ನಿಯಮ ಉಲ್ಲಂಘನೆ: ಗುರುದೇವ, ನವಚೇತನ ಶಾಲೆಗೆ ನೋಟಿಸ್
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜೂ. 11
ಶಿಕ್ಷಣ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಗುರುದೇವ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ನವಚೇತನ ಶಾಲೆಗಳ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಕೂಡ್ಲಿಗಿ ಬಿಇಓ ಮಂಜುನಾಥ ತಿಳಿಸಿದರು.
ಮಂಗಳವಾರ ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿನ ಖಾಸಗಿ ಶಾಲೆಗಳಿಗೆ ಸೋಮವಾರ ತಾವು ಭೇಟಿ ನೀಡಿದಾಗ ಉಭಯ ಶಾಲೆಗಳಲ್ಲಿ ಈ ಬಗೆಯ ನ್ಯೂನತೆಗಳು ಕಂಡುಬಂದಿವೆ. ಅನಾವಶ್ಯಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಲಾಗಿದೆ. ಈ ಸಂಬಂಧ ಪೂರಕ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಶಾಲೆಗಳು ಸಂಪೂರ್ಣ ವಿಫಲವಾಗಿವೆ. ಶೌಚಾಲಯ ಮತ್ತು ಕುಡಿಯುವ ನೀರಿನಂತಹ ಅತ್ಯಾವಶ್ಯಕತೆಗಳನ್ನು ಪೂರೈಸುತ್ತಿಲ್ಲದಿರುವುದು ತಮ್ಮ ಭೇಟಿ ಸಮಯದಲ್ಲಿ ಗಮನಕ್ಕೆ ಬಂತು ಎಂದರು.
ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿಗೆ ಬ್ಯಾಂಕ್ ಚೆಕ್ಗಳ ಮೂಲಕ ವೇತನ ಪಾವತಿ ಮಾಡುವಂತೆ ಸೂಚಿಸಿರುವೆ. ಶಾಲಾ ಪ್ರವೇಶದ ಈ ಅವಧಿಯನ್ನು ಖಾಸಗಿ ಶಾಲೆಗಳವರು ಪಟ್ಟಣದಲ್ಲಿ ಒಂದು ಬಗೆಯ ದಂಧೆಯನ್ನಾಗಿರಿಸಿಕೊಂಡು ಹಣ ಮಾಡುವತ್ತ ಮುಂದಾಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯಕ್ರಮವನ್ನು ಮತ್ತಷ್ಟು ವಿಸ್ತರಿಸುತ್ತೇನೆ ಎಂದು ಹೇಳಿದರು.
ಕೊಟ್ಟೂರಿನ ಖಾಸಗಿ ಶಾಲಾ ವಿದ್ಯಾರ್ಥಿಗಳ ಪೋಷಕರ ಸಂಘ ನೀಡಿರುವ ದೂರಿನಲ್ಲಿ ಹೇಳಿಕೊಳ್ಳುವಂತಹ ಹುರುಳಿಲ್ಲದಿರುವುದು ಕಂಡುಬಂದಿದೆ. ನಿರ್ದಿಷ್ಟ ಶಾಲೆ ಮತ್ತು ಡೊನೇಷನ್ ತೆಗೆದುಕೊಳ್ಳುವ ಯಾವುದೇ ಸಂಖ್ಯೆ ಮತ್ತು ದಾಖಲೆಯನ್ನು ಸಂಘದವರು ನೀಡಿಲ್ಲ. ಕೇವಲ ದೂರಿನ ಆಧಾರದ ಮೇಲೆ ಯಾವ ಶಾಲೆ ಮೇಲೆ ಕ್ರಮ ಕೈಗೊಳ್ಳಬೇಕು ಎಂದ ಅವರು, ಡೊನೇಷನ್ ಬಗ್ಗೆ ಲಿಖಿತ ದೂರು ನೀಡಿದರೆ ಖಂಡಿತವಾಗಿ ಕ್ರಮ ಕೈಗೊಳ್ಳುವೆ ಎಂದರು.
ಪಠ್ಯ ಪುಸ್ತಕಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿದ್ದು, ಖಾಸಗಿ ಶಾಲೆಗಳವರು ಬೇರೆ ಪುಸ್ತಕಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಬಾರದು. ಈ ಕಾರಣಕ್ಕಾಗಿಯೇ ಪಟ್ಟಣದಲ್ಲಿನ ನವಚೇತನ ಶಾಲೆಯವರಿಗೆ ಕೂಡಲೇ ಪಠ್ಯ ಪುಸ್ತಕಗಳನ್ನು ಇಲಾಖೆಯಿಂದ ಪಡೆಯುವಂತೆ ತಾಕೀತು ಮಾಡಿರುವೆ. ಶಾಲೆಯಲ್ಲಿ ಬೇರೆ ಪಠ್ಯ ಪುಸ್ತಕಗಳನ್ನು ಮಾರಾಟ ಮಾಡುವುದು ನಿಷಿದ್ಧ. ಶಾಲೆಯ ನಿಯಮಾವಳಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಯಾವುದೇ ಹಂತದಲ್ಲಿ ಶಾಲೆಗಳನ್ನು ವ್ಯಾಪಾರದ ಸ್ಥಳವನ್ನಾಗಿಸಲು ಬಿಡುವುದಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

