ಆತ್ಮಸಾಕ್ಷಿಯಿಂದ ಕೆಲಸ ನಿರ್ವಹಿಸಿ
ಬಳ್ಳಾರಿ: ಅಧಿಕಾರಿಗಳು ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು. ಇದರಿಂದಾಗಿ ನಿಮ್ಮ ಮಕ್ಕಳು, ಕುಟುಂಬ ಚನ್ನಾಗಿರುತ್ತದೆ. ನಿಮಗೆ ಅಂತಿಮ ದಿನಗಳು ಒಳ್ಳೆಯದಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಅಧಿಕಾರಿಗಳಿಗೆ ಕಟುಮಾತಿನ ಚಾಟಿ ಬೀಸಿದ್ದಾರೆ.
ಚಟುವಟಿಕೆಯಿಂದ ಕೆಲಸ ಮಾಡದಿದ್ದರೆ ಎಲ್ಲ ಇಲಾಖೆಗಳ ಅಧಿಕಾರಿಗಳು ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ಅಧಿಕಾರಿಗಳಿಗೆ ರವಾನಿಸಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಅಗತ್ಯ ಬೀಜ, ರಸಗೊಬ್ಬರ ಬೇಕಿರುತ್ತದೆ. ಹೀಗಾಗಿ ಶಾಲೆಗಳು ಗಂಟೆ ಹೊಡೆದಂತೆ ಕೆಲಸ ಮಾಡಬೇಡಿ, ಒಂದು ತಿಂಗಳ ಅವಧಿಗಾದರೂ ಹೆಚ್ಚಿನ ಕೆಲಸ ನಿರ್ವಹಿಸಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ಇರುವುದೇ ಸಾರ್ವಜನಿಕರ ಸೇವೆಗಾಗಿ. ಅವರ ತೆರಿಗೆ ಹಣವೇ ಅಧಿಕಾರಿಗಳಿಗೆ ವೇತನ. ಅದ್ದರಿಂದ ಅಧಿಕಾರಿಗಳು ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಚೇರಿಯಲ್ಲಿ ಕೂಡಬೇಡಿ: ಕೇವಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡದೆ, ಪ್ರವಾಸ ಕೈಗೊಂಡು, ಕ್ರೀಯಾಶೀಲರಾಗಿ ಕೆಲಸ ಮಾಡಬೇಕು. ಅಂದಾಗ ಮಾತ್ರ ಯೋಜನೆಗಳ ಅನುಷ್ಠಾನದಲ್ಲಿನ ಗೊಂದಲ, ತೊಂದರೆ, ವಾಸ್ತವತೆ ಅರಿಯಲು ಸಾಧ್ಯ.ಪ್ರವಾಸದ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಇನ್ನು ಕೆಳಗಿನ ಅಧಿಕಾರಿಗಳ ಚಲನವಲನದ ಬಗ್ಗೆ ಇರುವ ಪುಸ್ತಕವನ್ನು ಸರಿಯಾಗಿ ನಿರ್ವಹಿಸಿ, ಡಿಸಿ, ಎಸ್ಪಿ, ಸಿಇಓ ಹಾಗೂ ಸಚಿವರು ಕೇಳಿದಾಗ ತೋರಿಸಬೇಕು ಎಂದು ಸೂಚನೆ ನೀಡಿದರು.
ತಪ್ಪು ದಾರಿಗೆ ಎಳೆಯಬೇಡಿ: ತಮಗೆ ತಪ್ಪು ಮಾಹಿತಿ ನೀಡಿ, ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಬೇಡಿ. ತಾವು 25 ವರ್ಷಗಳ ಕಾಲ ಸಾರ್ವಜನಿಕ ಸೇವೆಯಲ್ಲಿದ್ದೇನೆ. ಎಲ್ಲ ವಿಷಯಗಳನ್ನು ಬಲ್ಲವನಾಗಿದ್ದೇನೆ. ಒಂದು ಅಥವಾ ಎರಡು ಸಾರಿ ತಪ್ಪು ಹೇಳಿ ತಪ್ಪಿಸಿಕೊಳ್ಳಬಹುದು, ಪ್ರತಿಬಾರಿ ತಪ್ಪು ಹೇಳಲು ಸಾಧ್ಯವಿಲ್ಲ. ಹಗಲು ಹೊತ್ತು ಕಣ್ಣಿಗೆ ಬಟ್ಟೆ ಕಟ್ಟುವುದಕ್ಕೆ ಬರಬೇಡಿ ಎಂದು ಕೆಲ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಡಿಸಿಯನ್ನು ಹೊಗಳಿದ ಸಚಿವರು: ಬಳ್ಳಾರಿ ಜಿಲ್ಲಾಧಿಕಾರಿ ಬಿಸ್ವಾಸ್ ಅವರ ಬಗ್ಗೆ ಮುಖ್ಯಮಂತ್ರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹ ಡಿಸಿ ಇರುವುದರಿಂದಲೇ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಜಿಲ್ಲಾಧಿಕಾರಿಗಳು ಬೇಕಾಗಿದ್ದಾರೆ. ದಿನಕ್ಕೆ ಸುಮಾರು 16 ತಾಸು ಚೆನ್ನಾಗಿ ಓದಿ ಜಿಲ್ಲಾಧಿಕಾರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಪಂಚಾಯಿತಿ ಸಿಇಓ ಮಂಜುನಾಥ್ ನಾಯಕ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

