ಬಳ್ಳಾರಿ

ಪುರಾಣ ಪ್ರವಚನದಿಂದ ಸತ್ವಯುತ ಸಮಾಜ

Published On :

ಕನ್ನಡಪ್ರಭ ವಾರ್ತೆ, ಕುರುಗೋಡು, ಜು. 17
ಪುರಾಣ ಪುಣ್ಯಕಥೆಗಳು ಸಮಾಜದಲ್ಲಿನ ವಿಷಪೂರಿತ ವಾತಾವರಣಕ್ಕೆ ಕಡಿವಾಣ ಹಾಕುತ್ತವೆ ಎಂದು ಹಂಪಿ ಸಾವಿರ ದೇವರ ಮಠದ ವಾಮದೇವ ಸ್ವಾಮೀಜಿ ಹೇಳಿದರು.
ಪಟ್ಟಣಕ್ಕೆ ಸಮೀಪದ ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ದೇವರ ಮಠದ ಆವರಣದಲ್ಲಿ ಈಚೆಗೆ ಮಠದ ಉಸ್ತುವಾರಿ ಸಮಿತಿ ಹಮ್ಮಿಕೊಂಡಿದ್ದ ಲಿಂಗಾಂಗ ಸಾಮರಸ್ಯ ಹಾಗೂ ಶ್ರೀಗುರು ಮಹಾಂತರ ಶಿವಾಚಾರ್ಯರ 12ನೇ ಪುಣ್ಯ ಸ್ಮರಣೆ ನಿಮಿತ್ತ ನಡೆಯಲಿರುವ ಇಟಿಗಿ ಭೀಮಾಂಬಿಕಾ ಪುರಾಣ ಹಾಗೂ 11 ದಿನದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮದ ಉಸ್ತುವಾರಿ ವಹಿಸಿ ಮಾತನಾಡಿದರು.
ಹೊರ ಸ್ವಚ್ಛತೆಗೆ ಪ್ರಾಮುಖ್ಯ: ಪುರಾಣಗಳಲ್ಲಿ ದೊರೆಯುವ ಸತ್ವ ಸಂಗತಿಗಳು ಸತ್ವಯುತ ಸಮಾಜದ ನಿರ್ಮಾಣಕ್ಕೆ ಬೇಕಾದ ಪ್ರಜ್ಞೆ ಸೃಷ್ಟಿಗೆ ಪೂರಕವಾಗಿದೆ. ಆದ್ದರಿಂದ ಹಿಂದಿನ ತಲೆಮಾರಿನವರು ಮಠ ಹಾಗೂ ದೇವಸ್ಥಾನದಲ್ಲಿ ಪುರಾಣ ಪ್ರವಚನ ನಡೆಸುತ್ತಿದ್ದರು ಎಂದರು. ಅನಂತರ ಕಂಪ್ಲಿ ಕಲ್ಮಠದ ಅಭಿನವ ಪ್ರಭು ಮಹಾಸ್ವಾಮಿ, ಇಂದಿನ ತಾಂತ್ರಿಕ ಯುಗದಲ್ಲಿ ಮೇಲ್ನೋಟದ ಪ್ರಜ್ಞೆ ಪ್ರಚಲಿತವಾಗುತ್ತಿದೆ. ಒಳಗೆ ಕೊಳಕಿದ್ದರೂ ಹೊರ ಸ್ವಚ್ಛತೆಗೆ ಮಾತ್ರ ಪ್ರಾಮುಖ್ಯ ಇದೆ. ಇದರಿಂದ ಸುಶಿಕ್ಷಿತ ಸಮಾಜ ಕಟ್ಟಲು ಸಾಧ್ಯವಿಲ್ಲ. ಒಳ ಸ್ವಚ್ಛತೆಗೆ ತೀರ್ಥ, ಮತ್ಯಾವುದೇ ಯಾತ್ರೆ ಪ್ರಯೋಜನವಾಗಲಾರವು. ಮನೆಯಲ್ಲಿ ಕಣ್ಣೆದುರೆ ಇರುವ ತಾಯಿ ತಂದೆಯರ ಸೇವೆಯಲ್ಲಿ ಮಾನಸಿಕ ಸ್ವಚ್ಛತೆ ದೊರೆಯಲಿದೆ. ಇದು ಸಮಾಜದ ಎಲ್ಲ ವರ್ಗದ ಜನರಿಗೆ ಅನಿವಾರ್ಯ ಎಂದರು.
ಹರಗಿಣ ಡೋಣಿ ಸಿದ್ದಲಿಂಗ ಶಿವಚಾರ್ಯ ಶ್ರೀ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾರಂಭದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ತೆಕ್ಕಲಕೋಟೆಯ ಕಂಬಾಳಿ ಮಠದ ವೀರಭದ್ರ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಶಾನವಾಸಪುರದ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಡಿವಾಳಯ್ಯ ಶಾಸ್ತ್ರಿ ಹಿರೇಮಠ್ ಪುರಾಣ ಪ್ರವಚಿಸಿದರು. ಗುಲ್ಬರ್ಗಾದ ಸಂಗಮೇಶ್ ಪಾಟೀಲ್, ಎಮ್ಮಿಗನೂರಿನ ಬಸವರಾಜ್ ಸಂಗೀತ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಸ್ಕಿಮಠದ ರುದ್ರಮುನಿ ಶ್ರೀ, ಕಂಪ್ಲಿ ನಾಡಕಚೇರಿ ತಹಸೀಲ್ದಾರ್ ಬಾಲಪ್ಪ, ಕರಿಬಸವನಗೌಡ, ಕುರುಗೋಡಿನ ಜ್ಞಾನವಾಹಿನಿಯ ಎನ್. ಮರಿಬಸವನಗೌಡ ಇದ್ದರು. ರಾಗಿ ಶರಣ ಬಸಯ್ಯ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.