ಬಳ್ಳಾರಿ

ಸ್ಥಳೀಯ ಸಂಸ್ಥೆ ಸುಲ್ತಾನ್‌ಗಿರಿಗೆ ಸಿದ್ಧತೆ

Published On :

ಶಶಿಧರ ಮೇಟಿ
ಬಳ್ಳಾರಿ:
ವಿಧಾನಸಭೆ ಚುನಾವಣೆ ಬಿಸಿ ತಾತ್ಕಾಲಿಕ ತಣ್ಣಗಾದರೂ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಜಿಲ್ಲೆಯಲ್ಲಿ ಕಾವೇರಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಸುಲ್ತಾನ್ ಆದರೆ ಮುಂದಿನ ಚುನಾವಣೆಯನ್ನು ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿ ವಿವಿಧ ಪಕ್ಷಗಳು ಸಿದ್ಧತೆ, ತಂತ್ರ ನಡೆಸಿವೆ.
ಗಲ್ಲಿ ರಾಜಕಾರಣವೆಂದೇ ಕರೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾ. 7ರಂದು ನಡೆಯಲಿವೆ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ಹಲವಾರು ಆಕಾಂಕ್ಷಿಗಳು ನಿತ್ಯ ಆಯಾ ಪಕ್ಷಗಳ ಧುರೀಣರ, ಬೆಂಬಲಿಗರ ಮನೆಗೆ ಎಡತಾಕುತ್ತಿದ್ದಾರೆ. ರಾಜಕೀಯ ಪಕ್ಷಗಳು ಶಾಸಕ ಸ್ಥಾನ ಆಕಾಂಕ್ಷಿಗಳಲ್ಲಿ ಆಯ್ಕೆಯ ಚಿಂತನೆಯಲ್ಲಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಯಾರಿಗೆ ಟಿಕೆಟ್ ನೀಡಬೇಕೆಂಬ ಚಿಂತೆಯೂ ಶುರುವಾಗಿದೆ. ಒಂದು ವೇಳೆ ಟಿಕೆಟ್ ಸಿಗದಿದ್ದವರು ಬೇರೆ ಪಕ್ಷದಲ್ಲಿ ಗುರುತಿಸಿಕೊಳ್ಳಬಹುದು.
ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಆಕಾಂಕ್ಷಿಗಳು ಟಿಕೆಟ್ ಪಡೆಯಲು ಹಗಲಿರುಳು ವಿವಿಧ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಟಿಕೆಟ್ ಪಡೆಯಲು ಕೆಲವರು ಪಾರ್ಟಿಗಾಗಿ ಇಷ್ಟು ದಿನ ದುಡಿದಿದ್ದನ್ನೇ ಮುಂದಿಟ್ಟುಕೊಂಡು ಟಿಕೆಟ್ ಕೇಳಿದರೆ, ಇನ್ನು ಕೆಲವರು ತಮ್ಮ ವಾರ್ಡಿನಲ್ಲಿ ಗಳಿಸಿದ ವರ್ಚಸ್ಸು, ಮತ್ತೆ ಕೆಲವರು ದುಡ್ಡು, ದೊಡ್ಡ ಮುಖಂಡರು, ಆಪ್ತರ ಬೆಂಬಲ ಬಳಸುತ್ತಿದ್ದಾರೆ.
ಸ್ಥಳೀಯ ಸಂಸ್ಥೆಗಳೇ ಬುನಾದಿ
ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಬರುವ ವಿಧಾನಸಭೆ ಚುನಾವಣೆಗೆ ಬುನಾದಿ. ಇದನ್ನು ಎದುರಿಸಲು ರಾಜಕೀಯ ಪಕ್ಷಗಳು ಒಲ್ಲದ ಮನಸ್ಸಿನಿಂದ ಚುನಾವಣೆ ಸಿದ್ಧತೆ ನಡೆಸಿವೆ. ಇದರಲ್ಲಿ ಗೆದ್ದರೆ ನಗರ, ಪಟ್ಟಣದಲ್ಲಿ ಯಾವ ಪಕ್ಷಕ್ಕೆ ಜನಾಭಿಪ್ರಾಯವಿದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಈ ಚುನಾವಣೆ ರಾಜಕೀಯ ಪಕ್ಷಗಳಿಗೆ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ.
ಟಿಕೆಟ್ ಹಂಚಿಕೆ ತಲೆಬಿಸಿ: ನಾಮಪತ್ರ ಸಲ್ಲಿಸಲು 8 ದಿನಗಳಿರುವುದರಿಂದ ಯಾರಿಗೆ ಟಿಕೆಟ್ ನೀಡಬೇಕೆಂದು ರಾಜಕೀಯ ಪಕ್ಷಗಳಿಗೆ ಸಮಸ್ಯೆ, ಗೊಂದಲವಾಗಿದೆ. ಪಕ್ಷಕ್ಕೆ ಬಹಳ ದಿನಗಳಿಂದ ದುಡಿದವರಿಗೆ ಟಿಕೆಟ್ ನೀಡದಿದ್ದರೆ ಅವರು ಮುನಿಸಿಕೊಳ್ಳುತ್ತಾರೆ. ಅದರಿಂದ ಪಕ್ಷಕ್ಕೆ ಭಾರಿ ನಷ್ಟವಾಗುತ್ತದೆ. ದುಡ್ಡಿದ್ದವರಿಗೆ ಟಿಕೆಟ್ ನೀಡದಿದ್ದರೆ, ಬೇರೆ ಪಕ್ಷದೊಂದಿಗೆ ಸ್ಪರ್ಧಿಸುವುದು ಕಷ್ಟ. ವರ್ಚಸ್ಸು, ಪಕ್ಷಕ್ಕೆ ನಿಷ್ಠಾವಂತರು, ಹಣವುಳ್ಳವರು ಸಿಗುವುದು ವಿರಳ. ಇಂಥ ಸ್ಥಿತಿಯಲ್ಲಿ ಟಿಕೆಟ್ ಹಂಚಿಕೆ ವಿಷಯ ರಾಜಕೀಯ ಪಕ್ಷಗಳಿಗೆ ತಲೆಬಿಸಿಯಾಗಿದೆ. ಪ್ರತಿ ಪುಢಾರಿ ಮುಖಂಡರು ತಮಗೆ ಟಿಕೆಟ್ ಕೊಡಬೇಕೆಂದು ಪಕ್ಷದ ಜಿಲ್ಲಾಧ್ಯಕ್ಷರು, ಮುಖಂಡರಿಗೆ ದುಂಬಾಲು ಬಿದ್ದಿದ್ದಾರೆ.
ಆಕಾಂಕ್ಷಿಗಳ ಸಿದ್ಧತೆ
ಟಿಕೆಟ್ ಹಂಚದಿದ್ದರೂ ಆಕಾಂಕ್ಷಿಗಳು ಚುನಾವಣೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಚುನಾವಣೆ ಯಾವ ರೀತಿ ಎದುರಿಸಬೇಕೆಂದು ಆಪ್ತರು, ಹಿತೈಷಿಗಳಲ್ಲಿ ಚರ್ಚಿಸುತ್ತಿದ್ದಾರೆ. ಗಣಿನಾಡಿನಲ್ಲಿ ಚುನಾವಣೆ ಎಂದರೆ ದುಡ್ಡಿನ ಗಮ್ಮತ್ತಿನದ್ದೇ ದರ್ಬಾರು. ಅಂಥ ಸಂದರ್ಭದಲ್ಲಿ ಹೇಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಕಾಂಕ್ಷಿಗಳು ಚಿಂತಿಸುತ್ತಿದ್ದಾರೆ.
ಇನ್ನು ಶಾಸಕ ಟಿಕೆಟ್ ಆಕಾಂಕ್ಷಿಗಳು ತಮ್ಮ ವ್ಯಾಪ್ತಿಯ ಟಿಕೆಟ್ ಆಕಾಂಕ್ಷಿಗಳನ್ನು ತಣಿಸಲು ಶತಾಯಗತಾಯ ಪ್ರಯತ್ನಿಸಬೇಕು. ಮುಖಂಡರು, ಟಿಕೆಟ್ ಆಕಾಂಕ್ಷಿಗಳು ಮುನಿಸಿಕೊಂಡರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಎದುರಾದರೆ, ತಮಗೆ ಮುಳ್ಳು ಎಂಬ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.