ಬಳ್ಳಾರಿ

ಮಳೆ, ಗಾಳಿ: ಜೆಸ್ಕಾಂಗೆ ಇರಲಿ ಎಚ್ಚರ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 1
ಮಳೆಗಾಲ ಮತ್ತು ಗಾಳಿ ಹೆಚ್ಚು ಬೀಸುವ ಮುಂಗಾರು ಕಾಲ ಬಂದಾಗ ವಿದ್ಯುತ್ ಅವಘಡಗಳು ಹೆಚ್ಚಾಗುತ್ತ, ಅಮಾಯಕರ ಪ್ರಾಣಕ್ಕೆ ಸಂಚಕಾರ ತರುತ್ತವೆ. ಜೆಸ್ಕಾಂ ಮತ್ತು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ವಿದ್ಯುತ್ ಅವಘಡಗಳು ಹೆಚ್ಚಾಗಿ, ಅಮಾಯಕರು ಬಲಿಯಾಗುತ್ತಿದ್ದಾರೆ. ವಿದ್ಯುತ್ ಅವಘಡಗಳು ಕ್ಷಣಾರ್ಧದಲ್ಲಿ ಮನುಷ್ಯನ ಪ್ರಾಣಕ್ಕೆ ಸಂಚಕಾರ ತರುವುದರಿಂದ ಇಂತಹ ಅವಘಡಗಳು ನಡೆಯುವ ಮುನ್ನ ಜೆಸ್ಕಾಂ ಎಚ್ಚೆತ್ತುಕೊಂಡರೆ ನಡೆಯುವ ದುರಂತ ತಪ್ಪಿಸಲು ಸಾಧ್ಯ.
ಒಂದು ಕಡೆ ಹಸೀರುಕರಣ, ಇನ್ನೊಂದು ಕಡೆ ವಿದ್ಯುತ್ ಅವಘಡದಿಂದ ರಕ್ಷಣೆ ಎರಡು ಬೇಕು. ಎರಡನ್ನು ಹೆಚ್ಚಿನ ಜಾಗರೂಕತೆಯಿಂದ ನಿರ್ವಹಿಸಬೇಕಾದ ಅನಿವಾರ್ಯತೆ ಜೆಸ್ಕಾಂ ಮೇಲಿದೆ. ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಪ್ರತಿಯೊಬ್ಬರ ಮೇಲೂ ಇದೆ. ವರ್ಷದಿಂದ ವರ್ಷಕ್ಕೆ ರಸ್ತೆ ಬದಿಯ, ಮುಖ್ಯರಸ್ತೆಯಲ್ಲಿರುವ ಮರಗಳು ಬೆಳೆಯುವುದರಿಂದ ವಿದ್ಯುತ್ ಕಂಬಗಳಿಗೆ ಹಾಗೂ ವಿದ್ಯುತ್ ತಂತಿಗೆ ತಾಕಿ ವಿದ್ಯುತ್ ಅವಘಡಗಳಿಗೆ ಹೆಚ್ಚಿನ ಅವಕಾಶಗಳು ಇರುತ್ತದೆ. ಈ ಬಗ್ಗೆ ಜೆಸ್ಕಾಂನವರೇ ಎಚ್ಚರವಹಿಸಬೇಕು. ಜನಸಾಮಾನ್ಯರು ಕೂಡ ಇಂತಹ ಪರಿಸ್ಥಿತಿ ಇದ್ದರೆ ಜೆಸ್ಕಾಂನವರಿಗೆ ಮಾಹಿತಿ ನೀಡಿದರೆ, ಸಂಭವಿಸಬಹುದಾದ ಅವಘಡ ತಡೆಯಬಹುದು.
ಎಚ್ಚರ ಅನಿವಾರ್ಯ: ರಸ್ತೆ ಬದಿಯ ಮರಗಳು ವಿದ್ಯುತ್ ತಂತಿ ಮೇಲೆ ಹೋದಾಗ ಮರದ ಕೊಂಬೆ ಅಥವಾ ರೆಂಬೆಗಳನ್ನು ಕಡಿಯಲು ಯಾವುದೇ ತಕರಾರು ಇಲ್ಲ. ಇಡೀ ಮರ ವಿದ್ಯುತ್ ಸರಬರಾಜಿಗೆ, ವಿದ್ಯುತ್ ತಂತಿ ಅಥವಾ ವಿದ್ಯುತ್ ಕಂಬಕ್ಕೆ ಹಾನಿಯಾಗುವ ಲಕ್ಷಣಗಳಿದ್ದರೆ ಮಾತ್ರ ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದು ಮರವನ್ನು ಪೂರ್ತಿ ಕಡಿಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜೆಸ್ಕಾಂನವರು ಪ್ರತಿವರ್ಷ ಆಯಾ ಲೈನ್‌ಮ್ಯಾನ್ ಮೂಲಕ ಅವಘಡಗಳು ಸಂಭವಿಸುವ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕಾದದ್ದು ಅಗತ್ಯ. ಅದರಲ್ಲೂ ಗಾಳಿ ಮತ್ತು ಮಳೆ ಹೆಚ್ಚಾದಾಗ ಈ ಬಗ್ಗೆ ಎಚ್ಚರ ಅನಿವಾರ್ಯ.
ಇಬ್ಬರು ಬಲಿ: ನಗರ ಪ್ರದೇಶ ಎಂದಾಕ್ಷಣ ಹೆಚ್ಚಾಗಿ ವಿದ್ಯುತ್ ತಂತಿ ಎಳೆಯಲಾಗಿರುತ್ತದೆ. ಮಳೆ ನೀರಿನಿಂದ, ಬಿಸಿಲು ಹೆಚ್ಚಾಗಿ ವಿದ್ಯುತ್ ತಂತಿ ಶಿಥಿಲಾವಸ್ಥೆ ತಲುಪುತ್ತಿದ್ದಂತೆ ಎಚ್ಚರಿಕೆ ವಹಿಸಬೇಕು. ಇತ್ತೀಚಿಗೆ ಜೆಸ್ಕಾಂ ನಿರ್ಲಕ್ಷ್ಯದಿಂದಾಗಿಯೇ ವಿದ್ಯುತ್ ತಂತಿ ಹರಿದು ಬಿದ್ದು ಪಿಂಜಾರ ಓಣಿಯಲ್ಲಿ ಬಾಬುಸಾಬ್, ಶೇಕ್ ಅಹಮದ್ ಅವರು ಮೃತಪಟ್ಟಿದ್ದರು. ಆದಾದ ಕೆಲವೇ ದಿನಗಳಲ್ಲಿ ಬಾಲಭಾರತಿ ಶಾಲೆಯ ಹತ್ತಿರ ಮರವೊಂದು ವಿದ್ಯುತ್ ತಂತಿ ಮತ್ತು ಕಂಬದ ಮೇಲೆ ಬಿದ್ದು ವಿದ್ಯುತ್ ತಂತಿ ಹರಿದು ನೆಲದ ಮೇಲೆ ಬಿದ್ದಿದೆ. ಆದರೆ ಈ ಅವಘಡ ರಾತ್ರಿ ನಡೆದಿರುವ ಹಿನ್ನೆಲೆಯಲ್ಲಿ ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಇಂತಹ ಘಟನೆಗಳು ನಡೆಯುವ ಮುನ್ನವೇ ಜೆಸ್ಕಾಂ ಎಚ್ಚರ ವಹಿಸುವುದು ಮುಖ್ಯ.
ಪಾಲಿಕೆ ಪರವಾನಗಿ ಅಗತ್ಯವಿಲ್ಲ: ಮಹಾನಗರ ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ ಅವರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ, ಬಳ್ಳಾರಿ ಮಹಾನಗರದಲ್ಲಿ ವಿದ್ಯುತ್ ತಂತಿ ಮೇಲೆ ಬಂದಿರುವ ಮರದ ರೆಂಬೆ, ಕೊಂಬೆಗಳನ್ನು ಪಡೆಯಲು ಮಹಾನಗರ ಪಾಲಿಕೆ ಅನುಮತಿ ಅಗತ್ಯವಿಲ್ಲ. ಪೂರ್ಣವಾಗಿ ಮರಗಳನ್ನು ಕಡಿಯಬೇಕಾದ ಅನಿವಾರ್ಯತೆ ಇದ್ದರೆ ಪರಿಸರ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಈ ವಿಷಯದಲ್ಲಿ ಜೆಸ್ಕಾಂನವರೇ ಎಚ್ಚರಿಕೆ ವಹಿಸಬೇಕು. ಮಹಾನಗರ ಪಾಲಿಕೆಯಿಂದ ಯಾವುದೇ ಪರವಾನಗಿ, ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.
-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.