ಬಳ್ಳಾರಿ

ಕರಗುತ್ತಿದೆ ಕಲ್ಯಾಣಿ ಚಾಲುಕ್ಯರ ಕಲೆ

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 24
ಐತಿಹಾಸಿಕ ಪರಂಪರೆ, ಹಿನ್ನೆಲೆ ಇರುವ ಪಟ್ಟಣದ ಸುಂದರ ಕಲಾಕೃತಿಯ ಕಲ್ಲೇಶ್ವರ ದೇವಸ್ಥಾನ ಪ್ರವಾಸಿಗರನ್ನು ಹಿಂದೆ ಕೈ ಬೀಸಿ ಕರೆಯುತ್ತಿತ್ತು. ಆದರೆ ಈಗ  ಮಳೆ, ಗಾಳಿ ಹೊಡೆತಕ್ಕೆ ಸಿಕ್ಕು ಕಲ್ಯಾಣಿ ಚಾಲುಕ್ಯರ ಶಿಲ್ಪಕಲೆ ಕರಗಿ ಹೋಗುತ್ತಿದೆ.
ಕಲ್ಲೇಶ್ವರ ದೇವಸ್ಥಾನ ಒಳ ಮತ್ತು ಹೊರಗೆ ಸುಂದರ ಶಿಲ್ಪ ಕಲಾಕೃತಿಗಳನ್ನು ಹೊಂದಿದೆ. ಗರ್ಭಗುಡಿಯಲ್ಲಿ ಈಶ್ವರ ಲಿಂಗದ ಜತೆಗೆ ನಂದಿ ವಿಗ್ರಹ ಪೂಜ್ಯನೀಯ. ಆದರೆ ಕೆತ್ತನೆಯಾಗಿರುವ ಸುಂದರ ಕಲಾಕೃತಿಗಳು ಮಳೆ ನೀರಿಗೆ ನೆನೆದು ಕಲ್ಲುಗಳು ಕ್ರಮೇಣ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ವಿನಾಶದಂಚಿಗೆ ಹೋಗಿರುವ ದೇವಸ್ಥಾನದ ಪುನರ್ ನಿರ್ಮಾಣ ಕುರಿತು ರಾಷ್ಟ್ರೀಯ ಸ್ಮಾರಕ ಪುರಾತತ್ವ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ. ಈ ದೇವಸ್ಥಾನದ ಗೋಪುರ ನಾನಾ ಬಗೆಯ ವಿಶೇಷ, ವಿಸ್ಮಯ ಕಲಾಕೃತಿಗಳನ್ನು ಹೊಂದಿದೆ. ಆದರೆ ಮಳೆಗಾಲದಲ್ಲಿ ಮೇಲ್ಛಾವಣಿ ಸೋರುತ್ತಿರುವ ಕಾರಣ ಶಿಲ್ಪಕಲೆಗಳು ತನ್ನ ನೈಜ ಸೌಂದರ್ಯ ಕಳೆದುಕೊಳ್ಳುತ್ತಿವೆ.
ಬುನಾದಿ ಕಲ್ಲಿನಲ್ಲಿ ಕಲಾಕೃತಿ: ದೇವಸ್ಥಾನದ ಸುತ್ತಮುತ್ತ ನಿರ್ಮಾಣವಾಗಿರುವ ಮನೆಗಳ ಬುನಾದಿ ಅಡಿ ಶಿಲ್ಪಕಲೆಗಳು ಹೂತುಹೋಗಿವೆ. ಅವುಗಳನ್ನು ಸಂರಕ್ಷಣೆ ಮಾಡಬೇಕಾದ ಪುರಾತತ್ವ ಇಲಾಖೆ ನಿರ್ಲಕ್ಷ್ಯದಿಂದ ಸುಂದರ ಕಲಾಕೃತಿಗಳು ಮಣ್ಣಿನಲ್ಲಿ ಲೀನವಾಗಿ ಸೌಂದರ್ಯ ಕಳೆದುಕೊಳ್ಳುತ್ತಿವೆ. ದೇವಸ್ಥಾನದ ಪಕ್ಕದ ಕೆಲ ಮನೆಗಳ ಬುನಾದಿಗೆ ಈ ಐತಿಹಾಸಿಕ ಶಿಲ್ಪಕಲೆಗಳೇ ಕಲ್ಲುಗಳಾಗಿವೆ. ಹೂವಿನಹಡಗಲಿ ಇತಿಹಾಸದ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅನೇಕ ಕಡೆಗಳಲ್ಲಿ ಕಲ್ಯಾಣಿ ಚಾಲುಕ್ಯರ ಕುರಿತು ಬೆಳಕು ಚೆಲ್ಲಿತ್ತಾ ಕಲ್ಲೇಶ್ವರ ದೇವಸ್ಥಾನದ ಕಾಳಜಿವಹಿಸಿದ್ದು ಇತಿಹಾಸ.
ನಿಯಮವಿದ್ದರೂ: 2010ರಲ್ಲಿ ಕೇಂದ್ರ ಸರ್ಕಾರ ಪ್ರಾಚೀನ ಸ್ಮಾರಕ ಮತ್ತು ಪುರಾತತ್ವೀಯ ಸ್ಥಳ ಮತ್ತು ಅವಶೇಷಗಳ ಅಧಿನಿಯಮ ಹೊರಡಿಸಿ 100 ಮೀ. ನಿಷೇಧಿತ ಪ್ರದೇಶ, 200 ಮೀ. ನಿಯಂತ್ರಿತ ಪ್ರದೇಶದಲ್ಲಿ ಯಾವುದೇ ಖಾಸಗಿ ಕಟ್ಟಡಗಳನ್ನು ನಿರ್ಮಾಣ ಮಾಡದಂತೆ ಅಧಿನಿಯಮ ಹೊರಡಿಸಿದೆ. ಈ ಕುರಿತು ಸ್ಮಾರಕಗಳಿರುವ ಕಡೆಗಳಲ್ಲಿ ಜಾಗೃತಿ ಮೂಡಿಸುವ ನಾಮಫಲಕ ಹಾಕಿದ್ದು, ಕರಪತ್ರಗಳನ್ನು ಹಾಕಲಾಗಿದೆ. ಆದರೆ ನಿಯಮ ಮಾತ್ರ ಸರಿಯಾಗಿ ಪಾಲನೆಯಾಗುತ್ತಿಲ್ಲ.
ಕಲ್ಲೇಶ್ವರ ದೇವಸ್ಥಾನವನ್ನೇ ಒಳಗೆ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಈ ಕುರಿತು ಪುರಾತತ್ವ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿ ದೇವಸ್ಥಾನದ ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂಬುದು ಇತಿಹಾಸ ಪ್ರಜ್ಞೆಯುಳ್ಳ ಯುವಕರ ದೂರು.
ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡುವುದಕ್ಕೆ ಕೈ ಹಾಕಿರುವ ಪುರಾತತ್ವ ಇಲಾಖೆಗೆ ತೀರಾ ಅವನತಿಯತ್ತ ಸಾಗಿರುವ ಕಲ್ಲೇಶ್ವರ ದೇವಸ್ಥಾನದ ಅಭಿವೃದ್ಧಿ ಮಾಡುವಲ್ಲಿ ಹಿಂದೇಟು ಹಾಕುತ್ತಿದೆ. ಇದೇನಾ ಸ್ಮಾರಕಗಳ ಸಂರಕ್ಷಣೆ ಮಾಡುವುದು ಎಂದು ಎಲ್ಲರೂ ಪ್ರಶ್ನಿಸುವಂತಾಗಿದೆ. ಇನ್ನು ಮುಂದಿನ ದಿನಗಳಲ್ಲಾದರೂ ಕಲ್ಲೇಶ್ವರ ದೇವಸ್ಥಾನದತ್ತ ಗಮನಹರಿಸಿ ಅಭಿವೃದ್ಧಿ ಮಾಡುವರೇ ಎಂಬುದನ್ನು ಕಾಯ್ದು ನೋಡಬೇಕು.

ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.