ಬಳ್ಳಾರಿ

ಡ್ಯಾಂ ಹೂಳು: 6 ತಿಂಗಳೊಳಗೆ ಸರ್ಕಾರಕ್ಕೆ ವರದಿ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜು. 27
ತುಂಗಭದ್ರಾ ಜಲಾಶಯದಲ್ಲಿರುವ ಸುಮಾರು 30 ಟಿಎಂಸಿ ಹೂಳನ್ನು ಹೊರ ತೆಗೆಯವುದು ಮತ್ತು ಸಮಾನಾಂತರ ಜಲಾಶಯ ನಿರ್ಮಿಸುವ ಬಗ್ಗೆ ತಜ್ಞರ ಸಮಿತಿ ರಚಿಸಿದ್ದು, ತಜ್ಞರ ಸಮಿತಿ 6 ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಸಮಿತಿ ನೀಡುವ ವರದಿಯ ಶಿಫಾರಸಿನಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಅವರು ಶನಿವಾರ ಟಿಬಿ ಡ್ಯಾಂನಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನದಿಗೆ ಬಾಗಿನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ಕೆಲವರು ಜಲಾಶಯದಲ್ಲಿರುವ ಅಪಾರ ಪ್ರಮಾಣದ ಅದಿರು ಮತ್ತು ಉಸುಕಿನ ಮೇಲೆ ಕಣ್ಣಿಟ್ಟು ಹೂಳು ತೆಗೆಸುವ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಈಗ ಹೂಳು ತೆಗೆಯುವುದು ಮತ್ತು ಸಮಾನಾಂತರ ಜಲಾಶಯ ನಿರ್ಮಿಸುವ ಬಗ್ಗೆ ತಜ್ಞರ ಸಮಿತಿ ರಚಿಸಲು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಲಾಶಯದ ಹೂಳು ತೆಗೆಸುವ ಹಾಗೂ ಸಮಾನಾಂತರ ಜಲಾಶಯ ನಿರ್ಮಿಸುವ ಕುರಿತು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ. ಈಗಾಗಲೇ ಜಲಾಶಯದಿಂದ ಅಕ್ರಮವಾಗಿ ನೀರು ತೆಗೆದುಕೊಳ್ಳುವವರ ಬಗ್ಗೆ ನೀರಾವರಿ ಸಲಹಾ ಸಮಿತಿಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ನೀರಾವರಿಗೆ ರು. 50 ಸಾವಿರ ಕೋಟಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಉತ್ತಮ ಮಳೆಯಾಗಿ ಜಲಾಶಯಗಳೆಲ್ಲ ಭರ್ತಿಯಾಗಿವೆ. ನಾಡಿನ ರೈತರ ಬದುಕಿನಲ್ಲಿ ಆಶಾಭಾವನೆ ಮೂಡಿದೆ. ನೆಮ್ಮದಿಯ ಜೀವನ ಸಾಗಿಸುವ ಧೈರ್ಯವನ್ನು ರೈತರು ಹೊಂದಿದ್ದಾರೆ. ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿದಂತೆ ನೀರಾವರಿಗೆ ರು. 50 ಸಾವಿರ ಕೋಟಿಗಳನ್ನು ಘೋಷಣೆ ಮಾಡಿತ್ತು. ಅದರಂತೆ ಪ್ರತಿವರ್ಷ ರು. 10 ಸಾವಿರ ಕೋಟಿ ನೀರಾವರಿಗೆ ಖರ್ಚು ಮಾಡುತ್ತದೆ ಎಂದರು.
ಕಾಲುವೆ ಆಧುನೀಕರಣಕ್ಕೆ ರು. 312 ಕೋಟಿ: ಅಪೂರ್ಣಗೊಂಡಿರುವ ಏತನೀರಾವರಿ ಯೋಜನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ ಸಿಂಗಟಾಲೂರು, ವೈ. ಕಗ್ಗಲ್ ಏತನೀರಾವರಿ, ಹಗರಿಬೊಮ್ಮನಹಳ್ಳಿ ಸೇರಿದಂತೆ 13 ಏತನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಹಗರಿಬೊಮ್ಮನಹಳ್ಳಿಯ ಸರ್ವತೋಮುಖ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಮಾಲ್ವಿ ಜಲಾಶಯಕ್ಕೆ 2 ಟಿಎಂಸಿ ನೀರನ್ನು ಬಿಡಲು ನಿರ್ಧರಿಸಲಾಗಿದೆ. ರು. 312 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಕಾಲುವೆಗಳನ್ನು ಆಧುನೀಕರಣಗೊಳಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ. ಮಳೆಗಾಲ ಮುಗಿದ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ವಿವರಿಸಿದರು.
371ಕ್ಕೆ ಹರಪ್ಪನಹಳ್ಳಿ ಸೇರ್ಪಡೆ: ಬಳ್ಳಾರಿ ನಗರದಲ್ಲಿ ನಿರ್ಮಿಸುತ್ತಿರುವ ಗಡಿಗಿ ಚನ್ನಪ್ಪ ವೃತ್ತದಲ್ಲಿ ಗಡಿಯಾರ ಗೋಪುರವನ್ನು ಆಗಸ್ಟ್ 15ಕ್ಕೆ ಲೋಕಾರ್ಪಣೆ ಮಾಡಲಾಗುವದು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನೇಮಕ ಮತ್ತು ಕಾಮಗಾರಿಗಳ ಲೋಪದ ಬಗ್ಗೆ ಸದನದಲ್ಲಿ ಉನ್ನತ ಶಿಕ್ಷಣ ಸಚಿವರ ಗಮನ ಸೆಳೆದು ಸಮಸ್ಯೆ ಪರಿಹರಿಸಲಾಗುವುದು. ಸಂವಿಧಾನದ 371 (ಜೆ) ಕಲಂ ವ್ಯಾಪ್ತಿಗೆ ಪಕ್ಕದ ಹರಪ್ಪನಹಳ್ಳಿ ತಾಲೂಕನ್ನು ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಬಳ್ಳಾರಿ ಜಿಪಂ ಅಧ್ಯಕ್ಷೆ ಜಿ. ಸುಮಂಗಲಮ್ಮ ಗುಬಾಜಿ, ಉಪಾಧ್ಯಕ್ಷೆ ಮಮತಾ ಸುರೇಶ್, ಸ್ಥಳೀಯ ಕಾಂಗ್ರೆಸ್ ಮುಖಂಡ ಜಿ.ಕೆ. ಹನುಮಂತಪ್ಪ, ಗುಜ್ಜಲ್ ನಾಗರಾಜ್, ಎಲ್. ಸಿದ್ದನಗೌಡ, ಅಯ್ಯಾಳಿ ತಿಮ್ಮಪ್ಪ, ಕೆ.ಎಂ. ಹಾಲಪ್ಪ, ಬಿ.ಕಾಂ. ಮಾಬುಸಾಬ್, ಫಹೀಂಬಾಷಾ, ಭಾಗ್ಯಲಕ್ಷ್ಮಿ ಬರಾಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಾರಿಹಳ್ಳಿ ಶಿವಮೂರ್ತಿ, ಡಿ. ವೆಂಕಟರಮಣ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ತುಂಗಭದ್ರಾ ಜಲಾಶಯಕ್ಕೆ ಬಾಗಿನ
ಮುನಿರಾಬಾದ್:  ತುಂಬಿದ ತುಂಗಭದ್ರಾ ಜಲಾಶಯಕ್ಕೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಹಾಗೂ ಶಿವರಾಜ ತಂಗಡಗಿ ಜಂಟಿಯಾಗಿ ಗಂಗಾ ಪೂಜೆ ನೆರವೇರಿಸಿ ಜಲಾಶಯಕ್ಕ ಬಾಗಿನ ಅರ್ಪಿಸಿದರು.
ನೂತನ ಪರಂಪರೆಗೆ ನಾಂದಿ: ಹಿಂದೆ ಜಲಾಶಯ ಭರ್ತಿಯಾದಾಗ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಉಸ್ತುವಾರಿ ಸಚಿವರು ಪ್ರತ್ಯೇಕವಾಗಿ ಗಂಗಾ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಜಲಾಶಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎರಡೂ ಜಿಲ್ಲೆಯ ಉಸ್ತುವಾರಿ ಸಚಿವರು ಒಟ್ಟಾಗಿ ಬಾಗಿನ ಅರ್ಪಿಸುವ ಮೂಲಕ ನೂತನ ಪರಂಪರೆಗೆ ನಾಂದಿ ಹಾಕಿದರು.
ಶಿವರಾಜನಿಗೆ ಕಾದ ಪರಮೇಶ್ವರ:  ಜಲಾಶಯಕ್ಕೆ ಬಾಗಿನ ಬೆಳಗ್ಗೆ 10.45ಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಸಮಯಕ್ಕೆ ಸರಿಯಾಗಿ ಬಂದರು. ಆದರೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ 11ಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಜೊತೆಗೆ ಆಗಮಿಸಿದರು. ಬಳಿಕ ಇಬ್ಬರು ಸಚಿವರೂ ಪೂಜೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ. ಜನಾರ್ದನ್, ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಮಲ್ಲಿಕಾರ್ಜುನ್, ಅಧೀಕ್ಷಕ ಅಭಿಯಂತರ ಮಂಜಪ್ಪ, ಕಾರ್ಯಪಾಲಕ ಅಭಿಯಂತರ ಲಕ್ಷಮಪ್ಪ, ಮರ್ದಾನಪ್ಪ, ಭರಮಪ್ಪ ಬೆಲ್ಲದ್, ಯಂಪಕ್ಕೆ, ಶರಣಪ್ಪ ಹಾಗೂ ಗೌಸ್ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.