ಬಳ್ಳಾರಿ

ಕನಸಾಗೇ ಉಳಿದ ಸರ್ಕಾರಿ ಪದವಿ ಕಾಲೇಜು

Published On :

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜೂ. 4
ಭವಿಷ್ಯತ್ತಿನ ತಾಲೂಕು ಕೇಂದ್ರ ಎಂದೇ ಹೇಳಲಾಗುವ ಕೊಟ್ಟೂರು ಪಟ್ಟಣ, ಸರ್ಕಾರಿ ಪದವಿ ಕಾಲೇಜು ಹೊಂದುವ ಭಾಗ್ಯವನ್ನೇ ಪಡೆಯದಿರುವುದು ವಿಪರ್ಯಾಸ. 4 ವರ್ಷಗಳ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಆರಂಭವಾಗಬೇಕಿದ್ದ ಮಹಾವಿದ್ಯಾಲಯದ ಪ್ರಸ್ತಾಪ ಇದೀಗ ಸದ್ದಿಲ್ಲದೆ ಹಿಂದೆ ಸರಿದಿದೆ.
ಜಿಲ್ಲೆಯ ಕೊಟ್ಟೂರು, ಹಂಪಿ ಮತ್ತು ಚೋರನೂರುಗಳಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸುವ ಯೋಜನೆ ಇತ್ತು. ಅದರಂತೆ ಪೂರಕ ಮೂಲ ಸೌಲಭ್ಯಗಳ ಪರಿಶೀಲನೆಗೆ 4 ವರ್ಷಗಳ ಹಿಂದೆ ಸರ್ಕಾರ ಏಕ ಸದಸ್ಯ ಸಮಿತಿ ರಚಿಸಿತ್ತು. ಗುಲ್ಬರ್ಗಾದಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಆಯುಕ್ತರು, ಈ ಮೂರು ಸ್ಥಳಗಳಲ್ಲಿ ವಾಸ್ತವ ಪರಿಸ್ಥಿತಿ ಅಧ್ಯಯನಕ್ಕಾಗಿ ಹೊಸಪೇಟೆಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಆಗಿನ ಪ್ರಾಚಾರ್ಯ ಲಕ್ಷ್ಮಿನಾರಾಯಣ ರೆಡ್ಡಿ ಅವರನ್ನು ನೇಮಕ ಮಾಡಿದ್ದರು.
ಪದವಿ ಕಾಲೇಜು ಆರಂಭಿಸಲು ಅಗತ್ಯ ಸ್ಥಳ ಪರಿಶೀಲನೆಗೆಂದು 2009ರ ಫೆಬ್ರವರಿ 12ರಂದು ಲಕ್ಷ್ಮಿನಾರಾಯಣ ರೆಡ್ಡಿ ಅವರು ಕೊಟ್ಟೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕರೆದಿದ್ದ ಸಭೆಗೆ ಆಗಮಿಸಿದ್ದ ಅಂದಿನ ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜ ನಾಯ್ಕ್ ಪದವಿ ಮಹಾವಿದ್ಯಾಲಯ 2009ರ ಶೈಕ್ಷಣಿಕ ವರ್ಷದಲ್ಲಿಯೇ ಪಟ್ಟಣದಲ್ಲಿ ಆರಂಭಗೊಳ್ಳಲು ಅಗತ್ಯವಾದ ಎಲ್ಲ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು.
ತಾತ್ಕಾಲಿಕ ವ್ಯವಸ್ಥೆ: ಸರ್ಕಾರಿ ಪದವಿ ಮಹಾವಿದ್ಯಾಲಯವನ್ನು ತಾತ್ಕಾಲಿಕವಾಗಿ ಪಟ್ಟಣದ ಸಂತೆ ಮಾರ್ಕೆಟ್‌ನಲ್ಲಿರುವ ಸರ್ಕಾರಿ ಗಚ್ಚಿನಮಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಶಾಲೆಯ 8 ಕೊಠಡಿಗಳನ್ನು ಬಳಸಿಕೊಳ್ಳಲು ಸಭೆಯಲ್ಲಿ ಪ್ರಾಚಾರ್ಯ ಲಕ್ಷ್ಮಿನಾರಾಯಣ ಒಪ್ಪಿಗೆ ಸೂಚಿಸಿದ್ದರು. ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲು ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ವಿಶಾಲ ಮೈದಾನದ ಪೈಕಿ 3 ಎಕರೆ ಜಮೀನನ್ನು ದೊರಕಿಸಿ ಕೊಡಲು ಆಗ ಎಲ್ಲ ಸಿದ್ಧತೆ ಕೈಗೊಳ್ಳುವೆ ಎಂಬ ಮಾತನ್ನು ಸಹ ಶಾಸಕರು ಆ ಸಂದರ್ಭದಲ್ಲಿ ಹೇಳಿದ್ದರು.
ಧೂಳು ಹಿಡಿದ ವರದಿ: ಕೊಟ್ಟೂರು ಸುತ್ತಮುತ್ತಲಿನ 15 ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಯಾವುದೇ ಸರ್ಕಾರಿ ಪದವಿ ಕಾಲೇಜುಗಳಿಲ್ಲ. ಇದು ಕೊಟ್ಟೂರಿನಲ್ಲಿ ಕಾಲೇಜು ಆರಂಭಿಸುವುದಕ್ಕೆ ಪ್ರಮುಖ ಮಾನದಂಡ ಎಂದು ಪ್ರಾಚಾರ್ಯ ಲಕ್ಷ್ಮಿನಾರಾಯಣ ರೆಡ್ಡಿ ಹೇಳಿ ಪಟ್ಟಣದಲ್ಲಿನ ಅಗತ್ಯತೆಗಳು, ಮೂಲ ಸೌಕರ್ಯಗಳು ತಾವು ಪರಿಶೀಲಿಸಿದ ವಿಷಯಕ್ಕೆ ಹೆಚ್ಚು ಪೂರಕ ವಿಶ್ವಾಸ ಮೂಡಿಸಿವೆ ಎಂಬ ಮಾತನ್ನು ಹೇಳಿದ್ದರು.
ಪ್ರಾಚಾರ್ಯ ರೆಡ್ಡಿ ಸಮಿತಿ ತನ್ನ ವರದಿ ಸಲ್ಲಿಸಿದ್ದರು. ಆದರೆ ಆ ವರದಿ ಈಗ ಧೂಳು ತಿನ್ನುತ್ತಿದೆ. ಕೊಟ್ಟೂರಿನಲ್ಲಿ ಆರಂಭಿಸಬೇಕಿದ್ದ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಸ್ತಾಪ ಸದ್ದು ಮಾಡದೇ ಸುಮ್ಮನಾಗಿಬಿಟ್ಟಿದೆ. ಅಂದಿನ ಶಾಸಕ ಕೆ. ನೇಮಿರಾಜ ನಾಯ್ಕ್ ಈಗ್ಗೆ 2 ವರ್ಷಗಳ ಹಿಂದೆ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಮುಂದಾಗದೇ ಮೌನವಹಿಸಿದ್ದು ಈ ಪ್ರಸ್ತಾಪ ಮತ್ತಷ್ಟು ಹಿಂದೆ ಸರಿಯಲು ಪ್ರಮುಖ ಕಾರಣವಾಗಿದೆ.
ಇಚ್ಛಾ ಶಕ್ತಿ ಕೊರತೆ: ಕೂಡ್ಲಿಗಿ ಮತ್ತು ಕಂಪ್ಲಿಯ ಆಗಿನ ಶಾಸಕರುಗಳ ಮುತುವರ್ಜಿಯಿಂದ ಅಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ಮಂಜೂರು ಮಾಡಿಸಿಕೊಂಡಿದ್ದರು. ಹೂವಿನಹಡಗಲಿಯಿಂದ ದೂರ ಸರಿದಿದ್ದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಅಲ್ಲಿನ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಇಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸರ್ಕಾರಿ ಪದವಿ ಕಾಲೇಜು ಕೊಟ್ಟೂರಿನಲ್ಲಿ ಆರಂಭಗೊಳ್ಳುವ ಲಕ್ಷಣವೇ ಕಾಣದಾಗಿದೆ.
ಕಾಲೇಜು ಆರಂಭಗೊಳ್ಳದ ಹಿನ್ನೆಲೆಯಲ್ಲಿ ಶಿಕ್ಷಣ ಪ್ರೇಮಿಗಳಲ್ಲಿ ನಿರಾಸೆ ಮೂಡುವಂತೆ ಮಾಡಿದೆ. ನೂತನ ಶಾಸಕ ಎಸ್. ಭೀಮಾನಾಯ್ಕ್ ಅವರಾದರೂ ಕಾಲೇಜು ಆರಂಭಿಸುವ ಪ್ರಸ್ತಾಪಕ್ಕೆ ಮುಂದಾಗಿ ಸರ್ಕಾರದಿಂದ ಮಂಜೂರಾತಿ ದೊರಕಿಸಿಕೊಡಬೇಕೆಂಬುದು ಸ್ಥಳೀಯ ಜನತೆಯ ಒತ್ತಾಸೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.