ಹೆಚ್ಚು ವಿವಿ ಸ್ಥಾಪನೆ ಅಪಾಯಕಾರಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜು. 1
ರಾಜ್ಯ ಹಾಗೂ ದೇಶದಲ್ಲಿ ಹೆಜ್ಜೆ ಹೆಜ್ಜೆಗೂ ವಿಶ್ವವಿದ್ಯಾಲಯಗಳು ತಲೆ ಎತ್ತುತ್ತಿರುವುದು ಅಪಾಯಕಾರಿ ಸಂಗತಿ ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು.
ನಗರದ ಟಿ.ಬಿ. ಡ್ಯಾಂನ ಕರ್ನಾಟಕ ಗೌಂಡರ್ ಸಮುದಾಯ ಭವನದಲ್ಲಿ ಸೋಮವಾರ ನಡೆದ ಎಸ್ಎಫ್ಐ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅಧುನಿಕ ಶಿಕ್ಷಣದ ಭರಾಟೆಯಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸದೆ, ಕೇವಲ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ನಿಶ್ಶಕ್ತರನ್ನಾಗಿ ರೂಪಿಸಲಾಗುತ್ತಿದೆ. ಅಮೆರಿಕದಂತಹ ದೇಶಗಳು ಪರೋಕ್ಷವಾಗಿ ಭಾರತೀಯ ಶಿಕ್ಷಣ ಪದ್ಧತಿಯನ್ನೇ ಬುಡಮೇಲು ಮಾಡುವ ಮೂಲಕ ಎಲ್ಲೆಂದರಲ್ಲಿ ವಿವಿಗಳನ್ನು ತೆರೆಯಲು ಪ್ರೇರೇಪಿಸುತ್ತಿದೆ. ಇದರಿಂದಾಗಿ ದೇಶದಲ್ಲಿ ವಿವಿಗಳು ಈಗ ತಲೆ ಎತ್ತುತ್ತಿವೆ. ಇದು ಆತಂಕಕಾರಿ ಸಂಗತಿ ಎಂದರು.
ಜನಪರ ಕಾಳಜಿ ಇಲ್ಲ: ಲೋಕಸಭೆಯಲ್ಲಿ ಹಾಗೂ ವಿಧಾನಸಭೆಯಲ್ಲಿ ಶೇ. 70ರಷ್ಟು ಜನಪ್ರತಿನಿಧಿಗಳು ಕೋಟ್ಯಧಿಪತಿಗಳೆ ಇದ್ದಾರೆ. ಇಂತಹ ಜನಪ್ರತಿನಿಧಿಗಳಿಗೆ ಜನಪರ ಕಾಳಜಿ ಬಹಳ ಕಡಿಮೆ. ಖಾಸಗಿ ಕಂಪನಿಗಳ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಾರೆ. ನಿರಂಕುಶ ಬಂಡವಾಳಶಾಹಿಗಳಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ರಾಜಕಾರಣಿಗಳಿಗೆ ಓದು, ಸಾಹಿತಿಗಳ ಬಗ್ಗೆ ಬಹಳ ಅಲರ್ಜಿ. ಸಾಹಿತ್ಯ ತಿಳಿಯದೇ ಇರುವ ರಾಜಕಾರಣಿಗಳು ಸಮರ್ಪಕ ಆಡಳಿತ ನೀಡಲು ಅಸಾಧ್ಯ. ರಾಜಕಾರಣಿಗಳು ಜನಮುಖಿಗಳಾಗಿರಬೇಕು. ಜನರ ಅಭಿವೃದ್ಧಿಗೆ ಸದಾ ಚಿಂತಿಸುವ ತಾಯಿ ಕರಳು ಹೊಂದಿರಬೇಕು ಎಂದು ಹೇಳಿದರು.
ಮಠಗಳನ್ನು ನಿಷೇಧಿಸಿ: ರಾಜ್ಯ ಸರ್ಕಾರ ರು. 1ಗೆ ಕೆ.ಜಿ. ಅಕ್ಕಿ ನೀಡುವ ಘೋಷಣೆ ಮಾಡಿದೆ. ಮುಂದಿನ ಸರ್ಕಾರಗಳು 50 ಪೈಸೆಗೆ ಕೆ.ಜಿ. ಅಕ್ಕಿ ನೀಡಿದರೆ, ಮತ್ತೆ ಕೆಲ ಪಕ್ಷದವರು ಉಚಿತವಾಗಿ ಅಕ್ಕಿ ನೀಡುತ್ತೇವೆ ಎನ್ನುವ ಘೋಷಣೆಗಳಿಂದ ದೇಶದ ಅಭಿವೃದ್ಧಿಗೆ ಕಂಟಕ. ದೇಶದಲ್ಲಿ 12,795 ಜಾತಿಗಳಿವೆ. ಜಾತಿಗೊಂದು ಮಠ ನಿರ್ಮಿಸಿ ಮಠಗಳಲ್ಲಿ ಕೋಟಿಗಟ್ಟಲೆ ಆಸ್ತಿ ಸಂಪಾದನೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿದಂತೆ ಮಠ, ಸ್ವಾಮೀಜಿ, ಜೋತಿಷಿಗಳನ್ನು ಮತ್ತು ವಾಸ್ತು ಹೇಳುವವರನ್ನು ನಿಷೇಧಿಸಬೇಕಿದೆ ಎಂದರು.
ಗುಲ್ಬರ್ಗಾದ ಕೆ. ನೀಲಾ ಮಾತನಾಡಿ, ಚಿಂತನೆ ಇಲ್ಲದ ಚಳವಳಿಗಳು ಯಶಸ್ವಿಯಾಗಲಾರವು. ದೇಶದಲ್ಲಿ ಜ್ಞಾನ ನೀಡಬೇಕಾದ ಗ್ರಂಥಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಆದರೆ ಮಠಗಳು ಸಾಕಷ್ಟು ಸಂಖ್ಯೆಯಲ್ಲಿರುವುದು ಖೇದಕರ ಸಂಗತಿ ಎಂದು ಹೇಳಿದರು.
ಎಸ್ಎಫ್ಐ ರಾಜ್ಯಾಧ್ಯಕ್ಷ ಎನ್. ಅನಂತ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಜೆ. ಸತ್ಯಬಾಬು, ಎಸ್ಎಫ್ಐ ಕೇಂದ್ರ ಸಮಿತಿ ಸದಸ್ಯೆ ರೇಣುಕಾ ಕಹಾರ್, ಸ್ವಾಗತ ಸಮಿತಿ ಖಜಾಂಚಿ ಜೆ. ಪ್ರಕಾಶ್, ಸಿಐಟಿಯು ಖಜಾಂಚಿ ಎಂ. ಗೋಪಾಲ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ. ಮಹೇಶ್, ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ್, ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ಕೆ. ಸುರೇಶ್ ಚೌವ್ಹಾಣ್, ಜಿಲ್ಲಾಧ್ಯಕ್ಷೆ ಸೌಮ್ಯ, ತಾಲೂಕು ಅಧ್ಯಕ್ಷ ಟಿ. ಶರತ್ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

