ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ಬೇಕು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 28
ಮಾನವ ಜಾತಿ ಒಂದೇ ಎಂದು ಪ್ರತಿಪಾದಿಸಲು ವಿದ್ಯಾರ್ಥಿಗಳಿಗೆ ಸಮಾನತೆ, ಸಹನೆ, ಪ್ರೀತಿ ಸಹಬಾಳ್ವೆಗಳು ವಿಕೇಂದ್ರಿಕರಣ ಅತ್ಯಗತ್ಯ, ಇಂತಹ ಮನೋಭಾವನೆ ರೂಢಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಒಂದು ಸೂಕ್ತ ವೇದಿಕೆ ಅಗತ್ಯವಾಗಿದೆ ಎಂದು ದಲಿತ ಸಾಹಿತಿ, ನಾಡೋಜ ದೇವನೂರು ಮಹಾದೇವ ಅವರು ಹೇಳಿದರು.
ಗುರುವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ನಾಡೋಜ ಗೌರವ ಪದವಿ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿರಂಕುಶ ಮತಿಗಳಾಗದಿರಲು ಸಮಾನತೆ, ಸಹನೆ, ಪ್ರೀತಿ ಗುಣಗಳು ಬೇಕು. ಇಂತಹ ಗುಣಗಳ ವಿಕೇಂದ್ರೀಕರಣಕ್ಕೆ ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ನಿರ್ಮಿಸಿಕೊಳ್ಳುವುದು ಸಂಶೋಧನಾ ವಿದ್ಯಾರ್ಥಿಗಳಿಗೆ ಅಗತ್ಯ. ಎಳೆಯ ಮನಸ್ಸುಗಳ ಇಂತಹ ವೇದಿಕೆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದರೆ ಕರ್ನಾಟಕದ ಕನಸು ಸಾಕಾರಗೊಳ್ಳಲು ಸಾಧ್ಯ ಎಂದರು.
ವಿವಿ ನೈತಿಕ ಶಕ್ತಿ ಹೆಚ್ಚಿದೆ: ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ದೇವನೂರು ಮಹಾದೇವ ಅವರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಿ ಮಾತನಾಡಿ, ಸಮಾಜದಲ್ಲಿ ಹೊಸತನದ ಕನಸು ಕಾಣುವ, ಅದೇ ನಿಟ್ಟಿನಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ, ಸ್ವಸ್ಥ, ಸುಂದರ ಸಮಾಜದ ಚಿಂತನೆ ಮಾಡುವ ದೇವನೂರು ಮಹಾದೇವರಿಗೆ ನಾಡೋಜ ಪದವಿ ನೀಡಿರುವುದು ವಿವಿ ತನ್ನನ್ನು ತಾನೇ ಗೌರವಿಸಿಕೊಂಡಂತೆ. ಅವರು ನಾಡೋಜ ಪದವಿಯನ್ನು ಸ್ವೀಕರಿಸುವ ಮೂಲಕ ವಿವಿಗೆ ನೈತಿಕ ಶಕ್ತಿಯನ್ನು ತುಂಬಿದ್ದಾರೆ ಎಂದು ಅಭಿಪ್ರಾಯಪಟ್ಟರು.
ದೇವನೂರು ರಚಿಸಿದ 'ಎದೆಗೆ ಬಿದ್ದ ಅಕ್ಷರ' ಕೃತಿ ಆರನೇ ಮುದ್ರಣ ಕಂಡಿರುವುದು ಇವರ ಸಾಹಿತ್ಯ ಜನರ ಮನಸ್ಸಿಗೆ ಎಷ್ಟು ಹತ್ತಿರವಾಗಿವೆ ಎಂಬುದನ್ನು ಸಾರಿ ಹೇಳುತ್ತವೆ. ಅಪ್ಪಟ್ಟ ದೇಸೀತನ ಹಾಗೂ ನಿಜವಾದ ಜನಪದ ವ್ಯಕ್ತಿಯ ಬರಹಗಳು ಇವರನ್ನು ಜನರಿಗೆ ಮತ್ತಷ್ಟು ಹತ್ತಿರಕ್ಕೆ ಕೊಂಡೊಯ್ಯುವಂತೆ ಮಾಡಿವೆ. ಅವರ ಸಾಹಿತ್ಯದಲ್ಲಿರುವ ಸೊಗಡಿನ ಬಗ್ಗೆ ಕುಲಪತಿ ಬೋರಲಿಂಗಯ್ಯ ತಿಳಿಸಿದರು.
ಹಿರಿಯ ಪ್ರಾಧ್ಯಾಪಕ, ಲೇಖಕ ಡಾ. ಕರೀಗೌಡ ಬೀಚನಹಳ್ಳಿ ಮಾತನಾಡಿ, ದೇವನೂರು ಮಹಾದೇವ ಅವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ನೀಡಿ, ಇಂದಿಗೂ ಕೃಷಿ ಜೀವನದೊಂದಿಗೆ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಸಮಾಜ, ಸೃಜನಶೀಲತೆ, ಸಂಘಟನೆ, ಬಂಡಾಯ, ಪ್ರತಿಭಟನೆ, ಕೆಳವರ್ಗದ ಬಗೆಗಿನ ತುಡಿತಗಳು ಇವರ ಸಾಹಿತ್ಯದ ಅಸ್ತ್ರಗಳಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ ಮಾತನಾಡಿದರು. ಕುಲಸಚಿವ ಡಾ.ಟಿ.ಪಿ. ವಿಜಯ್ ಸ್ವಾಗತಿಸಿದರು. ಎಂ.ಎಂ. ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಯನಾಂಗದ ನಿರ್ದೇಶಕ ಡಾ.ಎಫ್.ಟಿ. ಹಳ್ಳಿಕೇರಿ ವಂದಿಸಿದರು.
ಪದವಿ ಪ್ರದಾನದ ನಂತರ ನಾಡೋಜ ದರೋಜಿ ಈರಮ್ಮ ಮತ್ತು ಸಂಗಡಿಗರಿಂದ ಹಾಗೂ ಉತ್ತರ ಕನ್ನಡದ ಸಿದ್ದಿ ಜನಾಂಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

