ಬಳ್ಳಾರಿ

ಟಿಬಿ ಡ್ಯಾಂ: ಸಮರ್ಪಕ ಬಳಕೆಗೆ ನಿರ್ಣಯ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 18
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ ಪರ್ಯಾಯವಾಗಿ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಕೆಲ ನಿರ್ಣಯ ಕೈಗೊಂಡಿದ್ದು, ಇವುಗಳ ಬಗ್ಗೆ ಜೂ. 23ರಂದು ನೀರಾವರಿ ಸಚಿವರನ್ನು ಭೇಟಿ ಮಾಡಿ ನೀರಿನ ಸಮಸ್ಯೆಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತುಂಗಭದ್ರಾ ಜಲಾಶಯ ಅಧ್ಯಯನ ಸಮಿತಿ ಸಂಚಾಲಕ ಎನ್. ಪ್ರತಾಪ ರೆಡ್ಡಿ, ನೀರಾವರಿ ತಜ್ಞ ಕೆ.ಎಂ. ರುದ್ರಸ್ವಾಮಿ, ಗೋವಿಂದರಾಜುಲು   ತಿಳಿಸಿದರು.
ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಆಂಧ್ರಪ್ರದೇಶದ ಕೆಲ ಜಿಲ್ಲೆಗಳಿಗೆ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜೂ. 15ರಂದು ವಿಚಾರ ಸಂಕಿರಣ ನಡೆದು, ಸಮಸ್ಯೆ ಪರಿಹಾರಕ್ಕೆ ಕೆಲ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯಗಳ ಕುರಿತು ನೀರಾವರಿ ಸಚಿವರಿಗೆ ತಿಳಿಸಿ, ಅನಂತರ ಸಚಿವರೊಂದಿಗೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ, ಎರಡು ರಾಜ್ಯಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆ ಇತ್ಯಾರ್ಥಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಹೂಳು ತೆಗೆಯಲು ಕಷ್ಟ: ಜಲಾಶಯದ ಹೂಳೆತ್ತಬೇಕೆಂಬ ಚರ್ಚೆ ಸರ್ಕಾರ ಮಟ್ಟದಲ್ಲಿ ನಡೆದಿತ್ತು. ಆದರೆ ಹೂಳು ತೆಗೆಯುವುದು ಕಷ್ಟವಾಗಿರುವ ಜತೆಗೆ ದುಬಾರಿಯಾಗುವ ಹಿನ್ನೆಲೆಯಲ್ಲಿ, ಜಲಾಶಯದ ನೀರು ಸದುಪಯೋಗ ಪಡೆಸಿಕೊಳ್ಳುವ ನಿಟ್ಟಿನಲ್ಲಿ ಪರ್ಯಾ ಯ ಮಾರ್ಗಗಳಿರುವುದರಿಂದ ಹೂಳೆತ್ತುವುದನ್ನು ಕೈ ಬಿಟ್ಟು ಪರ್ಯಾಯ ಮಾರ್ಗದ ಕುರಿತು ಸರ್ಕಾರ ಆಲೋಚಿಸಿ, ಅದನ್ನು ಅನುಷ್ಠಾನಗೊಳಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು. ಜಲಾಶಯವನ್ನು ಎತ್ತರಗೊಳಿಸುವುದು ಕೂಡ ತಾಂತ್ರಿಕ ದೃಷ್ಟಿಯಿಂದ ಕಷ್ಟ ಎಂದು ನೀರಾವರಿ ತಜ್ಞರಾದ ರುದ್ರಸ್ವಾಮಿ ಹಾಗೂ ಗೋವಿಂದಲು ತಿಳಿಸಿದರು.
ಕೈಗೊಂಡ ನಿರ್ಣಯಗಳು: ಜಲಾಶಯ ಒಟ್ಟು 1,633 ಅಡಿಗಳಿದ್ದು, ಅದರಲ್ಲಿ 1,590 ಅಡಿಗಳಷ್ಟು ನೀರು ಬಂದ ನಂತರ, ಎಲ್ಎಲ್ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು.
1,605 ಅಡಿ ನೀರು ತಲುಪಿದಾಗ ಎಚ್ಎಲ್ ಕಾಲುವೆಗಳಿಗೆ ನೀರು ಬಿಡಬೇಕು. ಅಂದಾಗ ಮಾತ್ರ ಜಲಾಶಯದಲ್ಲಿ ಕೊಂಚ ಮಟ್ಟಿಗಾದರೂ ನೀರು ಸಂಗ್ರಹಿಸಿ, ನಂತರದ ದಿನಗಳಲ್ಲಿ ನೀರು ಬಳಕೆ ಮಾಡಿಕೂಳ್ಳಲು ಸಾಧ್ಯವಾಗುತ್ತದೆ. ಎಲ್ಎಲ್ಸಿನಲ್ಲಿ ಆಂಧ್ರಪ್ರದೇಶ ಹಾಗೂ ಕರ್ನಾಟಕ ಇಂಡೆಂಟ್ನ್ನು ಒಟ್ಟಿಗೆ ಕೊಡಬೇಕಾಗುತ್ತದೆ. ಯಾವುದೇ ಕಾರಣಕ್ಕೆ ಎರಡು ರಾಜ್ಯಗಳು ಇಂಡೆಂಟ್ ಹಿಂದಕ್ಕೆ ಪಡೆಯಲು ಬೋರ್ಡ್ ಅನುಮತಿ ನೀಡಬಾರದು ಎಂದು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಅಕ್ಟೋಬರ್ರೊಳಗೆ ಕೈಗಾರಿಕೆಗೆ ನೀರು: ಬಳ್ಳಾರಿ ಜಿಲ್ಲೆಯಲ್ಲಿರುವ ಕೈಗಾರಿಗಳಿಗೆ ಅಕ್ಟೋಬರ್ 30ರೊಳಗೆ ಮಾತ್ರ ಜಲಾಶಯದ ನೀರನ್ನು ಕೊಡಬೇಕು. ಆಕ್ಟೋಬರ್ ನಂತರ ರೈತರಿಗೆ ನೀರು ಅಗತ್ಯವಿರುವುದರಿಂದ ನೀರಿನ ಸಮಸ್ಯೆ ಉದ್ಭವಿಸಿಸುತ್ತದೆ. ಹೀಗಾಗಿ ಕೈಗಾರಿಕೆಗಳಿಗೆ ನೀರು ಕೊಡಬಾರದು.
ಈಗಿರುವ ಹಳೇ ವಿಜಯನಗರ ಕಾಲುವೆ ದುರಸ್ತಿಯನ್ನೇ ಕಂಡಿಲ್ಲ. ಕಾಲುವೆಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ಎಡದಂಡೆ ಕಾಲುವೆ, ಎಚ್ಎಲ್ಸಿ, ಎಲ್ಎಲ್ಸಿ ಮೂಲಕ, ಅಲ್ಲದೇ ನದಿ ಮುಖಾಂತರ ನೀರನ್ನು ಪೂರೈಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಕೆನಾಲ್ ನಿರ್ಮಾಣ ಅಗತ್ಯ: ಸರಿಯಾಗಿ ನೀರನ್ನು ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ನೀರ್ಗಂಟಿಗಳನ್ನು ನೇಮಕ ಮಾಡಿಕೊಳ್ಳಬೇಕು. ಪ್ಲೆಡ್ ಪ್ಲೋ ಕೆನಾಲ್ ನಿರ್ಮಾಣ ಮಾಡಿ, ನೀರನ್ನು ಸಂಗ್ರಹಿಸಲು ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳಲ್ಲಿ ಸೂಕ್ತ ಪ್ರದೇಶಗಳನ್ನು ಗುರುತಿಸಿ, ಅವುಗಳನ್ನು ನಿರ್ಮಿಸಬೇಕು.  ಸಂಗ್ರಹವಾದ ನೀರನ್ನು 2 ರಾಜ್ಯಗಳಿಗೆ ನಿಗದಿಯಂತೆ ನೀರು ಹಂಚಿಕೆ ಮಾಡಿಕೊಳ್ಳುವುದು, ಜಲಾಶಯದಲ್ಲಿ ಪ್ರತಿವರ್ಷ 0.5 ಟಿಎಂಸಿಗಿಂತ ಹೆಚ್ಚಿನ ಹೂಳು ತುಂಬುವುದರಿಂದ ಹೂಳು ಸಂಗ್ರಹವಾಗದಂತೆ ತಡೆಗಟ್ಟಲು ಜಲಾಶಯಕ್ಕೆ ನೀರು ಬಂದು ಸೇರುವ ಸ್ಥಳದಲ್ಲಿ ಬೆಂಬುಗಳನ್ನು ಬೆಳೆಸಿ ಹೂಳನ್ನು ತಡೆಗಟ್ಟಬಹುದು.
ನದಿ ಪಾತ್ರದಲ್ಲಿ ಮಣ್ಣು ಸಂರಕ್ಷಣೆ ಮಾಡಬೇಕೆಂದು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಇವುಗಳ ಅನುಷ್ಠಾನದ ಕುರಿತು ಸಚಿವ, ಸಿಎಂ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ನಂತರ 2 ರಾಜ್ಯಗಳ ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.