ಬಳ್ಳಾರಿ

ಅಂಗವಿಕಲನ ಮನೆ ಬಾಗಿಲಿಗೆ ಮಾಸಾಶನ ಪ್ರಮಾಣಪತ್ರ

Published On :

ಹಗರಿಬೊಮ್ಮನಹಳ್ಳಿ: ನಾಲ್ಕು ಸಾವಿರ ಲಂಚ ಕೊಟ್ಟರೂ  ಮಾಸಾಶನ ಸಿಗದ ಹಗರಿಬೊಮ್ಮನಹಳ್ಳಿ ತಾಲೂಕಿನ ಬಲ್ಲಾಹುಣ್ಸಿ ಗ್ರಾಮದ ದೈಹಿಕ ಅಂಗವಿಕಲ ಸಣ್ಣಕೊಟ್ರಗೌಡನ ಮಾಸಾಶನದ ವ್ಯಥೆಗೆ ಕೊನೆಗೂ ತಾಲೂಕು ಆಡಳಿತ ಸ್ಪಂದಿಸಿದೆ.
ಅಂಗವಿಕಲ ಮಾಸಾಶನ ಕುರಿತಂತೆ ಅಗತ್ಯ ಇರುವ ದಾಖಲೆಗಳನ್ನು ಸಿದ್ಧಪಡಿಸಲು ಕಂದಾಯ ನಿರೀಕ್ಷಕರಿಗೆ ತಹಸೀಲ್ದಾರ್ ನಾಗರಾಜ ಭಟ್ ಸೋಮವಾರ ಆದೇಶಿಸಿದ್ದಾರೆ. ಬಲ್ಲಾಹುಣ್ಸಿ ಗ್ರಾಮದ ಅಂಗವಿಕಲ ಸಣ್ಣಕೊಟ್ರಗೌಡ ಕಳೆದ ಒಂದೂವರೆ ವರ್ಷದಿಂದ ಮಾಸಾಶನ ಪಡೆಯಲು ಅಗತ್ಯ ಇರುವ ಪ್ರಮಾಣಪತ್ರ ಪಡೆಯಲು ಪಡಬಾರದ ಕಷ್ಟ ಪಟ್ಟಿದ್ದನು. ಈ ಕುರಿತು ಜುಲೈ 13ರಂದು 'ಕನ್ನಡಪ್ರಭ' ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ತಹಸೀಲ್ದಾರ್ ನಾಗರಾಜ ಭಟ್ ಸೋಮವಾರ ಮಧ್ಯಾಹ್ನ ಅಂಗವಿಕಲ ಸಣ್ಣಕೊಟ್ರಗೌಡನನ್ನು ತಮ್ಮ ಕಚೇರಿಗೆ ಕರೆಯಿಸಿಕೊಂಡು ಆತನಿಂದ ಎಲ್ಲ ವಿವರಗಳನ್ನು ಪಡೆದುಕೊಂಡರು. ಇನ್ನು ಮುಂದೆ ನೀನು ಯಾರಿಗೂ ಲಂಚ ಕೊಡುವ ಹಾಗಿಲ್ಲ. ನಿನ್ನ ಮನೆ ಬಾಗಿಲಿಗೆ ಅಂಗವಿಕಲ ಮಾಸಾಶನದ ಪ್ರಮಾಣ ಪತ್ರವನ್ನು ತಲುಪಿಸುವ ಜವಾಬ್ದಾರಿ ತಾಲೂಕು ಆಡಳಿತಕ್ಕೆ ಸೇರಿದ್ದು ಎಂದು ಭರವಸೆ ನೀಡಿದರು.
ಜುಲೈ 13 ಎರಡನೇ ಶನಿವಾರ ಮತ್ತು ಭಾನುವಾರ ಎರಡು ದಿನಗಳೂ ಸರ್ಕಾರಿ ರಜೆ ದಿನವಾಗಿದ್ದರಿಂದ ಸೋಮವಾರ ಅಂಗವಿಕಲ ಸಣ್ಣಕೊಟ್ರಗೌಡನ ಸಮಸ್ಯೆ ಕಡೆಗೆ ಗಮನ ಹರಿಸಿದೆವು. ಈ ಸಂಬಂಧ ಕಂದಾಯ ನಿರೀಕ್ಷಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ವಾರದೊಳಗೆ ಸಣ್ಣಕೊಟ್ರಗೌಡನಿಗೆ ಅಂಗವಿಕಲ ಮಾಸಾಶನ ಪಡೆಯುವ ಪ್ರಮಾಣಪತ್ರ ಸಿಗಲಿದೆ ಎಂದು ನಾಗರಾಜ ಭಟ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಈ ಕುರಿತು ಮಾತನಾಡಿದ ಸಣ್ಣಕೊಟ್ರಗೌಡ, ಪ್ರಮಾಣಪತ್ರ ಪಡೆಯಲು ಇಲ್ಲಿವರೆಗೆ ನಾಲ್ಕು ಸಾವಿರ ರುಪಾಯಿ ಲಂಚ ಕೊಟ್ಟಿದ್ದೇನೆ. ಆದರೆ ಏನೂ ಕೆಲಸ ಆಗಲಿಲ್ಲ. ನನ್ನಂತಹ ಬಡವನ ಬಗ್ಗೆ ಕರುಣೆ ತೋರಿ ಪೇಪರ್‌ನಲ್ಲಿ ನನ್ನ ಬಗ್ಗೆ ವರದಿ ಬರೆದು ನನಗೆ ಅನುಕೂಲ ಮಾಡಿಕೊಟ್ಟಿದ್ದೀರಿ ಎಂದು ತಾಲೂಕು ಕಚೇರಿಯಲ್ಲಿ ಅಂಗವಿಕಲ ಸಣ್ಣಕೊಟ್ರಗೌಡ 'ಕನ್ನಡಪ್ರಭ'ಕ್ಕೆ ತನ್ನ ಕೃತಜ್ಞತೆ ಸಲ್ಲಿಸಿದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.