ಲೋಕಲ್ ರೈಲಿನಲ್ಲೇ ಮದು ಮಗಳಿಗೆ ಆರತಿ ಎತ್ತಿ 'ಮದುವೆ ಪೂರ್ವ' ಸಂಭ್ರಮಾಚರಣೆ: Video ವೈರಲ್, ನೆಟ್ಟಿಗರ ಆಕ್ರೋಶ!

ಮುಂಬೈ: ಮುಂಬೈ ಲೋಕಲ್ ರೈಲಿನ ಬೋಗಿಯೊಂದರಲ್ಲಿ ಮಹಿಳೆಯರ ಗುಂಪೊಂದು ತಮ್ಮ ಸ್ನೇಹಿತೆಗಾಗಿ ಮದುವೆ ಪೂರ್ವ ಸಂಭ್ರಮಾಚರಣೆ ಮಾಡಿದ್ದಾರೆ. ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣದ ನಡುವೆಯೇ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಆದರೆ, ಸಾರ್ವಜನಿಕ ರೈಲಿನಲ್ಲಿ ಇಂತಹ ಖಾಸಗಿ ಕಾರ್ಯಕ್ರಮಗಳನ್ನು ನಡೆಸಬಹುದೇ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಮುಂಬೈ ಹೆರಿಟೇಜ್' (Mumbai Heritage) ಎಂಬ ಎಕ್ಸ್ (X) ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮಹಿಳೆಯರು ರೈಲಿನ ಬೋಗಿಯ ಒಂದು ಭಾಗವನ್ನು ಹೂವುಗಳು, ಅಲಂಕಾರಿಕ ವಸ್ತುಗಳು ಮತ್ತು ಗೋಡೆಗೆ ಅಂಟಿಸಿದ ಸ್ಟಿಕ್ಕರ್‌ಗಳಿಂದ ಸಿಂಗರಿಸುತ್ತಿರುವುದು ಕಂಡುಬರುತ್ತದೆ.
ಈ ಮಹಿಳೆಯರು ಕಾರ್ಯಕ್ರಮವನ್ನು ಮೊದಲೇ ಯೋಜಿಸಿದಂತೆ ತೋರುತ್ತಿದ್ದು, ತಮ್ಮ ಸ್ನೇಹಿತೆಯನ್ನು ಸ್ವಾಗತಿಸಲು ಸಿದ್ಧರಾಗಿದ್ದಾಗ, ಅವರಲ್ಲೊಬ್ಬರು ಅಲಂಕರಿಸಿದ ತಟ್ಟೆಯನ್ನು (ಥಾಲಿ) ಹಿಡಿದುಕೊಂಡಿದ್ದರು. ಮದುಮಗಳು ಅಲ್ಲಿಗೆ ಆಗಮಿಸಿದಾಗ, ಮಹಿಳೆಯರು ಆಕೆಯ ಮೇಲೆ ಹೂವಿನ ದಳಗಳನ್ನು ಸುರಿದು, ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದರು ಮತ್ತು ಆಕೆಯನ್ನು ಹರಸಿ ಅಪ್ಪಿಕೊಂಡಿದ್ದಾರೆ.
ಸಾಮಾನ್ಯವಾಗಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮನೆಯಲ್ಲಿ ನಡೆಯುವ ಸಾಂಪ್ರದಾಯಿಕ ಮದುವೆ ಪೂರ್ವ ಆಚರಣೆಯನ್ನೇ ಅವರು ಇಲ್ಲಿ ಮರುಸೃಷ್ಟಿಸಿದಂತಿದೆ. ಈ ವಿಡಿಯೋವನ್ನು ಹಂಚಿಕೊಂಡ 'ಮುಂಬೈ ಹೆರಿಟೇಜ್', ಇದೊಂದು ಸಾಂಪ್ರದಾಯಿಕ ಮಹಾರಾಷ್ಟ್ರ ಶೈಲಿಯ ಮದುವೆ ಪೂರ್ವ ಆಚರಣೆಯಾಗಿದ್ದು, ಇದರಲ್ಲಿ ಸಂಬಂಧಿಕರು ಮತ್ತು ಸ್ನೇಹಿತರು ಒಗ್ಗೂಡಿ ವಧು ಅಥವಾ ವರನ ಮೇಲೆ ಪ್ರೀತಿ ಮತ್ತು ಆಶೀರ್ವಾದ ಮಾಡುತ್ತಾರೆ ಎಂದು ವಿವರಿಸಿದೆ.
"ಈ ಬಾರಿ ಮನೆಯಲ್ಲಿ ಅಲ್ಲ, ಬದಲಾಗಿ ಮುಂಬೈ ಲೋಕಲ್ ರೈಲಿನಲ್ಲಿ!" ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ.ವಿಡಿಯೋದಲ್ಲಿ ಮಹಿಳೆಯರು ಸಂಭ್ರಮಿಸುತ್ತಿರುವುದು ಕಂಡುಬಂದರೂ, ಸಾರ್ವಜನಿಕ ರೈಲಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಮದುವೆಗೂ ಮುನ್ನವೇ ತಾಯಿಯಾಗಲು ಬಯಸಿದ್ದೆ, ಅದಕ್ಕೆ ಪೋಷಕರನ್ನೂ ಒಪ್ಪಿಸಿದ್ದೆ, ಆದ್ರೆ...: ನಟಿ ಸ್ವರಾ ಭಾಸ್ಕರ್
ಈ ವಿಡಿಯೋ 'ರೈಲ್ವೆ ಸೇವಾ' (Railway Seva) ಸಂಸ್ಥೆಯ ಗಮನಕ್ಕೆ ಬಂದಿದ್ದು, ಅವರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ಟ್ಯಾಗ್ ಮಾಡುವ ಮೂಲಕ, ಈ ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕ ರೈಲಿನಲ್ಲಿ ಇಂತಹ ಆಚರಣೆಗಳಿಗೆ ಅವಕಾಶ ನೀಡಬಹುದೇ ಎಂದು ಅನೇಕ ಬಳಕೆದಾರರು ಪ್ರಶ್ನಿಸುತ್ತಿರುವ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


