ಕೆರೆಗೆ ನೀರು: ಇಂದು ಬೈಕ್ ರ್ಯಾಲಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜ. 28
ಸತತ ಬರದ ಕೆನ್ನಾಲಿಗೆಗೆ ತುತ್ತಾಗುತ್ತಿರುವ ಬಯಲು ಸೀಮೆ ಹಾಗೂ ಹಿಂದುಳಿದ ಪ್ರದೇಶವೆಂದು ಹಣೆಪಟ್ಟಿ ಹೊತ್ತಿರುವ ತಾಲೂಕಿನ 10 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಬೇಕೆಂದು ಆಗ್ರಹಿಸಿ ಇಟ್ಟಿಗಿ ಕೇಂದ್ರ ಕೆರೆ ಹೋರಾಟ ಸಮಿತಿಯಿಂದ ಜ. 29ರಂದು ಬೈಕ್‌ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆರೆ ಹೋರಾಟ ಸಮಿತಿ ಅಧ್ಯಕ್ಷ ಕುಂಚೂರು ಕೊಟ್ರೇಶ, ಸಂಚಾಲಕ ಚಂದ್ರಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸರ್ಕಾರ ಈಗಾಗಲೇ 10 ಕೆರೆಗಳಿಗೆ ನೀರು ತಂಬಿಸುವ ಯೋಜನೆಗೆ ಮಂಜೂರಾತಿ ನೀಡಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ 0.5 ಟಿಎಂಸಿ ನೀರು ಬಳಕೆಗೆ ಮಂಜೂರಾತಿ ನೀಡಿದೆ, ಆದರೆ ಕಾಮಗಾರಿ ಈ ವರೆಗೂ ಆರಂಭಿಸಿಲ್ಲ. ಶೀಘ್ರದಲ್ಲೇ ಕಾಮಗಾರಿಯನ್ನು ಆರಂಭಿಸಬೇಕೆಂದು ಆಗ್ರಹಿಸಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಟ್ಟಿಗಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ 9ಕ್ಕೆ ಸುಮಾರು 300 ಬೈಕ್‌ಗಳು ಭಾಗವಹಿಸಲಿದ್ದು, ರ್ಯಾಲಿಯು ಇಟ್ಟಿಗಿ, ಕನ್ನಿಹಳ್ಳಿ, ಕೆಂಚಮ್ಮನಹಳ್ಳಿ, ಎಂ. ಕಲ್ಲಹಳ್ಳಿ, ಮಹಾಜನದಹಳ್ಳಿ, ತಳಕಲ್ಲು ಸೇರಿದಂತೆ ಇನ್ನಿತರ ಗ್ರಾಮಗಳಿಗೆ ತೆರಳಿಲಿದೆ. ಗ್ರಾಮಗಳ ಜನತೆಗೆ ಯೋಜನೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದ ಅವರು, ಉತ್ತಂಗಿ, ಸೋಗಿ ಮಾರ್ಗವಾಗಿ ಹೂವಿನಹಡಗಲಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮತ್ತು ಶಾಸಕ ಚಂದ್ರನಾಯ್ಕಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಕೆರೆ ತುಂಬಿಸುವ ಯೋಜನೆಯಡಿ ಶೇ. 70ರಷ್ಟು ಮಾತ್ರ ನೀರಾವರಿ ಸೌಲಭ್ಯ ಒದಗಲಿದೆ. ಆದರೆ ಇಟ್ಟಿಗಿ ಹೋಬಳಿಯಲ್ಲಿ ಸಾಕಷ್ಟು ಕೊಳವೆ ಬಾವಿಗಳಿಂದ ರೈತರು ನೀರಾವರಿ ಮಾಡಿಕೊಂಡಿದ್ದು, ಇದರಿಂದ ಯೋಜನೆಯ ಪ್ರಯೋಜನ ಪಡೆಯಲು ಕೆರೆಗೆ ಶೇ. 100ರಷ್ಟು ನೀರಾವರಿ ಸೌಲಭ್ಯ ದೊರಕಿಸಿಕೊಡಬೇಕು. ಹಗರಿಬೊಮ್ಮನಹಳ್ಳಿಯ ಮಾಲ್ವಿ ಡ್ಯಾಂಗೆ ಯೋಜನೆಯಿಂದ 1 ಟಿಎಂಸಿ ನೀರು ಹರಿಸಬೇಕೆಂಬ ಬೇಡಿಕೆ ಇದ್ದು, ಆ ಯೋಜನೆಯನ್ನು ಜಾರಿಗೊಳಿಸಿದರೆ ತಾಲೂಕಿನ ತಳಕಲ್ಲು ಕೆರೆಯ ಮೂಲಕವೇ ನೀರು ಹರಿಸಬೇಕೆಂದು ಒತ್ತಾಯಿಸುತ್ತೇವೆಂದು ಹೇಳಿದರು. ಕೆರೆ ಹೋರಾಟ ಸಮಿತಿ ಕಾರ್ಯದರ್ಶಿ ಶಿವಮೂರ್ತಿ, ಕೆರೆ ಹೋರಾಟ ಉಪ ಘಟಕದ ಅಧ್ಯಕ್ಷ ಎಂ.ಜಿ. ಲೋಲಪ್ಪ, ಕಾರ್ಯದರ್ಶಿ ಹರ್ತಿ ಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

