ಆಧಾರ್ ಅರ್ಜಿಗೆ ಮಧ್ಯರಾತ್ರಿಯೇ ಸರದಿ!
ಹಗರಿಬೊಮ್ಮನಹಳ್ಳಿ: ಮಧ್ಯರಾತ್ರಿಯಿಂದಲೇ ಪಾಳಿ ಹಚ್ಚಿದರೂ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಆಧಾರ್ ಕಾರ್ಡ್ಗೆ ಹೆಸರು ನೋಂದಾಯಿಸಲು ಅರ್ಜಿ ಪಡೆಯುವ ಸಮಸ್ಯೆ ನೀಗುತ್ತಿಲ್ಲ. ತಾಲೂಕಿನಲ್ಲಿ ಆಧಾರ್ ಕಾರ್ಡ್ ಪಡೆಯುವುದು ಅಷ್ಟು ಸುಲಭವಲ್ಲ. ಮಧ್ಯರಾತ್ರಿ ನಿದ್ದೆಗೆಟ್ಟು, ಕೂಲಿ ಕೆಲಸ ಬಿಟ್ಟು ದ್ವಿಚಕ್ರ, ಸರಕು ಸಾಗಾಣಿಕೆ ವಾಹನಗಳನ್ನೇರಿ ಬಂದು ಸರದಿಯಲ್ಲಿ ನಿಂತು ತಾಕಾತ್ತು ಪ್ರದರ್ಶಿಸಿದರೂ ಅರ್ಜಿ ಮಾತ್ರ ಸುಲಭದಲ್ಲಿ ಸಿಗುತ್ತಿಲ್ಲ.
ಹೆಚ್ಚುವರಿ ಕೌಂಟರ್ಗಳನ್ನು ತೆರೆದು ತಾಲೂಕಿನಲ್ಲಿ ಆಧಾರ್ ಕಾರ್ಡ್ ಸಮಸ್ಯೆ ನಿವಾರಿಸುವಂತೆ ಸಾರ್ವಜನಿಕರು ಮಾಡಿಕೊಂಡಿರುವ ಮನವಿಗಳಿಗೆ ಲೆಕ್ಕವಿಲ್ಲ. ಹೆಚ್ಚುವರಿ ಕೌಂಟರ್ ತೆರೆಯಬೇಕಾಗಿರುವ ಜಿಲ್ಲಾಡಳಿತ ಮಾತ್ರ ಈ ವಿಷಯದಲ್ಲಿ ಜಾಣ ಕಿವುಡುತನವಹಿಸಿದೆ. ಜಿಲ್ಲಾಡಳಿತದ ಈ ನಿರ್ಲಕ್ಷ್ಯತನ ಬಿಸಿಲೂರಿನ ಜನತೆಯಲ್ಲಿ ಅಸಮಾಧಾನ ಉಂಟು ಮಾಡಿದೆ.
ಪಟ್ಟಣದ ಅಂಚೆ ಕಚೇರಿಯಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಡಿ ಟೀಂ ಲೈಫ್ ಕೇರ್ ಕಂಪನಿ ಇಂಡಿಯಾ ಲಿ. ಎಂಬ ಖಾಸಗಿ ಕಂಪನಿ ಅ. 13, 2011ರಂದು ಕೇಂದ್ರ ತೆರೆದಿದೆ. ಇಡೀ ತಾಲೂಕಿಗೆ ಇರುವುದು ಇದೊಂದೇ ಕೇಂದ್ರ. ಹೀಗಾಗಿ ಪ್ರತಿ ತಿಂಗಳಿಗೊಮ್ಮೆ ಹೆಸರು ನೋಂದಾಯಿಸಲು ವಿತರಿಸುವ ಅರ್ಜಿ ಪಡೆಯಲು ಈ ಕೇಂದ್ರದ ಮುಂದೆ ಕನಿಷ್ಠ ನಾಲೈದು ಸಾವಿರದಷ್ಟು ಜನತೆ ನೆರೆದಿರುತ್ತದೆ. ಇದರಿಂದಾಗಿ ಅರ್ಜಿ ವಿತರಿಸುವ ಸಮಯದಲ್ಲಿ ಸಾಕಷ್ಟು ನೂಕುನುಗ್ಗಲು, ಗಲಾಟೆ, ತಳ್ಳಾಟ, ಬಡಿದಾಟಗಳು ಸಾಮಾನ್ಯವಾಗಿರುತ್ತವೆ. ಇಂತಹ ಜನಜಂಗುಳಿ ನಿಯಂತ್ರಿಸಲು ಪೊಲೀಸರಿಗೆ ಸಾಕು ಸಾಕಾಗಿರುತ್ತದೆ.
ತಾಲೂಕು ಕೇಂದ್ರದಿಂದ 20-25 ಕಿ.ಮೀ. ದೂರದ ಗಡಿ ಗ್ರಾಮಗಳಾದ ಅಲಬೂರು, ಕೋಗಳಿ, ಅಂಬಳಿ, ಮುತ್ಕೂರು, ಹಂಪಾಸಾಗರ, ಲೋಕಪ್ಪನಹೊಲ, ಕಟ್ಟೆಹೊಲತಾಂಡಾ, ದಿಬ್ಬದಹಳ್ಳಿ, ಸಂಗಮೇಶ್ವರ, ಹನಸಿ, ಕುಡಿತಿನಮಗ್ಗಿ, ಕನ್ನಿಹಳ್ಳಿ, ಕಣವಿನಾಯಕನಹಳ್ಳಿ, ಕಲ್ಲಹಳ್ಳಿ, ಕೋಡಿಹಳ್ಳಿ, ಸಾಲ್ಮೂರಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನತೆ ಕುಟುಂಬ ಸಮೇತರಾಗಿ ಅರ್ಜಿಗಾಗಿ ಪ್ರತಿ ತಿಂಗಳು ಮಧ್ಯರಾತ್ರಿಯಿಂದಲೇ ಅಂಚೆ ಕಚೇರಿ ಆವರಣದ ಆಧಾರ್ ಕಾರ್ಡ್ ಕೇಂದ್ರದ ಮುಂದೆ ಸರದಿಯಲ್ಲಿ ನಿಂತು ಅರ್ಜಿಗಾಗಿ ಕಾಯುತ್ತಿರುತ್ತಾರೆ.
ಅರ್ಜಿಗಾಗಿ ಬರುವವರಲ್ಲಿ ಕೃಷಿಕರು, ಕೂಲಿಕಾರರು, ದಿನಗೂಲಿಗಳ ಸಂಖ್ಯೆಯೇ ಅಧಿಕ. ಇಂಥವರು ತಮ್ಮ ಒಂದು ದಿನದ ಕೂಲಿ ಕೆಲಸ ಬಿಟ್ಟು ಬಂದು ಸರದಿಯಲ್ಲಿ ನಿಂತು ಅರ್ಜಿಗೆ ಕಾಯ್ದರೂ ಬಹುತೇಕ ಸಲ ಅರ್ಜಿಗಳು ಸಿಕ್ಕಿಲ್ಲ. ಪಾಳಿ ನಿಂತ ದೈಹಿಕವಾಗಿ ಬಲಾಢ್ಯರಾಗಿದ್ದವರು ಹೇಗೋ ಹರಸಾಹಸ ಮಾಡಿ ಅರ್ಜಿ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ದೈಹಿಕವಾಗಿ ಬಲಹೀನರಾದವರು, ಮಹಿಳೆಯರು, ವೃದ್ಧರ ಪಾಡು ಆ ದೇವರಿಗೇ ಪ್ರೀತಿ. ತಿಂಗಳಿಗೊಂದು ಸಲ ನೀಡುವ ಅರ್ಜಿಯನ್ನು ಪಡೆಯಲು ಏಕಾಕಾಲಕ್ಕೆ ತಾಲೂಕಿನಿಂದ ನಾಲ್ಕೈದು ಸಾವಿರ ಸಂಖ್ಯೆಯಲ್ಲಿ ಅಗಮಿಸುವ ಜನ ಮುಗಿ ಬೀಳುತ್ತಾರೆ. ಅರ್ಜಿ ಪಡೆಯುವ ಸಲುವಾಗಿಯೇ ಅಂಚೆ ಕಚೇರಿ ಆವರಣದಲ್ಲಿ ನೆರೆಯುವ ಭಾರಿ ಜನಸಂದಣಿ ಮಧ್ಯೆ ಸಾಕಷ್ಟು ಸಲ ಗದ್ದಲ, ಗಲಾಟೆಗಳು ನಡೆದಿರುವ ಸಾಕಷ್ಟು ಉದಾಹರಣೆಗಳಿವೆ.
--
ಬಳ್ಳಾರಿ: 38 ಮಿಮೀ ಮಳೆ
ಬಳ್ಳಾರಿ: ಸಿರುಗುಪ್ಪ ತಾಲೂಕು ಹೊರತುಪಡಿಸಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒಟ್ಟು 38 ಮಿ.ಮೀ. ಮಳೆಯಾಗಿರುವ ಬಗ್ಗೆ ಜುಲೈ 4ರಂದು ವರದಿಯಾಗಿದೆ. ತಾಲೂಕುವಾರು ಬಿದ್ದ ಮಳೆ ವಿವರ ಇಂತಿದೆ. ಬಳ್ಳಾರಿ ತಾಲೂಕಿನಲ್ಲಿ 5.2 ಮಿ.ಮೀ., ಹಡಗಲಿ-6.2, ಹಗರಿಬೊಮ್ಮನಹಳ್ಳಿ-3.6, ಹೊಸಪೇಟೆ-4, ಕೂಡ್ಲಿಗಿ-1, ಸಂಡೂರು ತಾಲೂಕಿನಲ್ಲಿ 18 ಮಿ.ಮೀ. ಸೇರಿದಂತೆ ಒಟ್ಟು 38 ಮಿ.ಮೀ ಮಳೆಯಾಗಿದೆ. ಎಲ್ಲ ತಾಲೂಕುಗಳಿಗೆ ಹೋಲಿಸಿದರೆ ಜುಲೈ 4ರಂದು ಸಂಡೂರಿನಲ್ಲಿ ಅಧಿಕ ಮಳೆಯಾಗಿದೆ. ಪ್ರಸಕ್ತ ಮಾಹೆಯಲ್ಲಿ ಒಟ್ಟು 89.9 ಮಿ.ಮೀ. ಮಳೆಯಾಗಿದ್ದು, ಸರಾಸರಿ 12.8 ಮಿ.ಮೀ. ಮಳೆಯಾದಂತಾಗಿದೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೇಶ್ ಶಿವಾಚಾರ್ಯ ತಿಳಿಸಿದ್ದಾರೆ.
-ಹುಳ್ಳಿ ಪ್ರಕಾಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

