ಬಳ್ಳಾರಿ

ವಸತಿ ಯೋಜನೆ ಅವ್ಯವಹಾರ: ಶಾಸಕ ಗರಂ

Published On :

ಹಗರಿಬೊಮ್ಮನಹಳ್ಳಿ: ತಾಲೂಕಿನ ಅಂಬಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದವರನ್ನು ಎಸ್ಟಿ ವರ್ಗಕ್ಕೆ ಸೇರಿದವರೆಂದು ಸುಳ್ಳು ಹೇಳಿ ಅವರನ್ನು ಫಲಾನುಭವಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಸತ್ಯವನ್ನು ಶಾಸಕ ಭೀಮಾನಾಯ್ಕ ಬಹಿರಂಗ ಪಡಿಸಿದರು.
ತಾಪಂ ಸಭಾಂಗಣದಲ್ಲಿ ಜರುಗಿದ ಕ್ಷೇತ್ರ ಮಟ್ಟದ ಅಧಿಕಾರಿಗಳ ಮತ್ತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಂಬಳಿ ಪಂಚಾಯಿತಿಗೆ ಸಂಬಂಧ ಪಡದ ಹೂವಿನಹಡಗಲಿ, ಕೂಡ್ಲಿಗಿ, ಹರಪ್ಪನಹಳ್ಳಿ ಹಾಗೂ ಹೊಸಪೇಟೆ ತಾಲೂಕಿನ ಕಮಾಲಾಪುರಕ್ಕೆ ಸೇರಿದವರನ್ನು ಗ್ರಾಮ ಸಭೆಯಲ್ಲಿ ಸ್ಥಳೀಯರೆಂದು ನಮೂದಿಸಿ, ಅವರನ್ನು ಫಲಾನುಭವಿಗಳನ್ನಾಗಿಸಲಾಗಿದೆ. ಈ ರೀತಿ ವಸತಿ ಯೋಜನೆಯ ಅವ್ಯವಹಾರಗಳು ನಡೆದಿವೆ ಎಂದು ಕಿಡಿಕಾರಿದರು.
ಜೂನ್ 16ರಂದು ಅಂಬಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಅವ್ಯವಹಾರಗಳ ಬಗ್ಗೆ ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದ್ದಾರೆ. ಅಂಕಿ-ಅಂಶ ಪರಿಶೀಲಿಸಿದಾಗ ಗ್ರಾಮಸ್ಥರು ಮಾಡಿರುವ ಆರೋಪ ಮೇಲ್ನೋಟಕ್ಕೆ ಸತ್ಯ ಎಂದು ಕಾಣಿಸುತ್ತಿದೆ. ಪರಿಶಿಷ್ಟ ಪಂಗಡಕ್ಕೆ ಬಂದ ಸೌಲಭ್ಯಗಳನ್ನು ಕಬಳಿಸುವ ಸಲುವಾಗಿಯೇ ಸಾಮಾನ್ಯ ವರ್ಗದವರನ್ನು ಎಸ್ಟಿ ಎಂದು ದಾಖಲಿಸಿ ಫಲಾನುಭವಿಯಾಗಿ ಆಯ್ಕೆ ಮಾಡಿದ್ದೀರಲ್ಲ ನಿಮಗೆ ನಾಚಿಕೆಯಾಗಲ್ವೆ? ಒಂದು ವರ್ಗಕ್ಕಿರುವ ಸೌಲಭ್ಯವನ್ನು ಕಬಳಿಸಲು ನಿಮಗೆ ಅಧಿಕಾರ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದರು.
ಕಳ್ಳ ವ್ಯವಹಾರ ಇಲ್ಲ: ಜುಲೈನಲ್ಲಿ ಎಲ್ಲ ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ರುಪಾಯಿಗೆ ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ಸರ್ಕಾರದ ಈ ಯೋಜನೆ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು. ಒಂದು ವೇಳೆ ಅಕ್ಕಿಯಲ್ಲಿ ಏನಾದರೂ ಕಳ್ಳ ವ್ಯವಹಾರ ಕಂಡುಬಂದರೆ ಅದಕ್ಕೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆಹಾರ ನಿರೀಕ್ಷಿಕರಿಗೆ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಅಸಹಾಯಕತೆ: ತಾಲೂಕಿನಲ್ಲಿ ಮರಳು ಅಕ್ರಮ ಸಾಗಾಟಕ್ಕೆ ಸಾಕಷ್ಟು ನಿಯಂತ್ರಣ ಹಾಕಲಾಗಿದೆ. ಆದರೂ ಮರಳು ಸಾಗಾಟ ನಡೆಯುತ್ತಿದೆ. ಒಂದು ಟ್ರಿಪ್‌ಗೆ ಅವಕಾಶ ಪಡೆದು ಐದಾರು ಟ್ರಿಪ್ ಮರಳು ಸಾಗಾಟ ಮಾಡಲಾಗುತ್ತಿದೆ. ಇಷ್ಟು ಅಕ್ರಮ ನಡೆಯುತ್ತಿದ್ದರೂ ಲೋಕೋಪಯೋಗಿ ಇಲಾಖೆಯವರು ಸುಮ್ಮನಿದ್ದಾರೆ. ಮರಳು ಅಕ್ರಮ ಸಾಗಾಟದ ವಾಹನಗಳನ್ನು ನಾನೇ ಹಿಡಿಯಬೇಕಾದ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ ಎಂದು ಸಭೆಯಲ್ಲಿ ತಹಸೀಲ್ದಾರ್ ನಾಗರಾಜ ಭಟ್ ತಮ್ಮ ಅಸಹಾಯಕತೆ ತೋಡಿಕೊಂಡರು.
ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯಾನಾಯ್ಕ, ಜಿಪಂ ಸದಸ್ಯೆ ಕರಿಬಸವನಗೌಡ್ರ ರತ್ನಮ್ಮ, ರೋಗಾಣಿ ಹುಲುಗಪ್ಪ, ತಿಪ್ಲಿಬಾಯಿ, ತಾಪಂ ಉಪಾಧ್ಯಕ್ಷೆ ಕುರುಬರ ನಾಗರತ್ನಾ, ಸದಸ್ಯ ಉಪ್ಪಾರ ಬಾಲಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ಸುಲೋಚನಾ, ತಾಪಂ ಇಓ ಜಿ. ಗೋಪ್ಯಾನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.