ಕುಸ್ತಿ ರಾಮಣ್ಣನ ಅಲಸಂದಿ ವಡೆ ತಾಲೀಮು
ಹಗರಿಬೊಮ್ಮನಹಳ್ಳಿ: ಪುರಾಣ ಕಾಲದಿಂದ ಆಧುನಿಕ ಯುಗದವರೆಗೂ ಕುಸ್ತಿ ಗಂಡುವಿದ್ಯೆ ಎಂದೇ ಭಾರತೀಯ ಕಾಲಮಾನದಲ್ಲಿ ದಾಖಲಾಗಿದೆ. ಕುಸ್ತಿ ನಂಬಿಕೊಂಡಿದ್ದಕ್ಕೆ ಅಖಾಡದಲ್ಲಿ ಗೆದ್ದಾಗ ಶಹಬ್ಬಾಸ್ಗಿರಿ ಸಿಕ್ಕಿದ್ದು ಬಿಟ್ಟರೆ ಕುಟುಂಬ ಮುನ್ನಡೆಸಲು ಕಾಯಂ ಆಧಾರ ಎನ್ನುವುದು ಬಹಳಷ್ಟು ಪೈಲ್ವಾನರಿಗೆ ಇಂದಿಗೂ ಮರೀಚಿಕೆಯೇ ಸರಿ.
ಹಮಾಲರಾಗಿ, ಕೂಲಿ ಕಾರ್ಮಿಕರಾಗಿ, ಬಸ್, ರೇಲ್ವೆ ನಿಲ್ದಾಣಗಳಲ್ಲಿ ಪೋರ್ಟರ್ಗಳಾಗಿ, ತಳ್ಳುಗಾಡಿಯಲ್ಲಿ ಹೂ, ಹಣ್ಣು ಮಾರಾಟ ಮಾಡುತ್ತ, ಹೊಟೇಲ್ಗಳಲ್ಲಿ ಸಪ್ಲೈಯರ್, ಕ್ಲೀನರ್ ಹೀಗೆ ವಿವಿಧ ಕೆಲಸದಲ್ಲಿ ನಿರತರಾಗಿ ತಮ್ಮ ಕುಟುಂಬವನ್ನು ಸಾಕುವ ಮಾಜಿ ಪೈಲ್ವಾನರು ಅಸಂಖ್ಯಾತ ಸಂಖ್ಯೆಯಲ್ಲಿ ಗ್ರಾಮೀಣ ಭಾರತದಾದ್ಯಂತ ಕಾಣಸಿಗುತ್ತಾರೆ.
ಪ್ರತಿದಿನ ಎರಡು ಕೆಜಿ ಅಲಸಂದಿ ರುಬ್ಬಿ ಅದರಿಂದ ತಯಾರಾಗುವ ಗರಿ, ಗರಿ ಅಲಸಂದಿ ವಡೆಮಾರಿ ಹೆಂಡತಿ, ಮೂವರು ಮಕ್ಕಳಿರುವ ಸಂಸಾರದ ಬಂಡಿ ಎಳೆಯುತ್ತಿರುವ ಹಗರಿಬೊಮ್ಮನಹಳ್ಳಿ ಪಟ್ಟಣದ ಹಡಪದ ರಾಮಣ್ಣ ಇಂತಹ ಅಸಂಖ್ಯಾತರಲ್ಲಿ ಒಬ್ಬ.
ಈ ಸೀಮೆಯ ಸುತ್ತಮುತ್ತಲಿನ ಕುಸ್ತಿ ಅಖಾಡದಲ್ಲಿ ಉತ್ತಮ ಹೆಸರು ಗಳಿಸಿದ್ದ ರಾಮಣ್ಣ, ಈಗ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ನಿತ್ಯ ಮುಂಜಾನೆ ಏಳು ಗಂಟೆಯಿಂದ ಸಂಜೆ 6 ಗಂಟೆವರೆಗೂ ಅಲಸಂದಿ ವಡೆ ಮಾರುವ ಕಾಯಕದಲ್ಲಿ ನಿರತನಾಗಿದ್ದಾನೆ. ಕುಸ್ತಿ ಅಖಾಡದ ಕೆಂಪುಮಣ್ಣಿನ ಜೊತೆಗಿನ ಸಂಬಂಧ ಈಗ ರಾಮಣ್ಣನನ್ನು ಅಲಸಂದಿ ವಡೆವರೆಗೂ ತಂದುನಿಲ್ಲಿಸಿದೆ. ಕುಸ್ತಿಗಿಂತ ಅಲಸಂದಿ ವಡೆಯೇ ಈ ಮಾಜಿ ಪೈಲ್ವಾನ್ ಬದುಕಿನ ಭದ್ರ ಆಸರೆ. ಹಾಗಂತ ಕುಸ್ತಿ ಮೇಲಿನ ಪ್ರೇಮ ಮುದುಡಿಲ್ಲ, ಈಗಲೂ ಕುಸ್ತಿ ಬಗ್ಗೆ ಯಾರೇ ಕೇಳಿದರೂ ಅತ್ಯಂತ ಗೌರವ ಭಾವನೆಯಿಂದಲೇ ವಿಚಾರ ಹಂಚಿಕೊಳ್ಳುವ, ಈ ಸೀಮೆಯ ಸುತ್ತಲೂ ಎಲ್ಲಿಯೇ ಕುಸ್ತಿ ನಡೆದರೂ ಅಲ್ಲಿ ರಾಮಣ್ಣನ ಹಾಜರ್.
ಬಸ್ಗಳಲ್ಲಿನ ಪ್ರಯಾಣಿಕರಿಗೆ ವಡೆಮಾರಿ, ಪುತ್ರ, ಪುತ್ರಿಯ ಮದುವೆ ಮಾಡಿ, ಈಗ ಕೊನೆಯ ಮಗಳನ್ನು ಪಟ್ಟಣದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿಸುತ್ತಿದ್ದಾರೆ. ಮಗಳ ವಿದ್ಯಾಭ್ಯಾಸ, ಕುಟುಂಬದ ನಿತ್ಯದ ಖರ್ಚು ವೆಚ್ಚಗಳೆಲ್ಲವನ್ನು ಅಲಸಂದಿ ವಡೆ ಮಾರಾಟವೇ ನಿರ್ಧರಿಸುತ್ತದೆ. ಕುಸ್ತಿಯೇ ಒಂದು ಕಾಲಕ್ಕೆ ಸರ್ವಸ್ವ. ಈಗ ಆ ಜಾಗದಲ್ಲಿ ಅಲಸಂದಿವಡೆ ಜೊತೆಯಾಗಿದೆ.
15ನೇ ವರ್ಷಕ್ಕೆಲ್ಲ ವಡೆ ತಟ್ಟೆ ಹಿಡಿದು ಬಸ್ ಸ್ಟ್ಯಾಂಡ್ಗೆ ಬಂದೆ. ವಡೆ ಮಾರುತ್ತ ಆರಂಭಿಸಿದ ಜೀವನ ಈಗ 54 ವರ್ಷಕ್ಕೆ ತಂದು ನಿಲ್ಲಿಸಿದೆ. 40 ವರ್ಷಗಳಿಂದ ದಿನ ಎರಡು ಕೆಜಿಯ ಅಲಸಂದಿ ವಡೆ ಮಾರುವೆ. ಈಗ ರು. 500 ಸಿಗುತ್ತದೆ. ಇದರಲ್ಲಿ ರು. 300 ವೆಚ್ಚ ಕಳೆದರೆ ರು. 200 ಉಳಿಯುತ್ತದೆ. ಬಿಪಿಎಲ್ ಕಾರ್ಡ್ ಇಲ್ಲ, ತಲೆ ಮೇಲೆ ಕಾಯಂ ಸೂರಿಲ್ಲ. ಮೈ ಗಟ್ಟಿ ಇದ್ದಾಗ ಹತ್ತು ವರ್ಷಗಳ ಕಾಲ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಚಿರಿಬಿ, ಮರಿಯಮ್ಮನಹಳ್ಳಿ, ಹೂವಿನ ಹಡಗಲಿ ಸೇರಿದಂತೆ ನಾನಾ ಕಡೆಗಳಲ್ಲಿ ಕುಸ್ತಿ ಆಡಿದೆ. ಹಲವು ಸಲ ಗೆದ್ದೆ, ಕೆಲ ಸಲ ಸೋತೆ. ಈಗ ಬದುಕಿನ ಬಂಡಿ ಓಡಿಸಲು ಅಲಸಂದಿ ವಡೆ ಜತೆಗೆ ನಿತ್ಯ ತಾಲೀಮು ನಡೆದಿದೆ. ಹಾಗಂತ ಕುಸ್ತಿ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ ಎನ್ನುತ್ತಾನೆ ಹಡಪದ ರಾಮಣ್ಣ. ಕಾಯಂ ಸೂರು, ಬಿಪಿಎಲ್ ಕಾರ್ಡ್ ಸೌಲಭ್ಯ ಮತ್ತು ಆತನ ಮಗಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಮೂಲಕ ಈ ಮಾಜಿ ಪೈಲ್ವಾನನ ಬದುಕಿಗೊಂದು ಆಸರೆ ಕಲ್ಪಿಸಬೇಕಿದೆ.
ನಿತ್ಯ ಬೆಳಗಿನ ಐದು ಗಂಟೆಗೆಲ್ಲ ಹಡಪದ ರಾಮಣ್ಣನ ಅಲಸಂದಿ ವಡೆ ತಯಾರಿ ದಿನಚರಿ ತೆರೆದುಕೊಳ್ಳುತ್ತದೆ. ವಿದ್ಯುತ್ ಇಲ್ಲದಿದ್ದರೆ ಪತ್ನಿಯೇ ಕೈಯಿಂದ ಅಲಸಂದಿ ಬೆಳೆ ರುಬ್ಬುತ್ತಾರೆ. ಪತ್ನಿ ಕರಿದ ಅಲಸಂದಿ ವಡೆಯನ್ನು ತಟ್ಟೆಯಲ್ಲಿ ತುಂಬಿಕೊಂಡು ಏಳು ಗಂಟೆಗೆಲ್ಲ ಬಸ್ಸ್ಟ್ಯಾಂಡ್ಗೆ ಹಾಜರು. 40 ವರ್ಷದ ಬಸ್ಸ್ಟ್ಯಾಂಡ್ ಅನುಭವ ಮಾರಾಟದಲ್ಲಿ ಈತನನ್ನು ಸಾಕಷ್ಟು ಮಾಗಿಸಿದೆ. ಹೀಗಾಗಿ, ಗಿರಾಕಿಗಳಿಲ್ಲ ಎಂಬ ಕೊರಗು ಸದ್ಯಕ್ಕಿಲ್ಲ.
-ಹುಳ್ಳಿ ಪ್ರಕಾಶ
--
ಮನೆಗೆ ಬೀಗ ಮುರಿದು ಕಳ್ಳತನ
ಬಳ್ಳಾರಿ: ಮನೆಯ ಬೀಗ ಮುರಿದು ಕಪಾಟಿನಲ್ಲಿದ್ದ ರು. 54,100 ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿರುವ ಘಟನೆ ನಗರದ ಎಚ್ಜೆ ಕಾಲೇಜ್ ರಸ್ತೆಯ ವೆಂಕಟರಮಣ ಕಾಂಪೌಂಡ್ನಲ್ಲಿ ನಡೆದಿದೆ. ಎಸ್ಜೆ ಕಾಲೇಜಿನ ರಸ್ತೆ ನಿವಾಸಿ ಶಿಕ್ಷಕ ಸಿದ್ಧಾರೂಢ ಸ್ವಾಮಿ ಮನೆಯಲ್ಲಿಯೇ ಕಳ್ಳತನವಾಗಿದೆ. ಮನೆಗೆ ಬೀಗ ಹಾಕಿದ ಸಂದರ್ಭದಲ್ಲಿ ಜು. 19ರ ಸಂಜೆ 6.15ರಿಂದ ಜು. 20ರ ಬೆಳಗ್ಗೆ 7ರ ಮಧ್ಯೆ ಕಳ್ಳತನ ಆಗಿರಬಹುದು. ಮನೆಯ ಬೀಗ ಹಾಕಿರುವುದನ್ನು ನೋಡಿದ ಕಳ್ಳರು, ಮನೆಯ ಬಾಗಿಲ ಬೀಗ ಮುರಿದು ಒಳಗೆ ಹೋಗಿ, ಮನೆಯಲ್ಲಿದ್ದ ಗಾಡ್ರೇಜ್ ಬೀರುವಾದಲ್ಲಿದ್ದ ರು. 54,100 ಮೌಲ್ಯದ ಬಂಗಾರದ ಆಭರಣ ಹಾಗೂ ಬೆಳ್ಳಿಯ ಒಡವೆ ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಕುರಿತಾಗಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

