ಮಾದರಿ ಶಾಲೆಗೆ ಕೂಡಿಬಂತು ಸ್ವಚ್ಛತೆ ಭಾಗ್ಯ
ಕೂಡ್ಲಿಗಿ: ಪಟ್ಟಣದಲ್ಲಿ ಶತಮಾನದ ಮಾದರಿ ಶಾಲೆ, ಮೇನ್ ಬಾಯ್ಸ್ ಸ್ಕೂಲ್ ಎಂದೇ ಪ್ರಸಿದ್ಧಿ ಪಡೆದ ಶಾಲೆಯಲ್ಲಿ ಸ್ವಚ್ಛತೆ ಕೊರತೆ, ತಿಪ್ಪೆಗುಂಡಿ ಬಿದ್ದಿರುವುದನ್ನು ಕಂಡ ಪಪಂ ಸದಸ್ಯರ ಒತ್ತಾಯದಿಂದಾಗಿ ಸ್ವಚ್ಛತೆ ಕಾಣುವ ಭಾಗ್ಯ ಶಾಲೆಗೆ ಒದಗಿ ಬಂದಿದೆ.
ಪಟ್ಟಣದಲ್ಲಿ ಗಣ್ಯರಾದವರೆಲ್ಲ ಬಹುತೇಕರು ಈ ಶಾಲೆಯಲ್ಲೇ ಓದಿದ್ದಾರೆ. ಶಾಲೆಯ ಇಂದಿನ ದುಸ್ಥಿತಿ ಕಂಡು ಹಳೆಯ ವಿದ್ಯಾರ್ಥಿಗಳು ಸಂಕಟಪಟ್ಟಿದ್ದರು. ಪಟ್ಟಣದ ಮಧ್ಯಭಾಗದಲ್ಲೇ ಇರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಈಗ ತಿಪ್ಪೆಗುಂಡಿಗಿಂತಲೂ ಕಡೆಯಾಗಿತ್ತು. ವಾರ್ಡ್ಗೆ ಸಂಬಂಧಿಸಿದ ಪಪಂ ಸದಸ್ಯ ಎನ್.ಎಂ. ನೂರ್ಆಹ್ಮದ್, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತಿದ್ದರಿಂದ, ಸ್ಥಳೀಯರು ಸ್ವಚ್ಛತೆ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ.
1904ರಲ್ಲಿ ಪ್ರಾರಂಭವಾದ ಈ ಶಾಲೆಯ ಕಾಂಪೌಂಡ್ ಒಡೆದು ಹಾಕಲಾಗಿದೆ. ಶಾಲೆ ಮಕ್ಕಳಿಗೆ ಆಟವಾಡಲು ಜಾಗವಿಲ್ಲದಂತಾಗಿದೆ. ಶಾಲೆ ಎದುರೇ ರಂಗಮಂದಿರ ಇರುವುದರಿಂದ ಅಲ್ಲಿ ಹಂದಿ, ನಾಯಿಗಳು, ಖಾಸಗಿ ವಾಹನಗಳು ಹಾಗೂ ಈ ಭಾಗದಲ್ಲಿ ಶೌಚಾಲಯ ಇಲ್ಲದಿದ್ದರಿಂದ ಶಾಲೆ ಗೋಡೆ, ಶಾಲೆ ಜಾಗವನ್ನೇ ಇಲ್ಲಿನ ಜನತೆ ಶೌಚಾಲಯವನ್ನಾಗಿ ಮಾಡಿಕೊಂಡಿದ್ದರು.
ಸೋಮವಾರ ಬಂತೆಂದರೆ ಶಿಕ್ಷಕರಿಗೆ, ಮಕ್ಕಳಿಗೆ ಶಾಲೆಗೆ ಬರಲು ಹೇಸಿಗೆ ಎನಿಸುತ್ತದೆ. ಶನಿವಾರ ಮಧ್ಯಾಹ್ನ ಹಾಗೂ ಭಾನುವಾರ ರಜೆ ಇರುವುದರಿಂದ ಅಂದು ಶಾಲೆ ಸುತ್ತಲಿನ ಆವರಣ ಕುಡಿತ, ಶೌಚ, ಅನೈತಿಕ ಚಟುವಟಿಕೆಗಳ ತಾಣವಾಗುತ್ತದೆ. ಹೀಗಾಗಿ ಶಾಲೆ ಮುಂದೆ ಎಲ್ಲಿ ಕಾಲಿಟ್ಟರೂ ಮಲ, ಮೂತ್ರದ್ದೇ ಕಾರುಬಾರು. ಈ ಅವ್ಯವಸ್ಥೆ ಕಂಡು ನೂರ್ಆಹ್ಮದ್ ಅಧಿಕಾರಿಗಳನ್ನು ಶನಿವಾರ ಸ್ಥಳಕ್ಕೆ ಕರೆಯಿಸಿ, ಶಾಲೆ ಆವರಣ ಸ್ವಚ್ಛಗೊಳಿಸಬೇಕೆಂದು ಹೋರಾಟ ಮಾಡಿದರು.
ಸಮಸ್ಯೆ ನೀಗಿಸುವ ಭರವಸೆ: ಕೂಡ್ಲಿಗಿ ಡಿವೈಎಸ್ಪಿ ಗಜಕೋಶ್ ಸ್ಥಳಕ್ಕೆ ಆಗಮಿಸಿ ಪಪಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಶಾಲಾ ಆವರಣ ಸ್ವಚ್ಛಗೊಳಿಸಲು ಸೂಚಿಸಿದರು. ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಆವರಣದೊಳಗೆ ಹಂದಿ, ನಾಯಿಗಳು ಬಾರದಂತೆ ರಕ್ಷಣೆ ಕೊಡುವಂತೆ ಪಪಂ ಅಧಿಕಾರಿಗಳಿಗೆ ಸೂಚಿಸಿದರು.
ಪರಿಹಾರ ಧನದ ಚೆಕ್ ವಿತರಣೆ
ಕೊಟ್ಟೂರು: ಹಾವು ಕಚ್ಚಿ ಸಾವನ್ನಪ್ಪಿದ ಇಬ್ಬರು ರೈತ ಕುಟುಂಬದ ಸದಸ್ಯರಿಗೆ ಕೊಟ್ಟೂರು ಎಪಿಎಂಸಿ ವತಿಯಿಂದ ರೈತ ಸಂಜೀವಿನಿ ಯೋಜನೆಯಡಿ ತಲಾ ರು. 50 ಸಾವಿರ ಪರಿಹಾರ ಧನದ ಚೆಕ್ನ್ನು ಎಪಿಎಂಸಿ ಅಧ್ಯಕ್ಷ ಜೆ.ಸಿ. ಶಶಿಧರ, ಉಪಾಧ್ಯಕ್ಷ ಸಿ. ಕೊಟ್ರೇಶಪ್ಪ ಶನಿವಾರ ವಿತರಿಸಿದರು. ಚಿಕ್ಕಜೋಗಹಳ್ಳಿ ತಾಂಡದ ಆರ್.ಬಿ. ಗಿರೀಶ್ನಾಯ್ಕ, ಉಜ್ಜಿನಿ ಗ್ರಾಮದ ನಾಗರತ್ನಮ್ಮ ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಹಾವು ಕಚ್ಚಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ರೈತ ಕುಟುಂಬದವರಿಗೆ ಪರಿಹಾರ ಧನದ ಚೆಕ್ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯರು, ಕಾರ್ಯದರ್ಶಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

