ಯಶಸ್ವಿಗೊಳಿಸಲು ಕಾರ್ಯನಿರತರಾಗಬೇಕೆಂದು ಎಲ್ಲ ಬ್ಲಾಕ್ ಅಧ್ಯಕ್ಷರಿಗೆ ಕರೆ ನೀಡಿದರು. ಈ ಸಂದರ್ಭ ಪರಿಶಿಷ್ಟ ಜಾತಿ ಜಿಲ್ಲಾ ಅಧ್ಯಕ್ಷ ವಿ. ಅರುಣ್‌ಕುಮಾರ ಮಾತನಾಡಿ, ರಾಜ್ಯ ಮಟ್ಟದ ಪರಿಶಿಷ್ಟ ಜಾತಿ ಸಮಾವೇಶಕ್ಕೆ ಎಐಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಕೆ. ರಾಜು, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್. ಅರ್ಜುನ್, ಯತೀಂದ್ರ, ಪರಿಶಿಷ್ಟ ಜಾತಿ ಜಿಲ್ಲಾ ಉಪಾಧ್ಯಕ್ಷರಾದ ಎನ್.ಡಿ. ವೆಂಕಮ್ಮ, ಮಹಿಳಾ ನಗರ ಘಟಕದ ರುದ್ರಮ್ಮ ಪರಿಶಿಷ್ಟ ಜಾತಿ ವಿವಿಧ ಘಟಕಗಳ ಬ್ಲಾಕ್ ಅಧ್ಯಕ್ಷರು ಭಾಗವಹಿಸಿದ್ದರು.
ಅಪಘಾತ: ಓರ್ವ ಸಾವು, ಮೂವರಿಗೆ ಗಾಯ
ಹೊಸಪೇಟೆ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂರು ಜನರಿಗೆ ತೀವ್ರ ಗಾಯಗಳಾಗಿರುವ ಘಟನೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಗಾಳಮ್ಮನಗುಡಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ -13ರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಹೂವಿನಹಡಗಲಿ ನಿವಾಸಿ ಜಿ. ವಿರೂಪಾಕ್ಷಿ (65) ಸಾವಿಗಿಡಾಗಿರುವ ವ್ಯಕ್ತಿ. ಹೂವಿನಹಡಗಲಿಯಿಂದ ಹೊಸಪೇಟೆ ನಗರಕ್ಕೆ ಕೆಲಸಕ್ಕೆಂದು ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಹೊಸಪೇಟೆಯಿಂದ ಮರಿಯಮ್ಮನಹಳ್ಳಿ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಗಾಯಗೊಂಡರವನ್ನು ಹೊಸಪೇಟೆ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಜಿ. ವಿರೂಪಾಕ್ಷಿ ಎನ್ನುವ ವ್ಯಕ್ತಿ ಮೃತನಾಗಿದ್ದಾನೆ. ಉಳಿದ ಮೂರು ಜನ ಮಲ್ಲಿಕಾರ್ಜುನಗೌಡ ಪಾಟೀಲ್, ಮಲ್ಲಿಕಾರ್ಜುನ, ವಿನಯಕುಮಾರ್ ಎಂಬುವರು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ: ದೂರು
ಬಳ್ಳಾರಿ: ವ್ಯಕ್ತಿಯೋರ್ವ ಮನೆಯಲ್ಲಿ ನೇಣು ಹಾಕಿಕೊಂಡಿರುವ ಘಟನೆ ನಗರದ ಬ್ರಾಹ್ಮಣ ಬೀದಿಯಲ್ಲಿ ನಡೆದಿದೆ. ಬ್ರಾಹ್ಮಣ ಬೀದಿಯ ಗುರುರಾಜ್ (55) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಮನೆಯವರೆಲ್ಲ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಐದಾರು ದಿನಗಳ ಹಿಂದೆಯೇ ನೇಣುಹಾಕಿಕೊಂಡಿದ್ದರೂ, ಗೊತ್ತಾಗಿಲ್ಲ. ಆದರೆ, ಮಂಗಳವಾರ ಮನೆಯೊಳಗಿದ್ದ ವಾಸನೆ ಗಮನಿಸಿದ ನೆರೆಹೊರೆಯವರು, ಕಿಟಿಕಿಗಳಿಂದ ನೋಡಿ, ಪೊಲೀಸರಿಗೆ ತಿಳಿಸಿದ್ದಾರೆ. ಸಾವಿಗೆ ಕಾರಣ ತಿಳಿದಿಲ್ಲ. ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್- ಬೈಕ್ ಡಿಕ್ಕಿ: ಚಾಲಕ ಸಾವು- ದೂರು
ಬಳ್ಳಾರಿ: ಕೆಎಸ್‌ಆರ್‌ಟಿಸಿ ಬಸ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಚಾಲಕ ಮೃತಪಟ್ಟ ಘಟನೆ ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ಜರುಗಿದೆ. ಧನಂಜಯ (21) ಮೃತ ವ್ಯಕ್ತಿ. ಈತ ಸಿರುಗುಪ್ಪ ರಸ್ತೆ ಕಡೆಗೆ ತನ್ನ ಲೂನಾ ಚಲಾಯಿಸಿಕೊಂಡು ಹೋಗುವಾಗ ಎದುರಿಗೆ ಬಂದ ಕೆಸ್ಸಾರ್‌ಟಿಸಿ ಬಸ್‌ನ ಚಾಲಕ ಸಂತೋಷ್ ಬಸವಣ್ಯಪ್ಪ ದೊಡ್ಡಮನಿ ಎಂಬ ಚಾಲಕನು ಅತಿವೇಗ, ಅಜಾಗರೂಕತೆಯಿಂದ ಬಸ್‌ನ್ನು ಚಲಾಯಿಸಿ, ಡಿಕ್ಕಿ ಹೊಡೆಸಿದ ಪರಿಣಾಮ ಬೈಕ್ ಸವಾರನಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.