ಸುದ್ದಿ ಸಂಕ್ಷೇಪ
ಇಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ: ಬಳ್ಳಾರಿ ನಗರದ ವಿವಿಧೆಡೆ ಜು. 24ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಗರದ 110/11 ಕೆ.ವಿ.(ದಕ್ಷಿಣ) ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೊಂಡಿದ್ದು, ಈ ಕೇಂದ್ರದಿಂದ ಸರಬರಾಜಾಗುವ ಎಲ್ಲ ಪ್ರದೇಶಗಳಲ್ಲಿ ಜು. 24ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ರಸ್ತೆ, ಮೋತಿ ರಸ್ತೆ, ಬುಡಾ ಕಚೇರಿ, ಕೋಟೆ, ಬಂಡಿಮೋಟು, ಕಮೇಲಾ, ಬಾಪೂಜಿನಗರ, ರಾಣಿತೋಟ, ದೊಡ್ಡಮಾರ್ಕೆಟ್, ಎಪಿಎಂಸಿ, ವೆಂಕಟಮ್ಮ ಕಾಲೋನಿ, ಕಾಕರ್ಲತೋಟ, ಬಳ್ಳಾರೆಪ್ಪ ಕಾಲೋನಿ, ಗುಗ್ಗರಹಟ್ಟಿ, ಕೈಗಾರಿಕಾ ಪ್ರದೇಶ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ಕಡಿತವುಂಟಾಗಲಿದೆ. ಗ್ರಾಹಕರು ನಿಗಮದೊಂದಿಗೆ ಸಹಕರಿಸಬೇಕೆಂದು ಎಂದು ಗುಲ್ಬರ್ಗಾ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಬಿ.ಜಿ. ಬಸವರಾಜ ಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ರಸ್ತೆಗಳ ಪರಿವೀಕ್ಷಣೆ
ಬಳ್ಳಾರಿ: ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬಳ್ಳಾರಿ ಯೋಜನಾ ವಿಭಾಗದ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಗ್ರಾಮೀಣ ರಸ್ತೆಗಳ ಪರಿವೀಕ್ಷಣಾ ಕಾರ್ಯ ಜು. 25ರಿಂದ 29ರ ವರೆಗೆ ನಡೆಸಲಿದೆ ಎಂದು ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು ತಿಳಿಸಿದ್ದಾರೆ. ಪರಿವೀಕ್ಷಣಾ ಕಾರ್ಯವನ್ನು ರಾಷ್ಟ್ರೀಯ ಗುಣನಿಯಂತ್ರಣ ವೀಕ್ಷಕ ಸಿಂಗ್ ಬ್ರಿಜೇಂದ್ರ ಅವರು ನಡೆಸಲಿದ್ದು, ಹೆಚ್ಚಿನ ಮಾಹಿತಿಗಾಗಿ ನಗರದ ಕೋಟೆ ಪ್ರದೇಶಲ್ಲಿರುವ ಪಿಎಂಜಿಎಸ್ವೈ ಯೋಜನಾ ವಿಭಾಗದ ಕಚೇರಿಯನ್ನು ಅಥವಾ ದೂರವಾಣಿ 08392-267141ಗೆ ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.
ಎಣ್ಣೆ ಘಟಕದ ಮೇಲೆ ದಾಳಿ
ಬಳ್ಳಾರಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಡಿಸಿಐಬಿ ಪೊಲೀಸರು ನಗರದ ಸಣ್ಣಮಾರ್ಕೆಟ್ನ ಗ್ರಹಂ ರಸ್ತೆಯ ಎಣ್ಣೆ ಉತ್ಪನ್ನ ಘಟಕದ ಮೇಲೆ ದಾಳಿ ನಡೆಸಿ ರು. 12 ಲಕ್ಷ ಮೌಲ್ಯದ ನಾನಾ ಕಂಪನಿಗಳ ಎಣ್ಣೆ ಉತ್ಪನ್ನಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಗ್ರಹಂ ರಸ್ತೆಯ ಶ್ರೀ ಗುರುರಾಜ ಎಂಟರ್ಪ್ರೈಸಸ್ ಎಣ್ಣೆ ಉತ್ಪನ್ನ ಮತ್ತು ಮಾರಾಟ ಘಟಕ 3-4 ವರ್ಷಗಳಿಂದ ಪರವಾನಗಿ ಇಲ್ಲದೇ ಎಣ್ಣೆ ಉತ್ಪನ್ನ ಮತ್ತು ಮಾರಾಟದಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ನಾನಾ ಕಂಪನಿಗಳ 9740 ಕೆಜಿ ಹಾಗೂ 7780 ಲೀ. ಎಣ್ಣೆ ಸೇರಿದಂತೆ ರು. 12, 62,186 ಮೌಲ್ಯದ ಪರಿಕರ ಜಫ್ತಿ ಮಾಡಿದ್ದಾರೆ. ಈ ಕುರಿತು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ಸುರಕ್ಷಿತ ಅಧಿಕಾರಿ ಡಾ. ಅಬ್ದುಲ್ಲಾ ಸ್ಥಳಕ್ಕೆ ಭೇಟಿ ನೀಡಿ, ಎಣ್ಣೆ ಪದಾರ್ಥಗಳನ್ನು ತಪಾಸಣೆ ನಡೆಸಿದರು.
ಬಳ್ಳಾರಿ: ಆಯ್ಕೆ ಪಟ್ಟಿ ಪ್ರಕಟ
ಬಳ್ಳಾರಿ: ಸರ್ಕಾರಿ ಕೋಟಾದಡಿ ಡಿಇಡಿ, ಡಿಪಿಇಡಿ ಕೋರ್ಸಿಗೆ ಆಯ್ಕೆ ಬಯಸಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಡಯಟ್ ಪ್ರಾಚಾರ್ಯರು ತಿಳಿಸಿದ್ದಾರೆ. ಆಯ್ಕೆ ಪಟ್ಟಿಯನ್ನು ಮೆರಿಟ್ ಹಾಗೂ ಮೀಸಲಾತಿಯನ್ವಯ ಪ್ರಕಟಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಹಂಚಿಕೆ ಮಾಡಲಾದ ಸಂಸ್ಥೆಯು ತಮಗೆ ಒಪ್ಪಿಗೆಯಾದಲ್ಲಿ ಎಲ್ಲ ಮೂಲ ದಾಖಲೆಗಳನ್ನು ಜು. 25ರೊಳಗಾಗಿ ಪರಿಶೀಲನೆಗೆ ಸಲ್ಲಿಸಿ ದಾಖಲಾತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನಗರದ ರೇಡಿಯೋ ಪಾರ್ಕ್ ಬಳಿಯಿರುವ ಜಿಲ್ಲಾ ಡಯಟ್ ಕಚೇರಿಯನ್ನು ಸಂಪರ್ಕಿಸಬಹುದೆಂದು ಅವರು ಮನವಿ ಮಾಡಿದ್ದಾರೆ.
ಪ್ರೌಢಶಾಲಾ ವಿಭಾಗ: ನಾಗರಾಜ್ಗೆ ಜಯ
ಕೂಡ್ಲಿಗಿ: ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಪ್ರೌಢ ಶಾಲಾ ವಿಭಾಗದ ಒಂದು ಸದಸ್ಯತ್ವಕ್ಕಾಗಿ ನಡೆದ ಚುನಾವಣೆಯಲ್ಲಿ ಪಿ.ನಾಗರಾಜ್ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ತಾಲೂಕಿನ 259 ಮತಗಳಲ್ಲಿ 191 ಮತಗಳು ಚಲಾವಣೆಯಾಗಿವೆ. ಒಂದು ಸ್ಥಾನಕ್ಕೆ ಪಿ.ನಾಗರಾಜ ಮತ್ತು ಸಿದ್ಧರಾಧ್ಯ ಕಣದಲ್ಲಿದ್ದರು. ಮಂಗನಹಳ್ಳಿಯ ಪಿ. ನಾಗರಾಜ್ 133 ಮತಗಳನ್ನು ಪಡೆದು ಆಯ್ಕೆಯಾದರೆ, ಪ್ರತಿಸ್ಪರ್ಧಿ ಸಿದ್ಧರಾಧ್ಯ 57 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಸ್. ತಿಮ್ಮೇಗೌಡ ತಿಳಿಸಿದ್ದಾರೆ.
ಸಂಭ್ರಮ: ತಾಲೂಕು ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ಆರ್.ಶ್ರೀಧರ್, ಅಂಬಳಿ ಲೋಕೇಶ್, ಪಿ. ಶಿವರಾಜ, ಕೆ.ಎಚ್.ಎಂ. ಶಶಿಧರ್, ಎಸ್. ಕೊಟ್ರೇಶ್, ಎಸ್. ನಾಗರಾಜ್, ರಾಘವೇಂದ್ರ, ಎಸ್.ಎ. ಬಸವರಾಜ್, ಚಿನ್ನಪ್ಪ, ಮಂಜು, ಮುಂತಾದವರು ಪಿ.ನಾಗರಾಜ್ ಗೆಲುವಿಗೆ ಸಂತಸ ವ್ಯಕ್ತಪಡಿಸಿದರು.
ದೌರ್ಜನ್ಯ ತಡೆಗೆ ಕ್ರಮ
ಬಳ್ಳಾರಿ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಮಹಿಳೆಯರು ನಿರ್ಭಯವಾಗಿ ಬದುಕುವ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ ಎಂದು ಹೊಸಪೇಟೆ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್.ಎಂ. ಹೊನ್ನೂರ್ ತಿಳಿಸಿದರು. ಹೊಸಪೇಟೆಯ ಮುಖ್ಯರಸ್ತೆಯಲ್ಲಿರುವ ವಡಕರಾಯನ ದೇವಸ್ಥಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಬಳ್ಳಾರಿಯ ಪ್ರತಿಭಾ ಮಹಿಳಾ ಮಂಡಳಿ ಆಶ್ರಯದಲ್ಲಿ ಪ್ರಾರಂಭಿಸಲಾಗಿರುವ ಕೌಟುಂಬಿಕ ಸಲಹಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಹೊಸಪೇಟೆಯಲ್ಲಿ ಕೌಟುಂಬಿಕ ಸಲಹಾ ಕೇಂದ್ರ ತೆರೆದಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಶಿಶು ಅಭಿವೃದ್ಧಿ ಯೊಜನಾಧಿಕಾರಿ ಕಚೇರಿಯ ಸೂಪರ್ವೈಜರ್ ಸುನೀತಾ, ಪ್ರತಿಭಾ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜಾತಾ ರವಿಚಂದ್ರ, ಧೀರೇಂದ್ರ ಸ್ವಾಮಿ ಇದ್ದರು.
ನದಿ ತೀರದ ಜನರಿಗೆ ಎಚ್ಚರಿಕೆ
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ಒಳಹರಿವಿದ್ದು, 1 ಲಕ್ಷ ಕ್ಯುಸೆಕ್ಗೂ ಹೆಚ್ಚಿನ ಪ್ರಮಾಣದ ನೀರನ್ನು ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ಬಿಡುವ ಸಾಧ್ಯತೆ ಇದೆ. ಆದ್ದರಿಂದ ತುಂಗಭದ್ರಾ ನದಿ ತೀರದ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 1632.61 ಅಡಿಗಳಾಗಿದ್ದು, ಗರಿಷ್ಠ ಮಟ್ಟ 1633 ಅಡಿ ಇದೆ. ತುಂಗಭದ್ರಾ ನದಿ ವ್ಯಾಪ್ತಿಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳ ಹರಿವು 81864 ಕ್ಯುಸೆಕ್ ಇದೆ. ಜಲಾಶಯದ 28 ಕ್ರಸ್ಟ್ ಗೇಟ್ಗಳಿಂದ 86456 ಕ್ಯುಸೆಕ್ ನೀರು ಹೊರಬಿಡಲಾಗಿದೆ. ನೀರಿನ ಒಳ ಹರಿವು ಹೆಚ್ಚಳವಾದಲ್ಲಿ, 1 ಲಕ್ಷ ಕ್ಯುಸೆಕ್ಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಜಲಾಶಯದಿಂದ ನದಿಗೆ ಹರಿಬಿಡಲಾಗುವುದು. ಆದ್ದರಿಂದ ನದಿ ತೀರದ ವ್ಯಾಪ್ತಿಯ ಜನರು-ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತುಂಗಭದ್ರಾ ಜಲಾಶಯ ವಿಭಾಗದ ಉಪವಿಭಾಗೀಯ ಕಚೇರಿ ಪ್ರಕಟಣೆ ತಿಳಿಸಿದೆ.
ಕುರುಬ ಸಮಾಜದಿಂದ ಎಂ.ಪಿ. ರವೀಂದ್ರಗೆ ಸನ್ಮಾನ
ಹೂವಿನಹಡಗಲಿ: ತಾಲೂಕು ಕುರುಬರ ಸಂಘದಿಂದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಹರಪನಹಳ್ಳಿ ಕ್ಷೇತ್ರದ ಶಾಸಕ ಎಂ.ಪಿ. ರವೀಂದ್ರರನ್ನು ಸನ್ಮಾನಿಸಲಾಯಿತು. ಇತ್ತೀಚಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕರು ಭಾಗವಹಿಸದ ಹಿನ್ನೆಲೆಯಲ್ಲಿ ಸಮಾಜದ ಮುಖಂಡರು ಶಾಸಕರ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು. ನಗರದಲ್ಲಿ ಕನಕನ ಭವನ ನಿರ್ಮಾಣಕ್ಕೆ ಶಾಸಕ ಎಂ.ಪಿ. ರವೀಂದ್ರ ಕಾರಣಿಭೂತರಾಗಿದ್ದು, ಅವರು ಸ್ವಂತ ಹಣದಲ್ಲಿ ನಿವೇಶನ ಖರೀದಿಸಿ ಕೊಟ್ಟಿದ್ದರಿಂದ ಮತ್ತು ಅಂದಿನ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರು ಅನುದಾನ ನೀಡಿದ್ದರಿಂದ ಕನಕ ಭವನಕ್ಕೆ ಚಾಲನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಸಮಾಜದ ವತಿಯಿಂದ ಅವರನ್ನು ಸನ್ಮಾನಿಸಿರುವುದಾಗಿ ಕುರುಬ ಸಮಾಜದ ಮುಖಂಡ ಬಿ.ಹನುಮಂತಪ್ಪ ತಿಳಿಸಿದರು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೊಸ್ಕೇರಿ ಬೀರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪರಮೇಶ್ವರಪ್ಪ, ಪುರಸಭೆ ಸದಸ್ಯ ಕರಿಯಪ್ಪ, ಸೆರೆಗಾರ ಸುರೇಶ, ವೆಂಕಟೇಶ್, ಪ್ರಕಾಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

