ಲಾಳಗೊಂಡ ಸಮಾಜದಿಂದ ಶಾಸಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 29
ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಸಮಾಜದಲ್ಲಿ ಹುಟ್ಟಿದ ಡಾ. ಶಿವರಾಜ್ ಪಾಟೀಲ್ ರಾಯಚೂರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಟೀಲ್ ಸೇರಿದಂತೆ ಬಳ್ಳಾರಿ ಜಿಲ್ಲೆಯ ಶಾಸಕರು ಹಾಗೂ ಸಂಸದರಿಗೆ ಜು. 1ರಂದು ನಗರದ ಬಸವ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಖಿಲ ಕರ್ನಾಟಕ ಲಾಳಗೊಂಡ ಸಂಘದ ಜಿಲ್ಲಾಧ್ಯಕ್ಷ ಎಂ.ಎಸ್. ಸೋಮಲಿಂಗನಗೌಡ, ಗೌರವಾಧ್ಯಕ್ಷ ಕೆ. ಚೆನ್ನಪ್ಪ ತಿಳಿಸಿದರು.
ನಗರದ ಪೊಲೀಸ್ ಜಿಮಖಾನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದಿರುವ ಲಾಳಗೊಂಡ ಸಮಾಜ ಇತ್ತೀಚಿನ ದಿನಗಳಲ್ಲಿ ಮುಖ್ಯವಾಹಿನಿಗೆ ಬರುತ್ತಿರುವುದು ಸಂತಸದ ಸಂಗತಿ. ಲಾಳಗೊಂಡರು ಎಲ್ಲ ಕ್ಷೇತ್ರದಲ್ಲಿ ಹಿಂದುಳಿದಿದ್ದು, ಇದೀಗ ರಾಜಕೀಯವಾಗಿ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದ್ದಾರೆ. ಮತ್ತಷ್ಟು ರಾಜಕೀಯ ಹಾಗೂ ಆರ್ಥಿಕವಾಗಿ ಬೆಳೆಯಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪೀಠ ಸ್ಥಾಪನೆ: ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಲಾಳಗೊಂಡ ಸಮಾಜದವರು ಇದ್ದರೂ, ರಾಜಕೀಯದಿಂದ ದೂರು ಇತ್ತು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ಲಾಳಗೊಂಡ ಪೀಠ ಸ್ಥಾಪನೆ ಬಗ್ಗೆ ಚಿಂತನೆ ನಡೆಯುತ್ತಿದೆ. ಇನ್ನು ವೀರಶೈವ ಸಮಾಜದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯ ಒದಗಿಸಲು ವಸತಿ ನಿಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಜನಪ್ರತಿನಿಧಿಗಳಿಗೆ ಸನ್ಮಾನ: ಶಾಸಕರಾಗಿ ಆಯ್ಕೆಯಾದ ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಸಂಸದರಾದ ಜೆ. ಶಾಂತಾ, ಶಿವರಾಮೇಗೌಡ, ಶಾಸಕರಾದ ಅನಿಲ್ ಲಾಡ್, ಶ್ರೀರಾಮುಲು, ಬಿ.ಎಂ. ನಾಗರಾಜ್, ಈ. ತುಕಾರಾಂ, ಆನಂದ್ ಸಿಂಗ್, ಬಿ. ನಾಗೇಂದ್ರ, ಭೀಮಾನಾಯ್ಕ, ಸುರೇಶ್ಬಾಬು ಸೇರಿದಂತೆ ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಅವರನ್ನು ಸನ್ಮಾನಿಸಲಾಗುವುದು ಎಂದರು.
ಹಂಪಿ ಹೇಮಕೂಟದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಹಾಲ್ವಿ-ಕರ್ಚಿಗನೂರಿನ ಚರಣಗಿರಿ ಶಿವಯೋಗಿಶ್ವರ ಮಠದ ಅಭಿನವ ಮಹಾಂತ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಎಮ್ಮಿಗನೂರಿನ ವಾಮದೇವ ಮಹಾಂತ ಶಿವಾಚಾರ್ಯರು, ಬಳ್ಳಾರಿ ಕಲ್ಯಾಣ ಸ್ವಾಮೀಜಿ, ಸಂಡೂರಿನ ಪ್ರಭುಸ್ವಾಮಿಗಳು, ಕಂಪ್ಲಿಯ ಅಭಿನವ ಪ್ರಭುಸ್ವಾಮೀಜಿ, ರಾಯಚೂರಿನ ನಿಜಾನಂದ ಸ್ವಾಮೀಜಿ, ಅರಳಿಹಳ್ಳಿಯ ಗವಿಸಿದ್ದಯ್ಯ ತಾತನವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಲಾಳಗೊಂಡ ಸಂಘದ ರಾಜ್ಯಾಧ್ಯಕ್ಷ ಅರವಿ ಬಸವನಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಘದ ಜಿಲ್ಲಾಧ್ಯಕ್ಷ ಪಿ.ಎಸ್. ಸೋಮಲಿಂಗನಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ವಿವಿಧ ಕಾರ್ಯಕ್ರಮ: ಕಾರ್ಯಕ್ರಮದಲ್ಲಿ ಗೊಂಡಿ ಭಾಷೆಯಿಂದ ಸಿಂಧು ರಹಸ್ಯ ಲಿಪಿಯ ಶೋಧ ಮತ್ತು ಓದು, ಗೊಂಡ್ವಾನ ಸಂಸ್ಕೃತಿ ಅರ್ಥಾತ್ ಸಿಂಧು ಸಂಸ್ಕೃತಿ ಪುಸ್ತಕವನ್ನು ಪೂಜ್ಯರು ಬಿಡುಗಡೆ ಮಾಡಲಿದ್ದಾರೆ. ಯಲ್ಲನಗೌಡ ಶಂಕರಬಂಡೆ ತಂಡ ಸಾಮೂಹಿಕ ವಚನ ಗಾಯನ ನಡೆಸಿಕೊಡಲಿದೆ ಎಂದರು.
ಸಂಘದ ಶಾಂತನಗೌಡ, ವೀರಭದ್ರಗೌಡ, ಉಮಾಪತಿಗೌಡ, ಭೀಮನಗೌಡ, ಶ್ರೀಧರಗೌಡ, ಜಡೇಗೌಡ, ದಿವಾಕರಗೌಡ, ತಿಪ್ಪನಗೌಡ, ಪಂಪನಗೌಡ, ದಯಾಕರಗೌಡ, ರಾಜೇಗೌಡ, ಬಸವರಾಜಗೌಡ, ಮಲ್ಲಿಕಾರ್ಜುನಗೌಡ, ಬೆಳಗಲ್ ಅಮರೇಶ್ ಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

