ಹೊಂಡಮಯ ರಸ್ತೆ: ಪ್ರಯಾಣಿಕ ಸುಸ್ತು...!
ಹೂವಿನಹಡಗಲಿ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಹೊತ್ತಿರುವ ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಕ್ಷೇತ್ರದಲ್ಲೊಂದು ಸುತ್ತು ಹಾಕಿದಾಗ ಗ್ರಾಮೀಣ ಪ್ರದೇಶದಲ್ಲಿ ಎಲ್ಲಿ ನೋಡಿದರೂ ರಸ್ತೆಗಳಲ್ಲಿ ಗುಂಡಿಗಳ ಸಾಮ್ರಾಜ್ಯ ಸ್ಥಾಪನೆಯಾಗಿದೆ. ಇಲಾಖೆ ಹಿಡಿ ಮಣ್ಣು ಹಾಕದಷ್ಟು ದುಸ್ಥಿತಿಗೆ ಬಂದಿದೆ.
ಹೌದು. ಈ ಕುರಿತು ಲೋಕೋಪಯೋಗಿ ಹಾಗೂ ಪಂಚಾಯತ್‌ರಾಜ್ ಇಲಾಖೆಗಳ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆಗಳ ದುರಸ್ತಿ ಕುರಿತು ಕೇಳಿದಾಗ ಅನುದಾನ ಬಂದಿಲ್ಲವೆಂಬ ಉತ್ತರ ಅಧಿಕಾರಿ ವಲಯದಲ್ಲಿ ಸಿದ್ಧವಾಗಿರುತ್ತದೆ.
ಹಳ್ಳಿಗಾಡಿನ ರಸ್ತೆಗಳ ದುರಸ್ತಿ ಬಗ್ಗೆ ಸಚಿವರು ಚಕಾರ ಎತ್ತದೇ ಅಧಿಕಾರಿಗಳಿಂದ ಅಭಿವೃದ್ಧಿ ಕ್ರಮ ತೆಗೆದುಕೊಳ್ಳದ ಕಾರಣ, ಅದೇ ಹಾಳು ಬಿದ್ದು ರಸ್ತೇಲಿ ಪ್ರಯಾಣಿಕರು ನಿತ್ಯ ಹಿಡಿಶಾಪ ಹಾಕುತ್ತಾ ಪ್ರಯಾಣಿಸುತ್ತಿದ್ದಾರೆ. ಹೂವಿನಹಡಗಲಿ ತಾಲೂಕು ಡಾ. ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ಇಲ್ಲಿನ ಹಳ್ಳಿಗಳ ಸ್ಥಿತಿಗತಿ ನೆಟ್ಟಗಿಲ್ಲ. ಡಾ. ನಂಜುಂಡಪ್ಪ ವರದಿ ಅನುಷ್ಠಾನದಿಂದ ಹಳ್ಳಿ ರಸ್ತೆ ಸುಧಾರಣೆ ಕಾಣಬಹುದೆಂಬ ಹಳ್ಳಿ ಜನರ ಕನಸು ಇನ್ನು ಈಡೇರಿಲ್ಲ.
ಕಿತ್ತು ಹೋದ ರಸ್ತೆಗಳು: ಕೊಂಬಳಿ, ಸೋವೇನಹಳ್ಳಿ, ಹಕ್ಕಂಡಿ, ರಾಜವಾಳ, ಅಲ್ಲಿಪುರ, ಅಯ್ಯನಹಳ್ಳಿ, ಶಿವಪುರ, ಮಾಗಳ, ಹೊಸಹಳ್ಳಿ, ಅರಳ್ಳಿಹಳ್ಳಿ ತಾಂಡ, ಅರಳ್ಳಿಹಳ್ಳಿ, ಬೀರಬ್ಬಿ, ಅಂಗೂರು, ಮಕರಬ್ಬಿ, ಬ್ಯಾಲಹುಣ್ಸಿ, ಕಾಂತೆಬೆನ್ನೂರು, ಬನ್ನಿಮಟ್ಟಿ, ನಂದಿಗಾವಿ, ಹೊಳಲು, ಚಿಕ್ಕಕೊಳಚಿ, ಹಿರೇಕೊಳಚಿ, ಮಾನ್ಯರ ಮಸಲವಾಡ, ನಡುವಿನಹಳ್ಳಿ, ದಾಸನಹಳ್ಳಿ, ಕಳಸಾಪುರ, ಹಾಳ್‌ತಿಮ್ಲಾಪುರ, ಕಗ್ಗಲಗಟ್ಟಿ ತಾಂಡ, ತಮ್ಲಾಪುರ, ಗಿರಿಯಾಪುರಮಠ, ಬೂದನೂರು, ಕೋಟಿಹಾಳ್ ಹೀಗೆ ದೊಡ್ಡ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ರಸ್ತೆಗಳಿಗೆ ಯಾವ ಇಲಾಖೆಯೂ ಹಿಡಿ ಮಣ್ಣು ಹಾಕಿಲ್ಲ.
ತಾಲೂಕಿನ ಮಾಗಳ ಹೊಳಲು ರಸ್ತೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ತಾಲೂಕು ಕೇಂದ್ರ ಬರಲು ಒಂದೇ ಬಸ್ ಇದೆ. ಅದು ಸಂಪೂರ್ಣ ಹದಗೆಟ್ಟು ಹೋಗಿ ಬಸ್ ಸಂಚಾರವೇ ನಿಲುಗಡೆ ಮಾಡುವ ಹಂತಕ್ಕೆ ಬಂದಿದೆ. 8-9 ಹಳ್ಳಿ ಜನರಿಗೆ ಬಸ್ ಸೌಕರ್ಯ ಇಲ್ಲದಂತಾಗುತ್ತದೆ. ಇಂಥ ಜ್ವಲಂತ ಸಮಸ್ಯೆ ಇದ್ದರೂ ಪಂಚಾಯತ್‌ರಾಜ್ ಹಾಗೂ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡಿಲ್ಲ.
ಮಾಗಳ-ಹೊಳಲು ರಸ್ತೆ ದುರಸ್ತಿ ಕಾಣದೇ 15-20 ವರ್ಷಗಳಾದರೂ, ತಾಲೂಕಿನ ಮೂಲೆಕಟ್ಟಿನ ಈ ಗ್ರಾಮಗಳ ರಸ್ತೆಯನ್ನು ಸಂಪೂರ್ಣವಾಗಿ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ಲಕ್ಷ್ಯವಹಿಸಿದ್ದು, ಈಗಲೂ ಕಾಡು ರಸ್ತೆಯಂತಿರುವ ಈ ಮಾರ್ಗಕ್ಕೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಇಂದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ.
ಈ ಕುರಿತು ಪಂಚಾಯತ್‌ರಾಜ್ ಇಲಾಖೆ ಎಇಇ ಹನುಮಂತರೆಡ್ಡಿ ಹಾಗೂ ಲೋಕೋಪಯೋಗಿ ಇಲಾಖೆ ಸಣ್ಣ ಪರಶುರಾಮಪ್ಪ ಅವರನ್ನು ಸಂಪರ್ಕಿಸಿದಾಗ, ತಾಲೂಕಿನ ರಸ್ತೆ ಅಭಿವೃದ್ಧಿಗೆ ಅನುದಾನವಿಲ್ಲದ ಕಾರಣ ರಸ್ತೆ ಅಭಿವೃದ್ಧಿಯಾಗಿಲ್ಲ. ಈ ವರ್ಷ ಪಿಎಂಜಿಎಸ್‌ವೈ ಯೋಜನೆಯಡಿ ಅನುದಾನ ಬಂದಾಗ ರಸ್ತೆ ದುರಸ್ತಿ ಮಾಡುತ್ತೇವೆಂದು ತಿಳಿಸಿದರು.
ಅಪಘಾತ ಕಾಯಂ
ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯ ತಗ್ಗು ಗುಂಡಿಗಳದ್ದೆ ಕಾರುಬಾರು. ಹಿರೇಹಡಗಲಿ ಕೆರೆ ದಂಡೆಯ ಮೇಲೆ ವಾಹನಗಳ ಸಂಚರಿಸುತ್ತಿದ್ದು, ಇಕ್ಕೆಲ ಪ್ರದೇಶ ತಗ್ಗಾಗಿದೆ. ಇಲ್ಲಿ ಆಯ ತಪ್ಪಿದರೆ ಅಪಘಾತ ಖಾತ್ರಿ. ರಕ್ಷಣಾ ಗೋಡೆಗಳಿಲ್ಲದ ಕಾರಣ ಅನೇಕ ಅಪಘಾತಗಳು ಸಂಭವಿಸಿವೆ.
- ಎಚ್. ಸೋಮಶೇಖರ, ಗ್ರಾಮಸ್ಥ, ಹಿರೇಹಡಗಲಿ
ಜನ ಬಸ್ ಕೇಳ್ತಾರೆ, ರಸ್ತೆ ಕೇಳಲ್ಲ!
ನಮ್ಮೂರಿಗೆ ಬಸ್ಸೇ ಇಲ್ಲ ಎಂದು ನಿತ್ಯ ಬಸ್ ಡಿಪೋ ಮುಂದೆ ಅಧಿಕಾರಿಗಳೊಂದಿಗೆ ಜಗಳ. ಹಳ್ಳಿ ರಸ್ತೇಲಿ ಬಸ್ ಓಡಿಸಲಾಗದಷ್ಟು ರಸ್ತೆ ಕಿತ್ತು ಹೋಗಿವೆ. ನಿಮ್ಮೂರಿನ ರಸ್ತೆ ಸರಿ ಮಾಡಿ ಆ ಮೇಲೆ ಬಸ್ ಬಿಡುತ್ತೇವೆ ಎಂದು ಸಾರಿಗೆ ಘಟಕದವರು ಹೇಳುತ್ತಾರೆ. ಮಾಗಳ-ಹೊಳಲು 30 ಕಿ.ಮೀ. ರಸ್ತೇಲಿ ಅಂಗೈ ಅಗಲ ಟಾರ್ ಇಲ್ಲ, ದುರಸ್ತಿಗೆ ಕ್ರಮವಿಲ್ಲ.
- ಬ್ಯಾಲಹುಣ್ಸಿ ಗುರುರಾಜ, ಗ್ರಾಮಸ್ಥ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

