ಸುದ್ದಿ ಸಂಕ್ಷೇಪ
ಇಂದು ಕ್ಯಾಂಪಸ್ ನೇಮಕಾತಿ
ಬಳ್ಳಾರಿ: ನಗರದ ಬಳ್ಳಾರಿ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಆವರಣದಲ್ಲಿ ಜೂ. 8ರಂದು ಎಂಬಿಎ ಮತ್ತು ಎಂಎಫ್ಎಂ, ಎಂಕಾಂ ಕೋರ್ಸ್ಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ನೇಮಕಾತಿ ನಡೆಯಲಿದೆ. ಎಸ್ ಅಂಡ್ ಪಿಎಸ್ ಕ್ಯಾಪಿಟಲ್ ಐಕ್ಯೂ ಅವರು ನೇಮಕಾತಿ ಮಾಡಿಕೊಳ್ಳಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆರ್.ಕೆ ಶ್ಯಾಮ್ ಮೊ. 9900559315ಗೆ ಸಂಪರ್ಕಿಸುವಂತೆ ಸಂಸ್ಥೆಯ ಉಪನಿರ್ದೇಶಕ ಪೃಥ್ವಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೆಕ್ಕ ತಪಾಸಣೆಗೆ ಸೂಚನೆ
ಬಳ್ಳಾರಿ: ಜಿಲ್ಲೆಯಲ್ಲಿರುವ ವಿವಿಧ ಸಹಕಾರ ಸಂಘಗಳು ನಿಗದಿತ ಅವಧಿಯೊಳಗೆ ಲೆಕ್ಕ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ಎಚ್.ಸಿ. ಬಸವರಾಜ ಸೂಚಿಸಿದ್ದಾರೆ. ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶನಾಲಯ ಹೊರಡಿಸಿರುವ ಲೆಕ್ಕಪರಿಶೋಧಕರ ಪ್ಯಾನಲ್ ಪ್ರಕಾರ ಈ ಸೂಚನೆ ನೀಡಲಾಗಿದೆ. ಈ ಪ್ಯಾನಲ್ ಅನ್ವಯ ಜಿಲ್ಲೆಯ ಸಹಕಾರ ಸಂಘಗಳು ಒಬ್ಬರು ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿಕೊಂಡು ಲೆಕ್ಕ ತಪಾಸಣೆ ಮಾಡಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಲೆಕ್ಕ ಪರಿಶೋಧನಾ ಕಾರ್ಯವು ಮುಕ್ತಾಯವಾಗದಿದ್ದರೆ ಕಾಯ್ದೆ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಚಿತ್ರಕಲಾ ಸ್ಪರ್ಧೆ
ಬಳ್ಳಾರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಬಾಲಮಂದಿರದ ಶಾಂತಿಧಾಮದ ಆವರಣದಲ್ಲಿ ಇತ್ತೀಚೆಗೆ ಬಾಲಮಂದಿರದ ಮಕ್ಕಳಿಗೆ ಪರಿಸರ ಮಾಲಿನ್ಯ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಿರ್ಮಿತಿ ಕೇಂದ್ರ, ನೋಪಾಸನಾ, ಎಸಿಸಿ ಸಿಮೆಂಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ 10ನೇ ತರಗತಿಯ ಹನುಮಂತಪ್ಪ, 9ನೇ ತರಗತಿಯ ಹುಸೇನ್ ಹಾಗೂ 9ನೇ ತರಗತಿಯ ತಮ್ಮನಹಳ್ಳಿ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಅನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶ್ರೀನಿವಾಸ ಕುಲಕರ್ಣಿ, ನೋಪಾಸನಾದ ನಿರ್ದೇಶಕ ಹಾಗೂ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಎಂ.ಎ. ಷಕೀಬ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮೊಹಮ್ಮದ್ ಸಾಬ್, ಆರ್ಕಿಟೆಕ್ಟ್ ಸಂಜೀವ್ ಪ್ರಸಾದ್ ಮತ್ತು ಸತ್ಯನಾರಾಯಣ ಉಪಸ್ಥಿತರಿದ್ದರು. ಎಸಿಸಿ ಸಿಮೆಂಟ್ ಕಂಪನಿಯ ಸಚಿನ್ ಸಾವಂತ್ ಕಾರ್ಯಕ್ರಮ ನಿರೂಪಿಸಿದರು.
ಅತ್ಯಾಚಾರ: ಆರೋಪಿ ಪರಾರಿ
ಬಳ್ಳಾರಿ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ನಗರದ ಗೌತಮ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಶಿವನಾಯ್ಕ್ (26) ಎಂಬುವವನೇ ಅತ್ಯಾಚಾರ ವೆಸಗಿದ ಯುವಕ. ಬಾಲಕಿಯ ಪೋಷಕರಿಗೆ ಅಂಗಡಿಯ ಹಣ ನೀಡಬೇಕಿದ್ದ ಶಿವನಾಯ್ಕ್ನು ನಿಮ್ಮ ಮಗಳನ್ನು ಮನೆ ಹತ್ತಿರ ಕಳುಹಿಸಿ, ಹಣ ನೀಡುತ್ತೇನೆ ಎಂದು ಹೇಳಿದ್ದಾನೆ. ಈತನ ಮಾತಿಗೆ ಬೆಲೆಕೊಟ್ಟು ಕಳುಹಿಸಿದ ಮಗಳನ್ನು ಮನೆಯೊಳಗೆ ಎಳೆದು ಬಾಗಿಲು ಹಾಕಿ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರ ನಡೆದ ದಿನ ಬಾಲಕಿ ಪೋಷಕರು ಇಲ್ಲಿನ ಗ್ರಾಮೀಣ ಠಾಣೆಗೆ ದೂರು ನೀಡಲು ಬಂದಿದ್ದರೂ ಪೊಲೀಸರು ಪೋಷಕರನ್ನು ಸುಧಾರಿಸಿ ಕಳುಹಿಸಿದ್ದಾರೆ. ಶುಕ್ರವಾರ ಪೊಲೀಸರ ಮೇಲೆ ಒತ್ತಾಯ ಹೇರಿದ್ದರಿಂದ ದೂರು ದಾಖಲಿಸಲಾಗಿದೆ. ಸದ್ಯ ನಾಪತ್ತೆಯಾಗಿರುವ ಶಿವನಾಯ್ಕ್ನನ್ನು 2 ತಂಡಗಳನ್ನು ರಚಿಸಿ, ಹೊಸಪೇಟೆ, ಸಂಡೂರುಗಳಿಗೆ ಕಳುಹಿಸಿಕೊಡಲಾಗಿದೆಂದು ಡಿವೈಎಸ್ಪಿ ರುದ್ರಮುನಿ ತಿಳಿಸಿದ್ದಾರೆ.
ಸಚಿವರಿಂದ ಜನತಾದರ್ಶನ
ಹೂವಿನಹಡಗಲಿ: ರಾಜ್ಯ ಕಾರ್ಮಿಕ ಕಲ್ಯಾಣ ಸಚಿವ ಪಿ.ಟಿ. ಪರಮೇಶ್ವರನಾಯ್ಕರವರು ಜೂ. 8, 9ರಂದು ಶನಿವಾರ ಪಟ್ಟಣದ ತಮ್ಮ ನಿವಾಸದಲ್ಲಿ ಜನತಾ ದರ್ಶನ ನಡೆಸಲಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ್ ಚಿದಾನಂದ ತಿಳಿಸಿದ್ದಾರೆ. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇದೇ ಮೊದಲ ಬಾರಿಗೆ ಸಚಿವ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪಟ್ಟಣದ ಶಾರದಮ್ಮ ಬಡವಾಣೆಯಲ್ಲಿರುವ ಸಚಿವ ನಿವಾಸದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆಯಿಂದ ಭಾನುವಾರ 1ಗಂಟೆಯವರೆಗೂ ಎರಡು ದಿನಗಳ ಕಾಲ ಕ್ಷೇತ್ರದ ಸಾರ್ವಜನಿಕರು ತಮ್ಮ ಅಹವಾಲು ನೀಡಬಹುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

