ಬಳ್ಳಾರಿ

ಕ್ರಿಮಿನಲ್‌ಗಳಾಗುತ್ತಿರುವ ಬುದ್ಧಿವಂತರು, ಅಕ್ಷರಸ್ಥರು

Published On :

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜು. 29
ಮಹಾನ್ ಬುದ್ಧಿವಂತರು, ಶ್ರೇಷ್ಠರು ರಾಷ್ಟ್ರದ ದೊಡ್ಡ ದೊಡ್ಡ ಕ್ರಿಮಿನಲ್‌ಗಳಾಗುತ್ತಿರುವುದು ದುರಂತ. ಅನಕ್ಷರಸ್ಥರಿಗಿಂತ ವಿದ್ಯಾವಂತರಿಂದಲೇ ದೇಶ ದುರಂತದ ಅಂಚಿನತ್ತ ಸಾಗಿದೆ. ದೇಶದ ಉಳಿವಿಗೆ ಈ ಹಿಂದೆ ನಡೆದ ಸ್ವಾತಂತ್ರ್ಯ ಚಳವಳಿಯಂತಹ ಮಹತ್ತರ ಚಳವಳಿಗಳು ನಡೆಯಬೇಕಿದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಸಿದ್ದನಗೌಡ ಪಾಟೀಲ್ ಅಭಿಪ್ರಾಯಿಸಿದರು.
ಅವರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಪಟ್ಟಣದ ಕ್ರಿಯೇಟಿವ್ ಲೇಡೀಸ್ ಅಸೋಸಿಯೇಷನ್ ಏರ್ಪಡಿಸಿದ್ದ 'ಸಮಾಜದಲ್ಲಿ ಇಂದಿನ ಯುವಕರ ಪಾತ್ರ' ಕುರಿತು ಮಾತನಾಡಿ, ಸ್ವಾತಂತ್ರ್ಯದ ಬದಲು ಗುಲಾಮಗಿರಿತನವನ್ನು ಮುಂದಿನ ಪೀಳಿಗೆಗೆ ನಾವೆಲ್ಲರೂ ಕೊಡುಗೆಯಾಗಿ ನೀಡುವತ್ತ ಸಾಗಿದ್ದೇವೆ. ಇದಕ್ಕೆಲ್ಲ ಶಿಕ್ಷಣ ಕಲಿಕೆಯಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಗಳೆ ಕಾರಣ. ದೇಶೀಯ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾವಣೆಗೊಂಡು, ಖಾಸಗೀಕರಣಗೊಳ್ಳುತ್ತಿರುವ ಪ್ರಭಾವದಿಂದಲೇ ಈ ಎಲ್ಲ ತೊಂದರೆಗಳನ್ನು ಎದುರಿಸುವಂತಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾಗದ ಹೊರತು ಸ್ವದೇಶಿ ಶಿಕ್ಷಣಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ವಿದೇಶಿ ವಿವಿ ಆಗಮನ: ಯುವಕರಲ್ಲಿನ ಕ್ರಿಯಾತ್ಮಕ ವಯಸ್ಸು ದುರುಪಯೋಗವಾಗುತ್ತಿದೆ. ಯುವಶಕ್ತಿ ಬೇರೆ ಕಾರಣಕ್ಕಾಗಿ ಉಪಯೋಗವಾಗುತ್ತಿದೆ. ಇದೆಲ್ಲ ನಮಗೆ ಅಂಟಿರುವ ಶಿಕ್ಷಣ ಕಲಿಕೆಯ ವ್ಯವಸ್ಥೆಯ ದುರಂತ. ವಿಶ್ವ ವ್ಯಾಪಾರ ಸಂಘಟನೆ ಕೇವಲ ವ್ಯಾಪಾರದ ಮೂಲಕ ರಾಷ್ಟ್ರದ ಮೇಲೆ ಭಾರ ಬೀಳದೆ ಶಿಕ್ಷಣ ಕ್ಷೇತ್ರದಲ್ಲೂ ಭಾರ ಬೀಳಿಸಲಾರಂಭಿಸಿದೆ. ಮುಂದಿನ ವರ್ಷಗಳಲ್ಲಿ ರಾಷ್ಟ್ರದಲ್ಲಿ ಐದು ವಿದೇಶಿ ವಿಶ್ವವಿದ್ಯಾಲಯಗಳು ನೆಲೆಯೂರಲು ವೇದಿಕೆ ಸಜ್ಜಾಗುತ್ತಿದೆ. ಇದರಿಂದಾಗುವ ಅಪಾಯ ತಡೆಗಟ್ಟಲು ಈಗಲಾದರೂ ಆಡಳಿತ ಎಚ್ಚೆತ್ತುಕೊಳ್ಳಬೇಕು ಎಂದರು.
ಪಿಎಸ್‌ಐ ಗುರುರಾಜ್ ಮೈಲಾರ ಮಾತನಾಡಿ, ಸ್ವಸಾಮರ್ಥ್ಯ ರೂಢಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿ ಬಳಗ ಸದಾ ತೊಡಗಿಸಿಕೊಳ್ಳಬೇಕು. ಬುದ್ಧಿ ವಿಕಸನಕ್ಕೆ ಪೂರಕವಾದ ವಿಷಯಗಳ ಕುರಿತು ಸದಾ ಗಮನಹರಿಸುವುದನ್ನು ಆದ್ಯತೆಯಾಗಿ ಮಾಡಿಕೊಳ್ಳಬೇಕು ಎಂದರು. ಕ್ರಿಯೇಟಿವ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಸುನಂದಾ ಗುರುಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಗೋವಿಂದಪ್ಪ, ಪ್ರಭಾರಿ ಮುಖ್ಯೋಪಾಧ್ಯಾಯ ಸಣ್ಣ ವೀರಯ್ಯ ವೇದಿಕೆಯಲ್ಲಿದ್ದರು. ಅಸೋಷಿಯನ್ ಕಾರ್ಯದರ್ಶಿ ನಿರ್ಮಲಾ ಶಿವನಗುತ್ತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.