15 ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ
ಹಗರಿಬೊಮ್ಮನಹಳ್ಳಿ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ರಾಜ್ಯ ಸರ್ಕಾರ ಅಸ್ಥಿರತೆ ಎದುರಿಸುತ್ತಿದ್ದರೂ ಕ್ಷೇತ್ರದ ಬಿಜೆಪಿ ಶಾಸಕ ಕೆ. ನೇಮಿರಾಜ ನಾಯ್ಕ ಗುರುವಾರ ಒಂದೇ ದಿನ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಸುಮಾರು ರು. 3.11 ಕೋಟಿ ವೆಚ್ಚದ 15 ಕಾಮಗಾರಿಗಳ ಉದ್ಘಾಟನೆ ಹಾಗೂ ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿದರು.
ಯಾವುದೇ ಆಹ್ವಾನಪತ್ರಿಕೆ ಮುದ್ರಿಸದೆ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೇರವೇರಿಸಿದ್ದನ್ನು ನೋಡಿದರೆ ಶಾಸಕ ನೇಮಿರಾಜ ನಾಯ್ಕಗೆ ರಾಜ್ಯ ಸರ್ಕಾರದ ಉಳಿಯುವ ಬಗ್ಗೆಯೇ ಅನುಮಾನ ಇರುವುದು ಸ್ಪಷ್ಟವಾಗುತ್ತದೆ.
ತಾಲೂಕಿನ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಎಂ.ಬಿ. ಮುತ್ಕೂರು ಕಾಲನಿ ಬಳಿ ನಿರ್ಮಾಣಗೊಂಡಿರುವ ಹೊಸ ಅಗ್ನಿಶಾಮಕ ಠಾಣೆ, ಅಧಿಕಾರಿ, ಸಿಬ್ಬಂದಿ ವರ್ಗದವರ ವಸತಿ ಸಮುಚ್ಚಯ, ಮಾಲ್ವಿ ಹಾಗೂ ಉಲುವತ್ತಿ ಗ್ರಾಮದಲ್ಲಿ ಸಮುದಾಯ ಭವನ, ಹಳೇ ಹಗರಿಬೊಮ್ಮನಹಳ್ಳಿ ಜೆ.ಜೆ. ನಗರ, ಅಂಬೇಡ್ಕರ್ ನಗರಗಳಲ್ಲಿ ಅಂಗನವಾಡಿ ಕಟ್ಟಡ, ಪಶುವೈದ್ಯ ಆಸ್ಪತ್ರೆ ಕಟ್ಟಡ, ಮಹಿಳಾ ಶಕ್ತಿ ಭವನ, ರಾಮನಗರದ ಕೂಡ್ಲಿಗಿ ರಸ್ತೆಯ ಸಮಾಜ ಕಲ್ಯಾಣ ಇಲಾಖೆ ಕಚೇರಿ ಕಟ್ಟಡ, ಕೆಚ್ಚಿನಬಂಡಿ ರಸ್ತೆಯಲ್ಲಿ ತಾಪಂ ಇಓ ನೂತನ ವಸತಿಗೃಹ, ವಡ್ರಗುಂಡಿಯಲ್ಲಿ ಅಂಗನವಾಡಿ ಕಟ್ಟಡಗಳನ್ನು ಶಾಸಕರು ಉದ್ಘಾಟಿಸಿದರು.
ತಾಲೂಕಿಗೆ ಮುಂಜೂರಾಗಿರುವ ಹಿಂದುಳಿದ ವರ್ಗಗಳ ಕಾಲೇಜು ವಿದ್ಯಾರ್ಥಿ ನಿಲಯಕ್ಕೆ ಹಳೇ ಹಗರಿಬೊಮ್ಮನಹಳ್ಳಿಯಲ್ಲಿ ಚಾಲನೆ ನೀಡಿದರು.
ತಾಲೂಕಿನ ಶ್ರೀಕ್ಷೇತ್ರ ನಂದಿಪುರದ ಮಹೇಶ್ವರ ಶ್ರೀ, ಹಳೇ ಹಗರಿಬೊಮ್ಮನಹಳ್ಳಿ ಹಾಲಸ್ವಾಮಿ ಮಠಾಧೀಶರಾದ ಹಾಲಶಂಕರ ಸ್ವಾಮಿಗಳು, ಜಿಪಂ ಸದಸ್ಯೆ ಕೊಗಳಿ ಕರಿಬಸವನಗೌಡ್ರ ರತ್ನಮ್ಮ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯ ನಾಯ್ಕ, ಉಪಾಧ್ಯಕ್ಷೆ ಕುರುಬರ ನಾಗರತ್ನಾ ವೆಂಕಟೇಶ, ಎಪಿಎಂಸಿ ಅಧ್ಯಕ್ಷ ಕೆ. ರೋಹಿತ್, ಉಪಾಧ್ಯಕ್ಷ ಪೂಜಾರ ಮೂರ್ತೆಪ್ಪ, ಹಗರಿಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ಎಂ. ಶಿವಕುಮಾರ, ಮುಖಂಡರಾದ ಸೋಮನಗೌಡ ಪಾಟೀಲ್, ಪಿ. ಸೂರ್ಯಬಾಬು, ಬಿ. ಶ್ರೀನಿವಾಸ, ಡಿಶ್ ಮಂಜುನಾಥ, ತಾಪಂ ಇಓ ಜಿ. ಗೋಪ್ಯಾ ನಾಯ್ಕ, ಪಂರಾಇ ಎಇಇ ಕೇಣಿಬಸಪ್ಪ, ಲೋಕೋಪಯೋಗಿ ಇಲಾಖೆ ಎಇಇ ಗುರುಬಸಪ್ಪ, ಸಮಾಜ ಕಲ್ಯಾಣಾಧಿಕಾರಿ ಮಾಣಿಕ್ಯಚಾರ್ ಶಾಸಕರಿಗೆ ಸಾಥ್ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

