ಬಳ್ಳಾರಿ

ಗಡಿಯಾರ ಗೋಪುರ ಧ್ವಂಸ: ಆರೋಪಿಗಳೆಲ್ಲಿ?

Published On :

 ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 27

ಬಳ್ಳಾರಿ ಎಂದಾಕ್ಷಣ ಜನರಿಗೆ ಕಣ್ಮುಂದೆ ನಿಲ್ಲುವುದು ಬಳ್ಳಾರಿ ಕೋಟೆ, ಬಳ್ಳಾರಿ ಹೃದಯ ಭಾಗದಲ್ಲಿದ್ದ ಗಡಿಯಾರ ಗೋಪುರ. ಇಂತಹ ಗೋಪುರವನ್ನು ರಾತ್ರೋ ರಾತ್ರಿ ಧ್ವಂಸ ಮಾಡಿರುವ ಬಗ್ಗೆ ಮುದ್ರಣ, ದೃಶ್ಯ ಮಾಧ್ಯಮಗಳು ಸುದ್ದಿ ಮಾಡಿದರೂ, ಇಡೀ ಬಳ್ಳಾರಿ ಜಿಲ್ಲೆ ಏಕೆ ರಾಜ್ಯದಲ್ಲಿಯೇ ಗಡಿಯಾರ ಗೋಪುರ ರಾತ್ರೋ ರಾತ್ರಿ ಕಣ್ಮರೆಯಾಗಿ ಚರ್ಚೆಗೆ ಗ್ರಾಸವಾಗಿದ್ದರೂ ಆರೋಪಿಗಳು ಮಾತ್ರ ಪತ್ತೆಯಾಗಲಿಲ್ಲ.
ಬಳ್ಳಾರಿಯ ಹೃದಯದ ಭಾಗದ ಗಡಿಗಿ ಚನ್ನಪ್ಪ ವೃತ್ತದಲ್ಲಿದ್ದ ಗಡಿಯಾರ ಗೋಪುರವನ್ನು ಜು. 21, 2008ರಲ್ಲಿ ರಾತ್ರೋ ರಾತ್ರಿ ನೆಲಸಮಗೊಳಿಸಿದರೂ, ಈ ವರೆಗೆ ಅದರ ಆರೋಪಿಗಳು ಪತ್ತೆಯಾಗಿಲ್ಲ. ಇನ್ನು ಮಹಾನಗರ ಪಾಲಿಕೆ ಎದುರಿಗೇ ಗೋಪುರ ಇತ್ತು. ನಗರದ ಅತ್ಯಂತ ಪ್ರಮುಖ ವೃತ್ತವೇ ಇದಾಗಿದ್ದು, ದುಷ್ಕರ್ಮಿಗಳು ಗೋಪುರವನ್ನು ಧ್ವಂಸಗೊಳಿಸಿದ್ದಾರೆ ಎಂದು ಪಾಲಿಕೆಯವರು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಅಂದಿನ ನಗರ ಡಿವೈಎಸ್ಪಿ ತನಿಖೆ ನಡೆಸಿ 2010ರಲ್ಲಿ ಗೋಪುರ ಧ್ವಂಸಗೊಳಿಸಿದ ಆರೋಪಿಗಳು ಪತ್ತೆಯಾಗಿಲ್ಲ ಎಂದು ಕೋರ್ಟ್‌ಗೆ ವರದಿ ನೀಡಿದ್ದಾರೆ. ಆ ಮೂಲಕ ಇಡೀ ಪ್ರಕರಣವೇ ಮುಚ್ಚಿ ಹೋಗಿದೆ.
ಪೊಲೀಸ್ ಇಲಾಖೆಗೆ ಆರೋಪಿ ಪತ್ತೆ ಅಸಾಧ್ಯವಾಯಿತೇ?: ಒಂದು ಮನೆ ಅಥವಾ ಬ್ಯಾಂಕ್‌ಗಳಲ್ಲಿ ಕಳ್ಳತನವಾದಾಗ, ಕೊಲೆಯಾದ ಸ್ಥಳದಲ್ಲಿ ಸಿಗುವ ಅತ್ಯಂತ ಸೂಕ್ಷ್ಮ ಕುರುಹುಗಳ ಬೆನ್ನತ್ತಿ ಆರೋಪಿಗಳನ್ನು ಪತ್ತೆ ಹಚ್ಚುವ ಪೊಲೀಸ್ ಇಲಾಖೆಗೆ ಬಳ್ಳಾರಿ ನಗರದ ಹೃದಯ ಭಾಗದಲ್ಲಿ ರಾಜಾರೋಷವಾಗಿ ಏಳು ದಶಕಗಳು ಹಳೆಯದಾದ ಗೋಪುರ ಧ್ವಂಸ ಮಾಡಿದ ಆರೋಪಿಗಳು ಸಿಗದಿರುವುದು ಜನತೆಯಲ್ಲಿ ಅನುಮಾನ ಮೂಡಿಸಿದೆ. ಅಂದಿನ ಡಿಎಸ್ಪಿಯೇ ತನಿಖೆ ನಡೆಸಿ, ಆರೋಪಿಗಳು ಪತ್ತೆಯಾಗಿಲ್ಲ ಎಂದು ಹೇಳಿ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದು ಮಾತ್ರ ವಿಪರ್ಯಾಸ.
ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಪ್ರತಿಧ್ವನಿಸಿದರೂ: ಅಂದಿನ ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅವರು ವಿಧಾನಪರಿಷತ್‌ನಲ್ಲಿ ಈ ಕುರಿತು ಧ್ವನಿ ಎತ್ತಿ, ಜಿಲ್ಲಾಡಳಿತ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅದೇ ಸ್ಥಳದಲ್ಲಿ ಗೋಪುರ ನಿರ್ಮಿಸುವುದಾಗಿ ಹೇಳಿ, ಸಮಸ್ಯೆಗೆ ಮುಕ್ತಾಯ ಹಾಡಲು ಮುಂದಾದರು. ಗೋಪುರವನ್ನು ಅಲ್ಲೇ ನಿರ್ಮಿಸಬೇಕು ಎಂದು ಪ್ರತಿಪಕ್ಷದ ನಾಯಕ ವೀರಣ್ಣ ಮತ್ತಿಕಟ್ಟಿ, ವಿ.ಎಸ್. ಉಗ್ರಪ್ಪ, ವಿ.ಆರ್. ಸುದರ್ಶನ್ ಪಟ್ಟು ಹಿಡಿದಿದ್ದರು, ಅಂದು ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದ್ದರು. ವಿಧಾನಪರಿಷತ್ತಿನಲ್ಲಿ ಕೊಂಡಯ್ಯ ಅವರು, ಗಡಿಗಿ ಚನ್ನಪ್ಪ ವೃತ್ತದಲ್ಲಿದ್ದ 40 ಅಡಿ ಎತ್ತರದ ಗೋಪುರವನ್ನು ರಾತ್ರೋ ರಾತ್ರಿ ಧ್ವಂಸಗೊಳಿಸಲಾಗಿದೆ, ಇದಕ್ಕೆ ಯಾರು ಕಾರಣ ಎಂಬುದು ಬಹಿರಂಗಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದರು. ಅದಕ್ಕೆ ವಿ.ಎಸ್. ಆಚಾರ್ಯ ಉತ್ತರಿಸಿ, ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ, ಪಾಲಿಕೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ, ಪೊಲೀಸರ ಮೂಲಕ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಪ್ರಕರಣ ವಿಧಾನಸಭೆಯಲ್ಲೂ ಪ್ರತಿನಿಧ್ವನಿಸಿದರೂ, ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಇನ್ನು ಪೊಲೀಸರು ತಾನೇ ಏನು ಮಾಡಿಯಾರೂ?
40 ಅಡಿ ಗೋಪುರದ ಇತಿಹಾಸ: ಕರ್ನಾಟಕ ಏಕೀಕರಣ ಹಾಗೂ ಸ್ವಾತಂತ್ರ್ಯ ಚಳವಳಿಗೆ ಬಹುದೊಡ್ಡ ಕೊಡುಗೆ ನೀಡಿದ ಗಡಿಗಿ ಚನ್ನಪ್ಪನವರು 1956ರ ಆ. 6ರಂದು ಮೃತಪಟ್ಟ ಬಳಿಕ ಅವರ ಸ್ಮರಣಾರ್ಥ ಗಡಿಗಿ ಚೆನ್ನಪ್ಪ ವೃತ್ತದಲ್ಲಿ 40 ಅಡಿ ಎತ್ತರದ ಗಡಿಯಾರ ಗೋಪುರವನ್ನು 1964ರಲ್ಲಿ ನಿರ್ಮಾಣ ಮಾಡಲಾಯಿತು.  ಅಂದಿನ ಕರ್ನಾಟಕದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ಆಂಧ್ರಪ್ರದೇಶದ ಮುಖ್ಯಮಂತ್ರಿ ನೀಲಂ ಸಂಜೀವರೆಡ್ಡಿ ಗೋಪುರ ಉದ್ಘಾಟಿಸಿದ್ದರು. ಸಾರ್ವಜನಿಕರು ಸಮಯ ನೋಡಿಕೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಗೋಪುರದ ಮೇಲೆ ಗಡಿಯಾರ ಹಾಕಲಾಗಿತ್ತು.
ಇದೀಗ ಧ್ವಂಸಗೊಂಡ ಗಡಿಯಾರದ ಗೋಪುರ ಪುನರ್ ನಿರ್ಮಾಣಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ಮುಂದಾಗಿರುವುದು ಸ್ವಗತಾರ್ಹ. ಆದರೆ ಗೋಪುರ ಧ್ವಂಸಕ್ಕೆ ಕಾರಣ ಹಾಗೂ ಆರೋಪಿಗಳ ಪತ್ತೆ ಮುಖ್ಯ ಎನ್ನುವುದು ಮರೆಯುವಂತಿಲ್ಲ.
ಗಡಿಯಾರದ ಗೋಪುರ ನಿರ್ಮಾಣಕ್ಕೆ ಚಾಲನೆ
ಬಳ್ಳಾರಿ: ನಗರ ಗಡಿಗಿ ಚನ್ನಪ್ಪ ವೃತ್ತದಲ್ಲಿ ಗಡಿಯಾರ ಗೋಪುರ ಪುನರ್ ನಿರ್ಮಾಣಕ್ಕೆ ಸರ್ಕಾರದ ಆದೇಶದ ಮೇರೆಗೆ ಜಿಲ್ಲಾಡಳಿತ ಮುಂದಾಗಿದೆ. ಶುಕ್ರವಾರ ರಾತ್ರಿ ಗೋಪುರ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಗಡಿಯಾರದ ಗೋಪುರವನ್ನು ಪುನರ್ ನಿರ್ಮಿಸಬೇಕೆಂದು ಒತ್ತಡ ಇರುವ ಹಿನ್ನಲೆಯಲ್ಲಿ ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಡಳಿತವು ಇದೀಗ ಗೋಪುರವನ್ನು ಯಥಾವತ್ತಾಗಿ ನಿರ್ಮಿಸಲು ಮುಂದಾಗಿದೆ. ಗೋಪುರ ನಿರ್ಮಾಣಕ್ಕೆ ರು. 5 ಲಕ್ಷಗಳನ್ನು ಮಹಾನಗರ ಪಾಲಿಕೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುನರ್ ನಿರ್ಮಾಣದ ಸ್ಥಳಕ್ಕೆ ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರು ಭೇಟಿ ನೀಡಿದ್ದರು. ಶುಕ್ರವಾರ ಸಂಜೆ ಎಸ್ಪಿ ಡಾ. ಚೇತನ್‌ಸಿಂಗ್ ರಾಥೋಡ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.